ಅಡಕೆ ಕೊಳೆರೋಗ: ವಿಶೇಷ ಪ್ಯಾಕೇಜ್‌ಗೆ ರಾಜೇಂದ್ರ ಕುಮಾರ್ ಆಗ್ರಹ
ಮಂಗಳೂರು: ಮೇ ತಿಂಗಳಾಂತ್ಯದಲ್ಲಿ ಆರಂಭವಾದ ಮಳೆ ಜಿಲ್ಲೆಯಲ್ಲಿ ಇದುವರೆಗೂ ಸರಿಯಾಗಿ ಬಿಟ್ಟಿಲ್ಲ. ಇದರಿಂದ ಅಡಕೆ ತೋಟಕ್ಕೆ ಔಷಧ ಸಿಂಪಡಿಸಲು ಸಾಧ್ಯವಾಗದೆ ಅಡಕೆಗೆ ವ್ಯಾಪಕವಾಗಿ ಕೊಳೆರೋಗ ತಟ್ಟಿದೆ. ಈ ಬಗ್ಗೆ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಸಮಗ್ರ ಮಾಹಿತಿ ಕಲೆಹಾಕಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು. ರಾಜ್ಯ ಸರ್ಕಾರ ಅಡಕೆ ಬೆಳೆಗಾರರಿಗೆ ವಿಶೇಷ ಪ್ಯಾಕೆಜ್ ನೀಡಬೇಕು ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಆಗ್ರಹಿಸಿದ್ದಾರೆ.
ಸೋಮವಾರ ಬ್ಯಾಂಕಿನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಶಾಸಕರು, ಸಚಿವರು, ಸಂಸದರು ಸರ್ಕಾರಕ್ಕೆ ಒತ್ತಡ ತರಬೇಕು ಎಂದು ಹೇಳಿದರು.
ಈಗಾಗಲೇ ಕೊಳೆರೋಗದಿಂದ ಶೇ.50 ಫಸಲು ಹಾನಿ ಅಂದಾಜಿಸಲಾಗಿದೆ. ರೈತರಿಗೆ ಒಂದು ಎಕರೆ ಅಡಕೆ ತೋಟ ನಿರ್ವಹಣೆಗೆ ರು. 50 ಸಾವಿರದಿಂದ ರು. 60 ಸಾವಿರ ವರೆಗೆ ವೆಚ್ಚ ತಗಲುತ್ತದೆ. ಫಸಲು ಉತ್ತಮವಾಗಿದ್ದರೆ ಸರಾಸರಿ ರು. 1.25 ಲಕ್ಷ ಆದಾಯ ಬರುತ್ತದೆ. ಈ ಬಾರಿ ಅಧಿಕ ಮಳೆಯಿಂದ ಈ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ. ಆದ್ದರಿಂದ ಅಡಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಡಕೆ ಬೆಳೆಗೆ 80 ಸಾವಿರ ರೈತರಿಗೆ ಎಕರೆಗೆ ಸುಮಾರು ರು. 35 ಸಾವಿರದಂತೆ 141281 ಎಕರೆಗೆ ರು. 49,443.26 ಸಾಲ ನೀಡಿದೆ. ಅಡಕೆಗೆ ಕೊಳೆರೋಗದಿಂದ ಈ ಬಾರಿ ರೈತರಿಗೆ ಸಾಲ ಮರುಪಾವತಿ ಸುಲಭವಲ್ಲ. ಆದ್ದರಿಂದ ಇಲಾಖೆಗಳು ಕೊಳೆರೋಗ ನಷ್ಠವನ್ನು ಸಮೀಕ್ಷೆ ಮಾಡಿ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಕೈಗಾರಿಕೆ ಭದ್ರತಾ ಪಡೆ, ಸ್ಥಳೀಯರ ಹಲ್ಲೆ
ಮಂಗಳೂರು: ಕ್ವಾಟ್ರಸ್ ನಿರ್ಮಿಸುವ ವಿಚಾರದಲ್ಲಿ ಎಂಆರ್‌ಪಿಎಲ್‌ನ ಭದ್ರತಾಪಡೆ ಮತ್ತು ಸ್ಥಳೀಯರ ಮಧ್ಯೆ ಹಲ್ಲೆ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಕುತ್ತೆತ್ತೂರಿನಲ್ಲಿ ಕ್ವಾಟ್ರಸ್ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಸಿಟ್ಟಾದ ಸಿಐಎಸ್‌ಎಫ್(ಕೈಗಾರಿಕಾ ಭದ್ರತಾಪಡೆ)ಯೋಧರು ಸ್ಥಳೀಯರ ಮೇಲೆ ಏರಿ ಹೋಗಿದ್ದಾರೆ. ಘಟನೆಯಲ್ಲಿ ಸ್ಥಳೀಯರ ಬೈಕ್, ಕಾರು ಪುಡಿಯಾಗಿದೆ. ಸುಮಾರು 20ರಿಂದ 25 ಮಂದಿ ಯೋಧರು ಸೇರಿ ಹಲ್ಲೆ ನಡೆಸಿದ್ದಾರೆ. ಘಟನೆ ವೇಳೆ ಸ್ಥಳೀಯರೂ ಪ್ರತಿ ಹಲ್ಲೆ ನಡೆಸಿದ್ದು, ಆಸೀಫ್, ನಝೀರ್, ಜೋಯ್ಸ್, ಉಲ್ಲಾಸ್ ಕುಮಾರ್ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಇತ್ತಂಡ ಪ್ರಕರಣ ದಾಖಲಾಗಿದೆ.
ರೈಲು ಹಳಿಗೆ ಸಿಲುಕಿ ಸಾವು
ಮಂಗಳೂರು: ತೊಕ್ಕೊಟ್ಟಿನಲ್ಲಿ ರೈಲು ಹಳಿಗೆ ಸಿಲುಕಿ ಅಪರಿಚಿತ ವ್ಯಕ್ತಿ(35-40) ಮೃತಪಟ್ಟ ಘಟನೆ ಸೋಮವಾರ ವರದಿಯಾಗಿದೆ. ಬೆಳಗ್ಗೆ 8 ಗಂಟೆಗೆ ಹಳಿಯಲ್ಲಿ ಅಪರಿಚಿತ ಶವ ಕಂಡುಬಂದಿದೆ. ಶವದ ಹಣೆಯಲ್ಲಿ ಏಟಿನ ಗುರುತಿದ್ದು, ಚಲಿಸುವ ರೈಲಿಗೆ ಸಿಲುಕಿ ಮೃತಪಟ್ಟಿದ್ದಾಗಿ ರೇಲ್ವೆ ಪೊಲೀಸರು ತಿಳಿಸಿದ್ದಾರೆ. ಮೃತನ ಅಂಗಿ ಕಿಸೆಯಲ್ಲಿ ಗುರುತಿನ ಚೀಟಿ ದೊರೆತಿದ್ದು, ಆತ ಒರಿಸ್ಸಾದ ಕೂಲ್‌ಕೇಲಾ ನಿವಾಸಿಯಾಗಿದ್ದು, ಬಸಂತ್ ಕೆ.ಎಂ.ಸಾಥಿ ಎಂದು ಹೆಸರು ಇದೆ. ಈ ಹೆಸರಿನ ವ್ಯಕ್ತಿ ಈತನೇ ಎಂಬುದು ಸ್ಪಷ್ಟವಾಗಿಲ್ಲ. ಈತ ಕಾರ್ಮಿಕನಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಶವವನ್ನು ನಗರದ ವೆನ್ಲಾಕ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ರೇಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.