ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅನಾರೋಗ್ಯ ಡಂಪ್ ಮಾಡುವ ಡಂಪಿಂಗ್ ಯಾರ್ಡ್!

Srinivasa Murthy VN
Updated On : 13 Aug 2013, 11:37 am

ಆತ್ಮಭೂಷಣ್
ಮಂಗಳೂರು: ಬಾತುಕೊಂಡ ಕಾಲುಗಳು, ಅಲ್ಲಲ್ಲಿ ಸೋರುತ್ತಿರುವ ಕಜ್ಜಿ... ಎಲ್ಲಿ ನೋಡಿದರೂ ಕಾಣಿಸುವ ಜ್ವರಪೀಡಿತರು... ಕುಡಿಯಲು ಶುದ್ಧನೀರಿನ ಕೊರತೆ... ಪರಿಸರವಿಡೀ ದುರ್ನಾತ.
ಇದು ಪಚ್ಚನಾಡಿ ಡಂಪಿಂಗ್ ಯಾರ್ಡ್ ಮಹಿಮೆ. ಪಚ್ಚನಾಡಿ ಪರಿಸರದ ಗ್ರಾಮಸ್ಥರನ್ನು ಡಂಪಿಂಗ್ ಯಾರ್ಡ್ ಹಿಂಡಿ ಹಿಪ್ಪೆ ಮಾಡುತ್ತಿರುವ ಚಿತ್ರಣವಿದು. ಪಚ್ಚನಾಡಿಯಲ್ಲಿ ಕಸ, ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಒತ್ತಾಯಿಸುವ ಸ್ಥಳೀಯರ ಕೂಗು ಅರಣ್ಯರೋದನ. ಇದರ ಪರಿಣಾಮವೇ ಕಲುಷಿತ, ಅಸಹ್ಯ ವಾತಾವರಣ. ಪಚ್ಚನಾಡಿ ಡಂಪಿಂಗ್ ಯಾರ್ಡ್ ಸುತ್ತಲಿನ ಪರಿಸರದಲ್ಲಿ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.
ಆತನ ಹೆಸರು ಬಾಬು. ಡಂಪಿಂಗ್ ಯಾರ್ಡ್‌ನಲ್ಲಿ ಕಾವಲು ಕಾಯುತ್ತಿದ್ದ. ಕಳೆದ ತಿಂಗಳಿಂದ ಕೆಲಸ ಬಿಟ್ಟಿದ್ದಾನೆ. 'ದಿನದ 12 ಗಂಟೆ ಗಾಳಿಮಳೆ ಎನ್ನದೆ ನಿಂತುಕೊಂಡು ಕೆಲಸ ಮಾಡಿದ ಪರಿಣಾಮ ಕಾಲು ಬಾತಿದೆ. ನಡೆಯಲು ಸರಿಯಾಗಿ ಆಗುತ್ತಿಲ್ಲ. ಹಾಗಾಗಿ ಕೆಲಸ ಬಿಡಬೇಕಾಯಿತು' ಎನ್ನುತ್ತಾರೆ. 'ಮಾಸಿಕ ರು. 7 ಸಾವಿರದಲ್ಲಿ ಪ್ರೀಮಿಯರ್ ಭದ್ರತಾ ಏಜೆನ್ಸಿಯವರು ನಮಗೆ ಕೊಡುತ್ತಿದ್ದುದು ರು. 4,200 ಮಾತ್ರ. ಮನೆಯಲ್ಲಿ ಮಕ್ಕಳಿದ್ದರೂ ಸರಿಯಾದ ಕೆಲಸವಿಲ್ಲ, ಪತ್ನಿಗೆ ಅನಾರೋಗ್ಯ. ಈಗ ಕೆಲಸ ಇಲ್ಲ, ಇನ್ನು ಅನಾರೋಗ್ಯಕ್ಕೆ ಔಷಧಿಗೆ ಹಣಬೇಕು. ಮುಂದೆ ಜೀವನ ಹೇಗೆಂದು ತೋಚುತ್ತಿಲ್ಲ' ಎನ್ನುತ್ತಾರೆ ಬಾಬು.
ಕಾವಲುಗಾರರ ಕಾಯೋರಿಲ್ಲ: ಡಂಪಿಂಗ್ ಯಾರ್ಡ್ ಕಾವಲು ಸಿಬ್ಬಂದಿ ಸಚೇಂದ್ರಗೂ ಕಾಲುಬಾವು ತೊಂದರೆ. ದಿನಪೂರ್ತಿ ಯಾರ್ಡ್ ಗೇಟಿನ ಬಳಿ ನಿಲ್ಲುತ್ತಾರೆ. ಯಾರ್ಡ್‌ಗೆ ಬಂದುಹೋಗುವ ಲಾರಿಗಳು 70 ಟ್ರಿಪ್ ಮಾಡುತ್ತವೆ. ಅವುಗಳಿಗೆ ಗೇಟ್ ತೆಗೆದು ಹಾಕಿ ಮಾಡಿದಾಗ ಸಾಕಾಗುತ್ತದೆ. ಕುಳಿತುಕೊಳ್ಳಲು ಶೆಡ್ ಇಲ್ಲ. ಗಾಳಿ, ಮಳೆ, ಬಿಸಿಲಿಗೆ ರಸ್ತೆಬದಿಯೇ ಆಸರೆ. ಬೆಳಗ್ಗೆ 7ರಿಂದ ರಾತ್ರಿ 7ರ ವರೆಗೆ ಕೆಲಸ ಮಾಡಬೇಕು. ಈಗ ಮೈಸೂರಿನ ಜೆ.ಕೆ.ಸೆಕ್ಯೂರಿಟಿ ಏಜೆನ್ಸಿ ವೇತನ ನೀಡುತ್ತಿದ್ದು ಪರವಾಗಿಲ್ಲ ಎನ್ನುತ್ತಾರೆ. ಇವರಿಗೆ ಸ್ವಂತ ಮನೆ ಇಲ್ಲ, ಪತ್ನಿ ಜತೆ ಇದ್ದಾರೆ. ಜೀವನ ಭದ್ರತೆ ಇಲ್ಲ, ಸ್ವಂತ ಸೂರಿಗೆ ಬೇಡಿಕೆ ಸಲ್ಲಿಸಿದರೂ ಈಡೇರಿಲ್ಲ ಎನ್ನುತ್ತಾರೆ. ಇಲ್ಲೇ ಭದ್ರತಾ ಸಿಬ್ಬಂದಿಯಾಗಿ ದುಡಿಯುತ್ತಿರುವ ಮ್ಯಾಕ್ಸಿಂಗೂ ಕಾಲುಬೇನೆ ತಟ್ಟಿದೆ.
ಅಂಗನವಾಡಿ ಆಹಾರಕ್ಕೆ ನೊಣ: ಪಚ್ಚನಾಡಿ ಡಂಪಿಂಗ್ ಯಾರ್ಡ್ ಹಿಂಭಾಗ ಸಂತೋಷ್‌ನಗರ ಎಂಬ ಊರಿದೆ. ಅಲ್ಲಿ 450 ವಾಸದ ಮನೆಗಳಿವೆ. ಹೆಚ್ಚುಕಡಿಮೆ ಮನೆ ಮಂದಿ ಒಂದಲ್ಲ ಒಂದು ತೊಂದರೆಯಿಂದ ಬಳಲುತ್ತಿದ್ದಾರೆ. ಕಳೆದ ತಿಂಗಳಿಂದ ಆಗಾಗ ಕಾಣಿಸುವ ಜ್ವರ, ವಾಂತಿಭೇದಿ, ಕಾಲು ನೋವು ಇವರ ಬದುಕನ್ನು ಹೈರಾಣಾಗಿಸಿದೆ. ಎಲ್ಲರೂ ಬೊಟ್ಟುಮಾಡುವುದು ಡಂಪಿಂಗ್ ಯಾರ್ಡ್‌ನತ್ತ.
ಸ್ಥಳೀಯ ಅಂಗನವಾಡಿಯಲ್ಲಿ ಚಿಣ್ಣರಿಗೆ ಆಹಾರ ಕೊಡಬೇಕಾದರೆ ಕಿಟಕಿ, ಬಾಗಿಲು ಹಾಕಿಕೊಳ್ಳಬೇಕು. ಆದರೂ ಸಂದಿನಿಂದ ತೂರಿಬರುವ ನೊಣ ಆಹಾರ ಸೇವಿಸಲು ಬಿಡುವುದಿಲ್ಲ. ಒಂದು ಕೈಯಲ್ಲಿ ನೊಣ ಓಡಿಸುತ್ತಾ ಆಹಾರ ಸೇವಿಸಬೇಕಾದ ಪ್ರಮೇಯ 'ಚಿಣ್ಣರದ್ದು. ಈ ಅಂಗನವಾಡಿಗೆ 22 ಪುಟಾಣಿಗಳು ಬರುತ್ತಿದ್ದರು. ಈಗ ನೊಣ ಹಾವಳಿಯಿಂದ ಚಿಣ್ಣರ ಹಾಜರಾತಿ 17ಕ್ಕೆ ಇಳಿದಿದೆ. ಬುಧವಾರ 7 ಮಂದಿ ಪುಟಾಣಿಗಳಿದ್ದರು.  ನೊಣ ಹಾವಳಿ ಬಗ್ಗೆ ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಗಮನಕ್ಕೆ ತರಲಾಗಿದೆ. ಡಂಪಿಂಗ್ ಯಾರ್ಡ್‌ನಲ್ಲಿ ತ್ಯಾಜ್ಯ ಕೊಳೆಯಲು ಬಿಟ್ಟಿರುವುದರಿಂದ ನೊಣ ಉತ್ಪತ್ತಿ ಜಾಸ್ತಿಯಾಗಿದೆ' ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆ ಭವಾನಿ.
ಬಾವಿ ನೀರು ವಾಸನೆ: ಪಚ್ಚನಾಡಿ, ದೇವಿನಗರ, ಮಂದಾರ ಪಚ್ಚನಾಡಿ, ಪಚ್ಚನಾಡಿ ಗುಂಡಿ, ಬಸವಲಿಂಗಪ್ಪ ಕಾಲನಿಗಳಲ್ಲಿ ವ್ಯಾಪಕ ಜ್ವರ, ತುರಿಕೆ ಕಾಣಿಸಿಕೊಂಡಿತ್ತು. ವೈದ್ಯಕೀಯ ತಪಾಸಣೆಯಲ್ಲಿ ರೋಗದ ಚಿನ್ನೆ ಕಂಡುಬರದಿದ್ದರೂ ಇಲ್ಲಿನ ಜನತೆಗೆ ಅನಾರೋಗ್ಯ ತಪ್ಪುತ್ತಿಲ್ಲ.
'ಈ ಪರಿಸರದ ಬಾವಿಗಳಲ್ಲಿ ನೀರಿದ್ದರೂ ವಾಸನೆ, ಕುಡಿಯಲು ಸಾಧ್ಯವಿಲ್ಲ. ಒಮ್ಮೆ ಬಂದು ಪರೀಕ್ಷಿಸಿ ಎಂದರೆ ಪಾಲಿಕೆ ಆರೋಗ್ಯಾಧಿಕಾರಿಗಳು ಗಮನ ನೀಡುತ್ತಿಲ್ಲ. ಹಾಗಾದರೆ ಪೈಪು ನೀರು ಕುಡಿದು ಬದುಕಬೇಕಾ' ಎಂದು ಪ್ರಶ್ನಿಸುತ್ತಾರೆ ಸೀತಮ್ಮ. ಸೀತಮ್ಮಗೆ ಕಳೆದ 2 ದಿನಗಳಿಂದ ಜ್ವರ ಕಾಣಿಸಿದೆ. ಸಮೀಪದ ಮನೆಯಲ್ಲೂ ಜ್ವರ, ಕೆಮ್ಮು. ಪಾಲಿಕೆ ಆರೋಗ್ಯಾಧಿಕಾರಿಗಳು ಬಂದು ರಕ್ತ ಸಂಗ್ರಹಿಸಿ ಮಲೇರಿಯಾ ಬಗ್ಗೆ ತಪಾಸಣೆ ನಡೆಸಿ ತಿಳಿಸುವುದಾಗಿ ಹೇಳಿದ್ದಾರೆ. ಅಲ್ಲಿವರೆಗೆ ಜ್ವರಕ್ಕೆ ಮಾತ್ರೆ ನೀಡಿ ತೆರಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement