ಇದು ಮಹಿಳೆಯರಿಗೆ ಮಾತ್ರ!
ಮಂಗಳೂರು: ಮಂಗಳೂರು-ಕಾಸರಗೋಡು ಕೆಎಸ್‌ಆರ್‌ಟಿಸಿ ವಿಶೇಷ ಮಹಿಳಾ ಬಸ್ ಸೋಮವಾರ ಆರಂಭಗೊಂಡಿದ್ದು, ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ಬೆಳಗ್ಗೆ 8ಕ್ಕೆ ಕಾಸರಗೋಡಿನಿಂದ ಹೊರಟ ಬಸ್ಸು ಸುಮಾರು 9.30ಕ್ಕೆ ಬಿಜೈ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ತಲುಪಿದೆ. ಮೊದಲ ಟ್ರಿಪ್‌ನಲ್ಲಿ 29 ಮಂದಿ ಮಹಿಳೆಯರು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 31 ಮಂದಿ ಪ್ರಯಾಣಿಕರಿದ್ದರು. ಒಟ್ಟು ರು. 429 ಮೊತ್ತ ಸಂಗ್ರಹವಾಗಿದೆ.
ಬಸ್ಸಿನಲ್ಲಿ ಪ್ರಯಾಣಿಸಿದ ಮಂಗಳೂರಿನ ಬೇಕರಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ತಲಪಾಡಿಯ ವಿಮಲಾ, 'ಬಸ್ ವ್ಯವಸ್ಥೆ ತುಂಬಾ ಖುಷಿ ತಂದಿದೆ. ಕೆಎಸ್‌ಆರ್‌ಟಿಸಿ ಅವರು ತುಂಬಾ ಉಪಕಾರ ಮಾಡಿದ್ದಾರೆ. ಇಲ್ಲಾಂದ್ರೆ ಪ್ರತಿ ದಿನ ಬೆಳಗ್ಗೆ ಬಸ್ ಪುರುಷರಿಂದ ತುಂಬಿಕೊಳ್ಳುತ್ತಿದ್ದು, ಇವರ ಮಧ್ಯೆ ನುಗ್ಗಿಕೊಂಡು ಬರಬೇಕಾಗಿತ್ತು. ನಿಂತುಕೊಳ್ಳಲು ಸ್ಥಳಾವಕಾಶವಿರುತ್ತಿರಲಿಲ್ಲ. ಬೈಯಲಿಕ್ಕೂ ಆಗುತ್ತಿರಲಿಲ್ಲ. ಬೇಕಾದರೆ ಬೇರೆ ಬಸ್‌ನಲ್ಲಿ ಬನ್ನಿ ಎಂಬ ಉತ್ತರ ಬೇರೆ. ಆದರೆ ಈ ವ್ಯವಸ್ಥೆ ಮನಸ್ಸಿಗೆ ತೃಪ್ತಿ ನೀಡಿದೆ' ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಬಸ್ಸಿನ ಮುಂಭಾಗದಲ್ಲಿ ಮಹಿಳೆಯರಿಗಾಗಿ ಮಾತ್ರ ಎಂಬುದಾಗಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಸದ್ಯಕ್ಕೆ ನಿರ್ವಾಹಕ ಮತ್ತು ಚಾಲಕರಾಗಿ ಪುರುಷರೇ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಜೆ 6.05ಕ್ಕೆ ಬಿಜೈ ಬಸ್ ನಿಲ್ದಾಣದಿಂದ ಹೊರಟು ಸಂಜೆ 7.45ಕ್ಕೆ ಕಾಸರಗೋಡು ನಿಲ್ದಾಣ ತಲುಪಲಿದೆ.
ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಮಹೇಶ್ ಪ್ರತಿಕ್ರಿಯಿಸಿ, ಮೊದಲ ದಿನ ಆಗಿದ್ದು, ಜನರಿಗೆ ಮಾಹಿತಿ ಇನ್ನು ತಲುಪಿಲ್ಲ. ಕಾಸರಗೋಡು ವ್ಯಾಪ್ತಿಯಲ್ಲಿ ಹೆಚ್ಚಿನ ಆದಾಯ ಇದ್ದು, ಉತ್ತಮ ಪ್ರತಿಕ್ರಿಯೆ ಲಭಿಸಿದರೆ ಟ್ರಿಪ್ ಹೆಚ್ಚಿಸಲಾಗುವುದು. ಮುಂದೆ ಮಲಯಾಳಂ ಭಾಷೆಯಲ್ಲಿ ಮಹಿಳೆಯರಿಗೆ ಮಾತ್ರ ಎಂಬುವುದಾಗಿ ಬರೆಸಲಾಗುವುದು. ಸದ್ಯದಲ್ಲಿ ಮಹಿಳಾ ನಿರ್ವಾಹಿಕಿಯನ್ನು ನೇಮಿಸಲಾಗುವುದು ಎಂದು ಹೇಳಿದರು.