ದರೋಡೆ ಯತ್ನ ಆರೋಪಿಗಳ ಸೆರೆಗೆ ವಾರದ ಗಡುವು
ಮಂಗಳೂರು: ಮುಡಿಪುವಿನ ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್‌ನ ಪಿಗ್ಮಿ ಸಂಗ್ರಾಹಕ, ಕೃಷಿಕ ಕೊಡಕ್ಕಲ್ ನಾರಾಯಣ ಭಟ್ ಮೇಲೆ ಹಲ್ಲೆ ಹಾಗೂ ದರೋಡೆ ಯತ್ನ ಪ್ರಕರಣದ ಆರೋಪಿಗಳನ್ನು ಇನ್ನೂ ಬಂಧಿಸದಿರುವುದನ್ನು ವಿರೋಧಿಸಿ ಸೋಮವಾರ ಮುಡಿಪಿನಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿ ಹಾಗೂ ನೌಕರರು ಸಾಂಕೇತಿಕ ಧರಣಿ ನಡೆಸಿದರು.
ಆರೋಪಿಗಳನ್ನು ವಾರದೊಳಗೆ ಬಂಧಿಸದಿದ್ದರೆ ಮುಂದಿನ ಹೋರಾಟ ಕೈಗೊಳ್ಳುವುದಾಗಿ ಈ ಸಂದರ್ಭ ಎಚ್ಚರಿಕೆ ನೀಡಲಾಯಿತು.
ಯಾಕೆ ಹಿಡಿಯಲು ಸಾಧ್ಯವಿಲ್ಲ...?: ಹೊಟ್ಟೆಪಾಡಿಗೆ ದುಡಿದು ಮನೆಗೆ ಹೋಗುವ ಸಂದರ್ಭ ಪಿಗ್ಮಿ ಸಂಗ್ರಾಹಕರ ಮೇಲೆ ದರೋಡೆ ಯತ್ನ ನಡೆದಿದೆ. ಮೂಡುಬಿದಿರೆಯಿಂದ ಮೂರ್ತಿಗಳನ್ನು ಕದ್ದವರನ್ನು ಒಡಿಶಾದಿಂದ ಬಂಧಿಸಿ ತರಲು ಪೊಲೀಸರಿಗೆ ಸಾಧ್ಯವಿರುವಾಗ, ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿದರೂ ಈವರೆಗೆ ಆರೋಪಿಯ ಸೆರೆ ಆಗಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಕಪ್ಪು ಬ್ಯಾಡ್ಜ್ ಧರಿಸಿ ಸಾಂಕೇತಿಕ ಧರಣಿ ನಡೆಸಿದರು.
ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಟಿ.ಜಿ. ರಾಜಾರಾಮ ಭಟ್, ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರು, ಸ್ಥಳೀಯರಾದ ಕೆ.ಎನ್. ಶಿವರಾಮ ಭಟ್, ಜಗದೀಶ ಆಳ್ವ, ಮುರಳಿಮೋಹನ ಭಟ್ ಮಾತನಾಡಿದರು.
ಇಂದು ವಿದ್ಯುತ್ ಇಲ್ಲ
ಮಂಗಳೂರು: ಕಾವೂರು, ಮಣ್ಣಗುಡ್ಡೆ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಆ. 13 ರಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಮೆಸ್ಕಾಂ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದ್ಯುತ್ ನಿಲುಗಡೆ ಪ್ರದೇಶ- ಲಾಲ್‌ಬಾಗ್, ಬಳ್ಳಾಲ್‌ಬಾಗ್, ಎಂ.ಜಿ. ರೋಡ್, ಅಳಕೆ, ಕುದ್ರೋಳಿ, ಕೊಡಿಯಾಲ್‌ಬೈಲ್, ಚಿಲಿಂಬಿ, ಲೇಡಿಹಿಲ್, ಮಠದಕಣಿ, ಕೊಟ್ಟಾರ, ಕೋಡಿಕಲ್, ಉರ್ವಸ್ಟೋರ್, ಅಶೋಕನಗರ, ಹೈಗೆಬೈಲ್, ದಂಬೆಲ್, ಬೋಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.