ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶಿಕ್ಷಣ ಸಂಸ್ಥೆಗಳಿಂದ ಅಫಿದವಿತ್‌' ತಾ.ಪಂ. ಸಭೆ ಸೂಚನೆ

Srinivasa Murthy VN
Updated On : 13 Aug 2013, 11:37 am

ಮಂಗಳೂರು: 'ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳನ್ನು ಸೇರಿಸಿಕೊಳ್ಳುತ್ತಿರುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು 10 ದಿನದೊಳಗೆ ತಾವು ಮಕ್ಕಳಿಂದ ಯಾವುದೇ ಶುಲ್ಕ ಪಡೆಯುತ್ತಿಲ್ಲ ಎಂಬ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಫಿದವಿತ್ ಬರೆದು ಕೊಡಬೇಕು' ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಹರೀಶ್ ಕುಮಾರ್ ಕೆ. ಸೂಚಿಸಿದ್ದಾರೆ.
ಅವರು ಸೋಮವಾರ ಮಂಗಳೂರು ತಾಲೂಕು ಸಭಾಂಗಣದಲ್ಲಿ ನಡೆದ ತಾ.ಪಂ.ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಖಾಸಗಿ ಶಾಲೆಯಲ್ಲಿ ಆರ್‌ಟಿಇ ಕಾಯ್ದೆಯಡಿ ದಾಖಲಾದ ಮಕ್ಕಳಿಂದ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ ಎಂಬ ಕುರಿತು ಚರ್ಚೆ ನಡೆಯಿತು.
2013-14ನೇ ಸಾಲಿನಲ್ಲಿ ಮಂಗಳೂರು ದಕ್ಷಿಣ ವಲಯದಲ್ಲಿ 22 ಶಾಲೆಗಳಲ್ಲಿ 215 ಮಕ್ಕಳನ್ನು ಆರ್‌ಟಿಇ ಕಾಯ್ದೆಯಡಿ ದಾಖಲು ಮಾಡಲಾಗಿದ್ದು, ಹೆಚ್ಚುವರಿ ಶುಲ್ಕ ಪಡೆದಿರುವ ಕುರಿತು ವಿಚಾರಿಸಲಾಗಿದೆ. ಅಲ್ಲದೆ ಶಾಲಾ ಮಂಡಳಿಯಿಂದ ಯಾವುದೇ ತರಹದ ಶುಲ್ಕ ಪಡೆದಿಲ್ಲ ಎಂಬ ಕುರಿತು ದೃಢೀಕರಣ ಪಡೆದುಕೊಳ್ಳಲಾಗಿದೆ. ಆದ್ದರಿಂದ ಮಂಗಳೂರು ಉತ್ತರ ಮತ್ತು ಮೂಡುಬಿದಿರೆ ವ್ಯಾಪ್ತಿಯಲ್ಲಿಯೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಶಿಕ್ಷಣಾಧಿಕಾರಿ ಹೇಳಿದರು.
ಮೂಡುಬಿದಿರೆ ಪುತ್ತಿಗೆ ತಾ.ಪಂ. ಸದಸ್ಯ ಪ್ರಕಾಶ್, ಆರ್‌ಟಿಇ ಕಾಯ್ದೆ ಪ್ರಕಾರ ಕೆಲವೊಂದು ಶಿಕ್ಷಣ ಸಂಸ್ಥೆಗಳು ಮಕ್ಕಳಿಂದ ಹೆಚ್ಚಿಗೆ ಶುಲ್ಕ ಸಂಗ್ರಹಿಸುತ್ತಿದ್ದು, ಮಕ್ಕಳ ಭವಿಷ್ಯ ಮತ್ತು ಶಾಲೆಯ ಮುಖ್ಯಸ್ಥರ ಭಯದಿಂದ ಫೋಷಕರು ಮಾಹಿತಿ ಕೊಡಲು ನಿರಾಕರಿಸುತ್ತಿದ್ದಾರೆ ಎಂದು ಹೇಳಿದರು.
ದಾಖಲಾತಿ ಕಡಿಮೆ: ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಸಾಕಷ್ಟು ಪ್ರಚಾರ ನಡೆಯದೆ ಇರುವುದರಿಂದ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಕಡಿಮೆಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಡಿಸೆಂಬರ್ ತಿಂಗಳಿನಿಂದಲೇ ಪ್ರಚಾರ ಮಾಡಿ ಮಕ್ಕಳ ಸಂಖ್ಯೆ ಹೆಚ್ಚಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದರು.
ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಕಾರ್ಯಪ್ರವೃತ್ತರಾಗಿದ್ದು, ಕೆಲವು ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ. ಕೆಲವೊಂದು ಮಕ್ಕಳ ಪೋಷಕರು ತಾವು ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದು, ತಮ್ಮ ಮನೆಗಳಿಗೆ ತೆರಳುವುದರಿಂದ ಮಕ್ಕಳನ್ನು ಇಲ್ಲಿ ಶಾಲೆಗೆ ಸೇರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಕೆಲವೊಂದು ಮಕ್ಕಳನ್ನು ಕಳುಹಿಸಿಕೊಡಲಾಗಿದೆ. ಈ ಸಂದರ್ಭ ಪೋಷಕರು ತಮ್ಮ ಊರಿಗೆ ತೆರಳುವ ರೈಲು ಟಿಕೆಟ್ ಪರಿಶೀಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ನಿರಂತರ ಮೌಲ್ಯಮಾಪನ ಪರೀಕ್ಷೆ ಜಾರಿಯಲ್ಲಿದ್ದು, ಇನ್ನು ಮುಂದೆ ಮಕ್ಕಳಿಗೆ ಸೆಮಿಸ್ಟರ್ ಪದ್ಧತಿಯಲ್ಲಿ ವರ್ಷಕ್ಕೆ ಎರಡು ಪರೀಕ್ಷೆ ನಡೆಯಲಿದೆ. ಒಟ್ಟು 40 ಅಂಕಗಳ ಲಿಖಿತ ಪರೀಕ್ಷೆ ಮತ್ತು 10 ಅಂಕಗಳ ಮೌಖಿಕ ಪರೀಕ್ಷೆ ನಡೆಯಲಿದೆ. ಇದು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡುವ ಎಲ್ಲ ಶಾಲೆಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಿದರು.
ಬಜ್ಪೆ ತಾ.ಪಂ. ವ್ಯಾಪ್ತಿಯ ರಸ್ತೆ ಬದಿಯಲ್ಲಿ ಬೃಹತ್ ಮರದ ಕೊಂಬೆ ತಾಗಿ ಮರದಡಿಯ ಅಂಗಡಿಗಳಿಗೆ ಹಾನಿಯಾಗುತ್ತಿದೆ. ಮರ ಕಡಿಯುವ ಕುರಿತು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವಂತೆ ಬಜ್ಪೆ ತಾ.ಪಂ. ಸದಸ್ಯ ಮನವಿ ಮಾಡಿದರು.
ಬಾಡಿಗೆ ಬಾಕಿ: ತಾ.ಪಂ. ಅಧೀನದೊಳಗಿನ 49 ಅಂಗಡಿಗಳು ಬಾಡಿಗೆ ನೀಡಬೇಕಾಗಿದ್ದು, ಒಟ್ಟು ರು. 8ಲಕ್ಷ ಬಾಕಿಯಿದೆ. 2 ತಿಂಗಳಿನಿಂದ ಜಾಸ್ತಿ ಬಾಡಿಗೆ ಬಾಕಿದಾರರಿಗೆ ನೋಂದಾಯಿತ ಅಂಚೆ ಮೂಲಕ ತಗಾದೆ ನೋಟಿಸು ಕಳುಹಿಸಲಾಗಿದೆ. ಈ ಪೈಕಿ 15 ನೋಟಿಸ್ ವಾಪಾಸ್ಸು ಬಂದಿದ್ದು, ಬಾಡಿಗೆದಾರರ ಮನೆ ವಿಳಾಸಕ್ಕೆ ನೋಟಿಸ್ ಕಳುಹಿಸಲಾಗಿದೆ. 7 ದಿವಸದೊಳಗೆ ಪಾವತಿಸದಿದ್ದರೆ ಅಂಗಡಿಗಳಿಗೆ ಬೀಗ ಜಡಿಯಲಾಗುವುದು ಎಂದು ಅಧ್ಯಕ್ಷರು ಆದೇಶಿಸಿದರು. ಆಧಾರ್ ಕಾರ್ಡ್, ಸ್ಮಾರ್ಟ್ ಕಾರ್ಡ್ (ಎನ್‌ಪಿಆರ್) ಹಾಗೂ ಪಡಿತರ ಕಾರ್ಡಿನಲ್ಲಿರುವ ಗೊಂದಲ ಕುರಿತು ಚರ್ಚೆ ನಡೆದಿದ್ದು, ಜನರಿಗೆ ಪತ್ರಿಕೆ ಮೂಲಕ ಸರಿಯಾದ ಮಾಹಿತಿ ನೀಡುವಂತೆ ಸದಸ್ಯರು ಅಧಿಕಾರಿಗಳನ್ನು ಕೋರಿದರು.
ತಾ.ಪಂ. ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು, ಕಾರ್ಯನಿರ್ವಾಹಣಾಧಿಕಾರಿ ರೋಹಿದಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement