ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದೊಡ್ಡ ಕೋಳಿ ಫಾರಂ ವಿರುದ್ಧ ಬೀದಿಗಿಳಿದ ಚಿಣ್ಣರು

Srinivasa Murthy VN
Updated On : 20 Aug 2013, 1:31 am

ದಾವಣಗೆರೆ:  ಕೋಳಿ ಫಾರಂ ಹಾವಳಿ, ನೊಣಗಳ ಕಾಟದಿಂದ ಬೆಳವನೂರು ಗ್ರಾಮಸ್ಥರು ಫಾರಂಗೆ ನುಗ್ಗಿ ದಾಂಧಲೆ ನಡೆಸಿದ್ದು ಹಸಿರಾಗಿ ಇರುವಾಗಲೇ ಮತ್ತೊಂದು ಕಡೆ ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿಯಲ್ಲೂ ನೊಣಗಳ ಉಪಟಳ, ರಾಜ್ಯದ 2ನೇ ಅತಿ ದೊಡ್ಡ ಕೋಳಿ ಫಾರಂನ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಶಾಲೆಯ ಮಕ್ಕಳು ಪ್ರತಿಭಟಿಸಿದ ಘಟನೆ ಸೋಮವಾರ ನಡೆಯಿತು.
ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿ ಗ್ರಾಮಸ್ಥರು ನೆಮ್ಮದಿ ನಿದ್ರೆ ಮಾಡಿ ಅದೆಷ್ಟೋ ತಿಂಗಳು, ವರ್ಷಗಳಾದವೆಂಬುದನ್ನೇ ಮರೆತಿದ್ದಾರೆ. ನೆಮ್ಮದಿಯಾಗಿ ತಿಂಡಿ, ಊಟ ಮಾಡಲಿಕ್ಕೂ ಆಗದೆ, ಕೈಯಲ್ಲೊಂದು ಗಾಳಿ ಬೀಸಣಿಕೆ ಇಟ್ಟುಕೊಂಡು ತಿನ್ನಲು ಕೂಡುವಂತಾಗಿದೆ. ಮಕ್ಕಳು, ಹಿರಿಯರಾದಿಯಾಗಿ ಯಾರೇ ಏನೇ ತಿನ್ನಲು ಮುಂದಾದರೂ ನೊಣಗಳು ಮುಕ್ಕುರುತ್ತಿವೆ.
ನೊಣಗಳ ದಾಂಗುಡಿ: ಬಿಸಿಯೂಟ ಸ್ವಲ್ಪ ತಣ್ಣಗಾಗುವಂತಿಲ್ಲ. ಕ್ಷೀರ ಭಾಗ್ಯದ ಹಾಲನ್ನು ಲೋಟಕ್ಕೆ ಹಾಕಲೂ ಆಗದಂತೆ ನೊಣಗಳ ಹಿಂಡು ದಾಂಗುಡಿ ಇಡುತ್ತಿವೆ. ನೊಣಗಳ ಹಾವಳಿಯಿಂದ ತಮ್ಮ ಊರಿಗೆ ಮುಕ್ತಿ ಸಿಗುತ್ತದೋ, ಇಲ್ಲವೋ ಎಂಬ ಭಯ ಮಕ್ಕಳಿಗೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ನೊಣಗಳ ಹಾವಳಿಗೆ ಶಾಶ್ವತವಾಗಿ ಮುಕ್ತಿ ಹಾಡಲು ಒತ್ತಾಯಿಸಿ ತರಗತಿಯಿಂದ ದೂರ ಉಳಿದು, ಕೋಳಿ ಫಾರಂಗಳ ಮುಂದೆ ಪ್ರತಿಭಟಿಸಿದರು.
ಸಾಮಾನ್ಯವಾಗಿ ಕಳಪೆ ಆಹಾರ ನೀಡಲಾಗುತ್ತಿದೆಯೆಂದೋ, ಶಾಲೆಗೆ ಮೂಲ ಸೌಕರ್ಯ ಕಲ್ಪಿಸಬೇಕೆಂದೋ ವಿದ್ಯಾರ್ಥಿಗಳು, ಪಾಲಕರು ಹೋರಾಟ ನಡೆಸುವುದನ್ನು ನೋಡಿದ್ದೇವೆ. ಆದರೆ, ಕೋಳಿ ಫಾರಂನಿಂದ ಆಗುತ್ತಿರುವ ಅನಾಹುತಗಳ ವಿರುದ್ಧ ಅದೇ ಫಾರಂ ಮುಂದೆ ವಿದ್ಯಾರ್ಥಿಗಳು ಪ್ರತಿಭಟಿಸಿ, ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆಗೆ ಫಾರಂ ಮಾಲೀಕರಿಗೂ ಬಿಸಿ ಮುಟ್ಟಿಸಿದ ಹೋರಾಟ ಇದಾಗಿತ್ತು.
ಮಕ್ಕಳ ಪ್ರತಿಭಟನೆ: ರೈತಾಪಿ ಕುಟುಂಬ, ಕೃಷಿ ಕೂಲಿ ಕಾರ್ಮಿಕರೆ ಹೆಚ್ಚಾಗಿರುವ ಹೊನ್ನೂರು ಗೊಲ್ಲರಹಟ್ಟಿ ಗ್ರಾಮದ ಪಕ್ಕದ ಪೌಲ್ಟ್ರಿ ಫಾರಂನಿಂದ ನೊಣಗಳ ಹಾವಳಿ ಮಿತಿ ಮೀರುತ್ತಿದೆ. ನೆಮ್ಮದಿಯನ್ನೇ ಕಳೆದುಕೊಂಡು ಅಲ್ಲಿನ ಜನ ಬದುಕುತ್ತಿದ್ದಾರೆ. ಹಿರಿಯರು ಎಲ್ಲಾ ಸಹಿಸಿಕೊಂಡರೂ ಮಕ್ಕಳಿಗೆ ಅದನ್ನೆಲ್ಲಾ ಸಹಿಸಿ ಕೊಂಡಿರಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಸೋಮವಾರ ಶಾಲೆ ಬದಲು ಕೋಳಿ ಫಾರಂ ಎದುರು ಹಾಜರಾದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ನೊಣಗಳ ಹಾವಳಿಗೆ ಇತಿಶ್ರೀ ಹಾಡಬೇಕು, ಕೋಳಿ ಫಾರಂನಿಂದ ಆಗುತ್ತಿರುವ ಸಮಸ್ಯೆ ತಪ್ಪಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ಇದೇ ವೇಳೆ ಮಾತನಾಡಿದ ಗ್ರಾಮಸ್ಥರು, ತಾವು ನೆಮ್ಮದಿಯಿಂದ ಊಟ, ನಿದ್ದೆ ಮಾಡದಂತಾಗಿದೆ.  ಕೋಳಿ ಫಾರಂನಿಂದ ನೊಣಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಪದೇಪದೇ ವಾಂತಿ, ಬೇಧಿ, ತೀವ್ರ ಜ್ವರದಂತಹ ದೈಹಿಕ ಸಮಸ್ಯೆಗೆ ತುತ್ತಾಗುತ್ತಿದ್ದೇವೆ ಎಂದರು.
ಗ್ರಾಮಸ್ಥರ ಎಚ್ಚರಿಕೆ: ಸುಮಾರು 30 ಎಕರೆ ಪ್ರದೇಶದ ಕೋಳಿ ಫಾರಂ ರಾಜ್ಯದಲ್ಲೇ 2ನೇ ಅತಿ ದೊಡ್ಡದು ಎನ್ನಲಾಗಿದೆ. ಇಲ್ಲಿಯ ನೊಣ ನಿಯಂತ್ರಣಕ್ಕೆ ರಸಾಯನಿಕ ಬಳಸಿದರೂ ಪ್ರಯೋಜನವಾಗುತ್ತಿಲ್ಲ. ಫಾರಂನ್ನು ತೆರವುಗೊಳಿಸುವಂತೆ  ಇಂದು ಮಕ್ಕಳು ಹೋರಾಟ ನಡೆಸಿದ್ದಾರೆ. ನಾಳೆ ನಾವು ಹೋರಾಟಕ್ಕಿಳಿಯಬೇಕಾದೀತು. ಪರಿಸ್ಥಿತಿ ಕೈಮೀರುವ ಮುನ್ನ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಗ್ರಾಮಸ್ಥರಾದ ಮೌಲ್ಯನಾಯ್ಕ, ಕಮಲಮ್ಮ, ಗೋವಿಂದಣ್ಣ, ಪರಶುರಾಮ ಸೇರಿ ಗ್ರಾಮಸ್ಥರು, ಪಾಲಕರು, ಹಿರಿಯ ನಾಗರೀಕರು, ವಯೋವೃದ್ಧರೂ ಪ್ರತಿಭಟನೆಯಲ್ಲಿ ಶಾಲಾ ಮಕ್ಕಳಿಗೆ ಸಾಥ್ ನೀಡಿದ್ದು ವಿಶೇಷ. 20ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಲು ನಿರ್ಧರಿಸಿದ್ದಾರೆ.

ಮಾಲೀಕನಿಗೆ ತರಾಟೆ...
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಫೌಲ್ಟ್ರಿ ಫಾರಂ ತೆರವುಗೊಳಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಇದೇ ವೇಳೆ ಗ್ರಾಮಸ್ಥರು, ಹಿರಿಯರನ್ನು ಸಮಾಧಾನಿಸಲು ಮುಂದಾದ ಕೋಳಿ ಫಾರಂ ಮಾಲೀಕನ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.   ಯಾರಾದರೂ ಕೋಳಿ ಫಾರಂ ಬಗ್ಗೆ ಅಪಸ್ವರ ಎತ್ತಿದರೆ ಹಣ ಕೊಟ್ಟು ಸಮಾಧಾನಪಡಿಸುವುದು ನಡೆಯುತ್ತಿದೆ. ಇನ್ನು ಮುಂದೆ ನಾವ್ಯಾರೂ ಅಂತಹದ್ದಕ್ಕೆಲ್ಲಾ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು,  ಯುವಕರು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement