ಪರಿಶಿಷ್ಟರಿಗೆ ಮನೆ ಒದಗಿಸಲು ಭೂಮಿ ಕೊರತೆ
ಕನ್ನಡಪ್ರಭ ವಾರ್ತೆ ಮಂಗಳೂರು ಆ.24
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಸರ್ಕಾರದ ವತಿಯಿಂದ ಮನೆ ಒದಗಿಸಲು ಭೂಮಿ ಕೊರತೆಯಿದೆ ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಸದಸ್ಯ ಎಂ. ಶಿವಣ್ಣ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದಿಂದ ಒಂದು ಎಕರೆಗೆ 5 ಲಕ್ಷ ಮೊತ್ತ ನಿಗದಿಯಾಗಿದೆ. ಆದರೆ ಜಿಲ್ಲೆಯಲ್ಲಿ ತುಂಡು ಭೂಮಿಗೂ ಮಾರುಕಟ್ಟೆ ಮೊತ್ತ ಲಕ್ಷಾಂತರ ಮೌಲ್ಯವಿದ್ದು, ಜಿಲ್ಲಾಡಳಿತದಿಂದ ಭೂಮಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಬೆಳ್ತಂಗಡಿಯಲ್ಲಿ ಭೂ ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿಯವರಿಗೆ ಮನೆ ಒದಗಿಸಿಕೊಡಲಾಗಿದೆ ಎಂದರು.
ಆಯೋಗದಲ್ಲಿ ಐವರು ಸದಸ್ಯರಿದ್ದಾರೆ. ಆಯೋಗ ತನಗೆ 10 ರಾಜ್ಯಗಳ ಜವಾಬ್ದಾರಿ ವಹಿಸಿದೆ. ಪ್ರತಿಯೊಂದೂ ರಾಜ್ಯದ ಜಿಲ್ಲೆಯಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಂವಿಧಾನಬದ್ಧ ಹಕ್ಕುಗಳು ತಲುಪುತ್ತಿರುವ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲಿಸಲಾಗುವುದು ಎಂದರು. ಅತ್ಯಾಚಾರ ಪ್ರಕರಣದ ಪರಿಹಾರವನ್ನು 1.20 ಲಕ್ಷಕ್ಕೆ ಏರಿಸಲಾಗಿದ್ದು, ಇದರಲ್ಲಿ ಶೇ.50 ತಕ್ಷಣ ಪರಿಹಾರವಾಗಿ ನೀಡಲಾಗುತ್ತದೆ. ವೈದ್ಯಕೀಯ ಪರಿಶೀಲನೆ ಪ್ರಕರಣದ ಕುರಿತ ಮಾಹಿತಿ ಸಂಗ್ರಹದ ನಂತರ ಉಳಿದ ಮೊತ್ತವನ್ನು ನೀಡಲಾಗುತ್ತದೆ ಎಂದರು.
3 ತಿಂಗಳಿಗೊಮ್ಮೆ ದಲಿತ ಮುಖಂಡರ ಸಭೆ ಕರೆದು ಸಮಸ್ಯೆ ತಿಳಿದುಕೊಂಡು ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.