ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ: ಆರೋಪಿಗೆ ಥಳಿತ
ಮಂಗಳೂರು: ಬುದ್ಧಿಮಾಂದ್ಯ ಬಾಲಕಿ ಮೇಲೆ ನೆರೆಮನೆಯ ಮಧ್ಯವಯಸ್ಕ ಕಳೆದ 2 ತಿಂಗಳಿಂದ ನಿರಂತರ ಅತ್ಯಾಚಾರ ನಡೆಸಿದ ಘಟನೆ ಬಜ್ಪೆ ಬಳಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಸ್ಥಳೀಯ ಮಹಿಳೆಯರು ಮರಕ್ಕೆ ಕಟ್ಟಿಹಾಕಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಪ್ಪೆಪದವು ಕಲ್ಲಾಡಿಯ ಸುಂದರ(45) ಬಂಧಿತ ಆರೋಪಿ.
ನೆರೆಮನೆಯ 16 ವರ್ಷದ ಬುದ್ಧಿಮಾಂದ್ಯ ಯುವತಿಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ ಸುಂದರ, ಆಕೆಯ ಮುಗ್ಧತೆ ಬಳಸಿಕೊಂಡು 2 ತಿಂಗಳಿಂದ ನಿರಂತರ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಈ ಬಗ್ಗೆ ಆಗಲೇ ವಿಷಯ ತಿಳಿದಿದ್ದ ಸ್ಥಳೀಯರು ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದರು. ಆದರೆ ಈ ಕೃತ್ಯ ಸಾಬೀತಾಗದ ಹಿನ್ನೆಲೆಯಲ್ಲಿ ಆತನಿಗೆ ಬುದ್ಧಿ ಹೇಳಿ ಬಿಟ್ಟಿದ್ದರು. ಇಷ್ಟಾದರೂ ಆತ ತನ್ನ ಚಾಳಿ ಬಿಟ್ಟಿರಲಿಲ್ಲ. ಬಾಲಕಿ ಮನೆಯವರು ಕೆಲಸಕ್ಕೆ ಹೊರಗಡೆ ಹೋಗುತ್ತಿದ್ದಾಗ ಆತ ತನ್ನ ಕೃತ್ಯ ಮುಂದುವರಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ನಶ್ಯ ಎಳೆಯುತ್ತಿದ್ದ ಬಾಲಕಿ: ಬಾಲಕಿಗೆ ನಶ್ಯ ಎಳೆಯುವ ಚಟವಿತ್ತು. ಅದನ್ನೇ ಆತ ಈ ಕುಕೃತ್ಯಕ್ಕೆ ಬಳಸಿಕೊಂಡಿದ್ದ. ಶುಕ್ರವಾರವೂ ಯುವತಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಮನಗಂಡು ಆಕೆಯ ಮನೆಗೆ ನಶ್ಯ ಹಿಡಿದುಕೊಂಡು ಹೋಗಿ, ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಆತ ಆಕೆಯ ಮನೆಯಿಂದ ಹೊರಬರುತ್ತಿರುವುದನ್ನು ಗಮನಿಸಿದ ಸ್ಥಳೀಯ ಮಹಿಳೆಯರು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಬಿಡಿಸಿಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಬಂಧಿತ ಸುಂದರನಿಗೆ ಮೂರು ಮಂದಿ ಮಕ್ಕಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.