ಮುಂದಿನ ವರ್ಷದಿಂದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಜಾರಿ: ಕಿಮ್ಮನೆ
ಕ.ಪ್ರ.ವಾರ್ತೆ, ಸುಬ್ರಹ್ಮಣ್ಯ, ಆ. 26-
ಕೇಂದ್ರದ ಶಿಕ್ಷಣ ನೀತಿ ಅಳವಡಿಸಿ ಮುಂದಿನ ವರ್ಷ ಜೂನ್ ತಿಂಗಳಿನಿಂದ ರಾಜ್ಯದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಜಾರಿ ಮಾಡಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸೋಮವಾರ ಕುಟುಂಬ ಸಮೇತ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದ ಶಿಕ್ಷಣ ನೀತಿ ಅಳವಡಿಸುವುದರಿಂದ ದೇಶದ ಎಲ್ಲ ರಾಜ್ಯಗಳಲ್ಲಿರುವ ಅಸಮತೋಲನ ಹೋಗಲಾಡಿಸಬಹುದು. 1ರಿಂದ 8ನೇ ತರಗತಿವರೆಗೆ ಪ್ರಾಥಮಿಕ, 9ರಿಂದ 12ನೇ ತರಗತಿವರೆಗೆ ಪ್ರೌಢಶಾಲೆಯಾಗಲಿದೆ. ಶಾಲೆ ಕಟ್ಟಡ, ಶಿಕ್ಷಕರ ವೇತನ ಸೇರಿದಂತೆ ಎಲ್ಲ ಆರ್ಥಿಕ ನೆರವನ್ನು ಕೇಂದ್ರ ನೀಡಲಿದೆ ಎಂದರು.
ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದರಂತೆ ರಾಜ್ಯದಲ್ಲಿ 5,100 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಲು ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದೊಂದಿಗೆ ಅಭಿವೃದ್ಧಿಪಡಿಸುವ ಚಿಂತನೆ ನಡೆದಿದೆ. ಆಯಾ ಗ್ರಾಪಂ ನಿರ್ಣಯದಂತೆ ಆಯ್ಕೆಯಾದ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲಾಗುವುದು. ದಾನಿಗಳು ಸಹಕಾರ ನೀಡಿದರೆ ಅವರ ಹೆಸರನ್ನು ಸರ್ಕಾರದ ಶಿಕ್ಷಣ ವೆಬ್ಸೈಟ್ನಲ್ಲಿ ನಮೂದಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ತಿಂಗಳೊಳಗೆ 12 ಸಾವಿರ ಶಿಕ್ಷಕರನ್ನು ತಾತ್ಕಾಲಿಕ ನೆಲೆಯಲ್ಲಿ ನಿಯೋಜಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ 51 ಸಾವಿರ ಶಾಲೆಗಳಿದ್ದು, 24 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ. 4 ಸಾವಿರ ಶಿಕ್ಷಕರನ್ನು ಖಾಯಂಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲ ಶಾಲೆಗಳನ್ನು ರಾಷ್ಟ್ರೀಕರಣ ಮಾಡುವ ಚಿಂತನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಏಕರೂಪ ಶಿಕ್ಷಣ ನೀಡುವ ಉದ್ದೇಶದಿಂದ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ರಾಷ್ಟ್ರೀಕರಣ ಮಾಡಿ ಶಿಕ್ಷಣದಲ್ಲಿ ತಾರತಮ್ಯ ಉಂಟಾಗದಂತೆ ಏಕರೂಪ ಶಿಕ್ಷಣ ನೀತಿ ತರಲು ಒತ್ತು ನೀಡಲಾಗುವುದು ಎಂದರು. ರಾಜ್ಯ ಸರ್ಕಾರದ ಸಚಿವರಲ್ಲಿ ಪ್ರಥಮ ಬಾರಿಗೆ ಕುಕ್ಕೆಗೆ ಮೊದಲ ಭೇಟಿ ನೀಡಿದ ಶಿಕ್ಷಣ ಸಚಿವರೊಂದಿಗೆ ಪತ್ನಿ ಅರುಂಧತಿ, ಪುತ್ರ ಮಂಥನ್ ಇದ್ದರು.
ಶಿಕ್ಷಕರಿಗೆ ಕಿಮ್ಮನೆ ಮೇಷ್ಟ್ರ ಪಾಠ!
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸುಬ್ರಹ್ಮಣ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಗೆ ಭೇಟಿ ನೀಡಿ ಮುಖ್ಯ ಶಿಕ್ಷಕಿಯ ಆಸನದಲ್ಲಿ ಕುಳಿತು ಶಿಕ್ಷಕರಿಗೇ 'ಪಾಠ' ಮಾಡಿದರು! ರಾಜ್ಯದಲ್ಲಿ ಎಷ್ಟು ಮಂದಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ, ಕುವೆಂಪು ಅವರ ಯಾವ ಪುಸ್ತಕಕ್ಕೆ ಈ ಪ್ರಶಸ್ತಿ ಬಂದಿದೆ.. ಮುಂತಾದ ಪ್ರಶ್ನೆಗಳನ್ನು ಕೇಳಿ ಶಿಕ್ಷಕರನ್ನು ಪೇಚಿಗೆ ಸಿಲುಕಿಸಿದರು. ಬಳಿಕ ತರಗತಿಗೆ ತೆರಳಿ ಮಕ್ಕಳಲ್ಲಿ ಪಾಠ, ಪ್ರವಚನ ಹೇಗೆ ನಡೆಯುತ್ತಿದೆ ಎಂದು ಪ್ರಶ್ನಿಸಿದರು. ನಲಿ-ಕಲಿ ತರಗತಿಗೆ ತೆರಳಿ ಮಕ್ಕಳೊಂದಿಗೆ ತಾವು ಕೂಡ ಹಾಡಿಗೆ ಸ್ವರ ಸೇರಿಸಿದರು. ಸುಬ್ರಹ್ಮಣ್ಯ ಪಪೂ ಕಾಲೇಜಿಗೆ ತೆರಳಿ ಅಲ್ಲಿ ಕೂಡ ಶಿಕ್ಷಕರೊಂದಿಗೆ ಪ್ರಶ್ನೆಗಳ ಸರಮಾಲೆ ತೆರೆದಿಟ್ಟರು. ಬಳಿಕ ಪುತ್ತೂರು ತಾಲೂಕಿನ ಕೈಕಂಬ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ ತೆರಳಿ ಅಕ್ಷರ ದಾಸೋಹ ಹಾಗೂ ಕ್ಷೀರ ಭಾಗ್ಯ ಯೋಜನೆಯ ರುಚಿಯನ್ನು ಸವಿದರು.