ವರುಣ್ ಗಾಂಧಿ, ಮುತಾಲಿಕ್ ಕೊಲೆ ಯತ್ನ ಆರೋಪಿ ರಶೀದ್ಗೆ ನಾಳೆ ಶಿಕ್ಷೆ
ಕನ್ನಡಪ್ರಭ ವಾರ್ತೆ ಮಂಗಳೂರು ಆ.26
ವರುಣ್ ಗಾಂಧಿ ಮತ್ತು ಪ್ರಮೋದ್ ಮುತಾಲಿಕ್ ಕೊಲೆಗೆ ಸಂಚು ರೂಪಿಸಿದ ಆರೋಪದಡಿ 4 ವರ್ಷಗಳ ಹಿಂದೆ ಜೈಲು ಸೇರಿರುವ ಪಾತಕಿ ರಶೀದ್ ಮಲಬಾರಿಗೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಜಿಲ್ಲಾ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆ ಪ್ರಮಾಣವನ್ನು ಆ.28ರಂದು ಪ್ರಕಟಿಸಲಿದೆ. 1998ರಲ್ಲಿ ಪಣಂಬೂರಲ್ಲಿ ಚೋಟಾರಾಜನ್ನ ಇಬ್ಬರು ಸಹಚರನ್ನು ಕೊಂದ ಪ್ರಕರಣ ವಿಚಾರಣೆ ಕೂಡಾ ಮುಗಿದಿದ್ದು, ಆ.29ರಂದು ಕೋರ್ಟ್ ತೀರ್ಪು ನೀಡಲಿದೆ. ಮಲಬಾರಿ ಸಹಚರ, ಪಿಸ್ತೂಲ್ ಹೊಂದಿದ್ದ ಮೊಹಮದ್ ಹಾಸೀಮ್ಗೂ ಕೋರ್ಟ್ ಶಿಕ್ಷೆ ವಿಧಿಸಿದೆ.
ಇಬ್ಬರು ಗಣ್ಯರ ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ 2009ರಲ್ಲಿ ಅಂದಿನ ಡಿಸಿಐಬಿ ಇನ್ಸ್ಪೆಕ್ಟರ್ ಎಚ್.ಎನ್. ವೆಂಕಟೇಶ್ ಪ್ರಸನ್ನ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದರು. ಈತನ ಬಳಿಯಿಂದ 9 ಎಂ.ಎಂ. ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈತನ ಜತೆಯಲ್ಲಿ ಸಹಚರ ಸೊಹೈಲ್ ಇಸ್ಮಾಯಿಲ್ನನ್ನೂ ಬಂಧಿಸಲಾಗಿತ್ತು. ಇದಕ್ಕೆ ಮೊದಲು ಇತರೆ ಸಹಚರರಾದ ಹಾಸಿಂ, ಸಯಾಫ್, ಇಬ್ಬು ಅಲಿಯಾಸ್ ಇಸುಬು ಸೆರೆ ಸಿಕ್ಕಿದ್ದರು. ಅವರಿಂದಲೂ 9 ಎಂ.ಎಂ. ಪಿಸ್ತೂಲ್ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ, ಮಂಜುನಾಥ್ ಭಟ್ ಪಡ್ನೆ ವಾದಿಸಿದ್ದರು.