ಭೈರಪ್ಪ ವಿರುದ್ಧ ಮಂಗಳೂರಿನಲ್ಲಿ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್ನಲ್ಲಿ ತಡೆಯಾಜ್ಞೆ
ಮಂಗಳೂರು: ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ವಿರುದ್ಧ ಮಂಗಳೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ ವಿರುದ್ಧ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಮತಾಂತರ ವಿರುದ್ಧ ಎಲ್.ಎಲ್. ಭೈರಪ್ಪ ದಿನಪತ್ರಿಕೆಯಲ್ಲಿ ಲೇಖನ ಬರೆದಿದ್ದರು. ಹಿಂದುಗಳನ್ನು ಆಮಿಷ ಒಡ್ಡಿ ಮತ್ತು ಬಲಾತ್ಕರಿಸಿ ಮತಾಂತರಗೊಳಿಸುವುದರ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರವಿದೆ, ಇದಕ್ಕೆ ಕೋಟ್ಯಂತರ ರುಪಾಯಿ ವಿದೇಶದಿಂದ ಬರುತ್ತಿದೆ ಎಂದು ಲೇಖನದಲ್ಲಿ ಎಸ್.ಎಲ್.ಭೈರಪ್ಪ ಹೇಳಿದ್ದರು. ಮತಾಂತರಗೊಂಡ ಹಿಂದುಗಳಿಗೆ ಉನ್ನತ ರಾಜಕೀಯ ಮತ್ತು ಸ್ಥಾನಮಾನ ನೀಡುವ ಮೂಲಕ ಮತಾಂತರಿಸಲಾಗುತ್ತಿದೆ. ಪೂರ್ವಾಂಚಲ ರಾಜ್ಯಗಳಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸಾವಿರಾರು ಹಿಂದುಗಳನ್ನು ಆಮಿಷ ಒಡ್ಡಿ ಮತ್ತು ಗುಪ್ತವಾಗಿ ಮತಾಂತರ ಮಾಡಲಾಗುತ್ತಿದೆ. ಮತಾಂತರದಿಂದ ದೇಶಾಂತರ ಕೂಡಾ ಆಗುತ್ತದೆ ಎಂದು ಭೈರಪ್ಪ ಬರೆದಿದ್ದರು.
ಇದರಿಂದ ತಮ್ಮ ಧಾರ್ಮಿಕ ಭಾವನೆ ಹಾಗೂ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ಎಸ್.ಎಲ್. ಭೈರಪ್ಪ ಹಾಗೂ ಪತ್ರಿಕಾ ಸಂಪಾದಕರ ವಿರುದ್ಧ ಕೆಲವರು ಕೇಸ್ ದಾಖಲಿಸಿದ್ದರು. ಇದರ ವಿರುದ್ಧ ಎಸ್.ಎಲ್. ಭೈರಪ್ಪ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಭೈರಪ್ಪ ಅವರು ಹಿರಿಯ ಸಾಹಿತಿಯಾಗಿದ್ದು, ಸತ್ಯ ವಿಚಾರಗಳನ್ನು ಪ್ರಕಟಪಡಿಸುವುದು ಅವರ ಅಭಿವ್ಯಕ್ತಿ ಸ್ವಾತಂತ್ರದ ಮೂಲಭೂತ ಹಕ್ಕು. ಇದರಿಂದ ಯಾವುದೇ ಅಪರಾಧ ಅಗುವುದಿಲ್ಲ ಎಂದು ವಾದ ವಾದಿಸಲಾಗಿತ್ತು. ವಾದ ಪರಿಗಣಿಸಿದ ಹೈಕೋರ್ಟ್ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ. ಹೈಕೋರ್ಟ್ನಲ್ಲಿ ಎಸ್.ಎಲ್.ಭೈರಪ್ಪ ಪರವಾಗಿ ನ್ಯಾಯವಾದಿ ಪಿ.ಪಿ. ಹೆಗ್ಡೆ ವಾದಿಸಿದ್ದರು.