ಆಮದು ಅಡಕೆಗೆ ಶೇ.150 ಸುಂಕ ವಿಧಿಸಿ
ಮಂಗಳೂರು: ಕೇಂದ್ರ ಸರ್ಕಾರ ಸಾರ್ಕ್ ಮತ್ತು ಸಾಪ್ತಾ ದೇಶಗಳಿಂದ ಬರುವ ಅಡಕೆ ಆಮದಿನ ಸುಂಕವನ್ನು ಶೇ.150 ವಿಧಿಸಲು ಮುಂದಿನ ಬಜೆಟ್ನಲ್ಲಿ ಕ್ರಮಕೈಗೊಳ್ಳುವಂತೆ ಕೇರಳ, ಕರ್ನಾಟಕ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಆಗ್ರಹಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಕಳೆದ 9 ತಿಂಗಳಿಂದ ಸುಮಾರು 500 ಕೋಟಿ ರುಪಾಯಿ ಮೌಲ್ಯದ ಅಡಕೆ ಶೂನ್ಯ ಆಮದು ಸುಂಕದಲ್ಲಿ ಸಾಪ್ತಾ ದೇಶಗಳಿಂದ ಭಾರತಕ್ಕೆ ಬರುತ್ತಿದೆ. ಬರ್ಮಾ, ನೇಪಾಳ, ಬಾಂಗ್ಲಾ, ಭೂತಾನ್, ಶ್ರೀಲಂಕಾ ಹಾಗೂ ಅಪ್ಘಾನಿಸ್ಥಾನ ಇವು ಸಾಪ್ತಾ ದೇಶಗಳಾಗಿದ್ದು, ಇಲ್ಲಿಂದ ಅಡಕೆ ಆಮದಿಗೆ ಯಾವುದೇ ಸುಂಕ ನೀಡಬೇಕಾಗಿಲ್ಲ. ಆದ್ದರಿಂದ ಸುಂಕ ರಹಿತವಾಗಿ ಹೇರಳ ಪ್ರಮಾಣದಲ್ಲಿ ಅಡಕೆ ಭಾರತಕ್ಕೆ ಬರುತ್ತಿದೆ. ಹೀಗೆ ಆಮದು ಅಡಕೆಯಲ್ಲಿ ಶೇ.63 ಬಾಂಗ್ಲಾ ಮೂಲಕ ದೇಶಕ್ಕೆ ಬಂದರೆ, ಇಂಡೋನೇಶಿಯಾ ಮತ್ತು ಇತರೆ ರಾಷ್ಟ್ರಗಳಿಂದ ಬಾಂಗ್ಲಾಕ್ಕೆ ಬಂದ ಅಡಕೆ ಮೂಲರಾಷ್ಟ್ರದ ನಕಲು ಪ್ರಮಾಣ ಪತ್ರದ ಮೂಲಕ ಆಮದಾಗುತ್ತಿದೆ ಎಂಬ ಗುಮಾನಿ ಇದೆ. ಈ ಅಕ್ರಮ ವ್ಯಾಪಾರದಿಂದ ಕೇಂದ್ರ ಬೊಕ್ಕಸಕ್ಕೆ 500ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಈ ಅಕ್ರಮ ಆಮದು ಬಗ್ಗೆ ಕ್ಯಾಂಪ್ಕೋ ನಿಯೋಗ ಕೇಂದ್ರ ವಾಣಿಜ್ಯ ತೆರಿಗೆ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಲಿಖಿತವಾಗಿ ಆಗ್ರಹಿಸಿದೆ ಎಂದರು.
ಕೇಂದ್ರಕ್ಕೆ ಸಲ್ಲಿಸಿದ ಬೇಡಿಕೆ: ಭಾರತದ ಬೇಡಿಕೆ ಪ್ರಮಾಣದಷ್ಟು ಅಡಕೆಯನ್ನು ದೇಶದ 12 ರಾಜ್ಯಗಳಲ್ಲಿ ಬೆಳೆಸಲಾಗುತ್ತಿದೆ. ಆದ್ದರಿಂದ ಸಾಪ್ತಾ ಮತ್ತು ಸಾರ್ಕ್ ದೇಶಗಳಿಂದ ಅಡಕೆ ಆಮದನ್ನು ದೇಶದ ಬೆಳೆಗಾರರ ಹಿತದೃಷ್ಟಿಯಿಂದ ಸ್ಥಗಿತಗೊಳಿಸಬೇಕು. ಕೇಂದ್ರದ ಡಿ.ಜಿ.ಎಫ್.ಟಿ. ಅಧಿಕಾರಿಗಳು ಆಮದು ಅಡಕೆ ಮೇಲೆ ಸೂಕ್ತ ನಿಗಾ ವಹಿಸಬೇಕು ಮತ್ತು ಆಮದು ಅಡಕೆಯ ಪ್ರಸಕ್ತ ಕನಿಷ್ಟ ದರವನ್ನು ಕೇಜಿಗೆ ರು. 40ರಷ್ಟು ಹೆಚ್ಚಿಸಲು( 115)ಕ್ರಮಕೈಗೊಳ್ಳಬೇಕು. ಅಡಕೆ ಕೃಷಿ ಯಾಂತ್ರೀಕರಣಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದರು. ರಾಜ್ಯ ಸಭಾಸದಸ್ಯ ಆಸ್ಕರ್ ಫೆರ್ನಾಂಡಿಸ್, ರಾಜ್ಯದ ಸಂಸದರು, ಡಿಜಿಎಫ್ಟಿ ಮಹಾನಿರ್ದೇಶಕ ಅನುಪ್ ಪೂಜಾರಿ ಮತ್ತಿತರರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ ಎಂದರು.
ತೆರಿಗೆ ವಿನಾಯ್ತಿ ಇರಲಿ: ಸಹಕಾರಿ ಸಂಸ್ಥೆಗಳಿಗೆ ನೇರ ತೆರಿಗೆ ಸಂಹಿತೆ ಸೆಕ್ಷನ್ 80ಪಿಯಲ್ಲಿ ನೀಡಿರುವ ವಿನಾಯ್ತಿಯನ್ನು ಹಿಂತೆಗೆದುಕೊಳ್ಳುವ ಪ್ರಸ್ತಾಪದಿಂದ ದೇಶದಲ್ಲಿ ಸಕ್ರಿಯವಾಗಿರುವ 6 ಲಕ್ಷಕ್ಕೂ ಅಧಿಕ ಸಹಕಾರಿ ಸಂಸ್ಥೆಗಳಿಗೆ ಮರಣ ಶಾಸನವಾಗಲಿದೆ. ಇದು ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಗಂಭೀರ ವ್ಯತಿರಿಕ್ತ ಪರಿಣಾಮ ಬೀರಬಹುದು. ದೇಶದ ಆರ್ಥಿಕತೆಯ ಬೆನ್ನುಲುಬಾದ ಕೃಷಿಕ ಮತ್ತು ಬಡಜನತೆಗೆ ಹಳ್ಳಿ ಪ್ರದೇಶಗಳಲ್ಲಿ ಬ್ಯಾಂಕಿನಂತೆ ಸೇವೆ ಸಲ್ಲಿಸುತ್ತಿರುವ ಸಹಕಾರಿ ಸಂಸ್ಥೆಗಳನ್ನು ಸಂರಕ್ಷಿಸುವುದು ಸಂವಿಧಾನಿಕ ಕರ್ತವ್ಯವಾಗಿದೆ. ಆದ್ದರಿಂದ ಸೂಚಿತ ನೇರ ತೆರಿಗೆ ಸಂಹಿತೆಯಲ್ಲಿ ಆದಾಯ ತೆರಿಗೆ 80 ಪಿ ಕಲಂನಲ್ಲಿ ಸಹಕಾರಿ ಸಂಸ್ಥೆಗಳಿಗೆ ಆದಾಯ ತೆರಿಗೆಯಿಂದ ಇರುವ ವಿನಾಯ್ತಿಯನ್ನು ಹಿಂದೆ ಇದ್ದ ಹಾಗೆ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಈ ಎರಡು ವಿಷಯಕ್ಕೆ ಸಂಬಂಧಿಸಿ ಬಜೆಟ್ ಅಧಿವೇಶನ ವೇಳೆಗೆ ಅಡಕೆ ಬೆಳೆಯುವ ಪ್ರದೇಶಗಳ ಜನಪ್ರತಿನಿಧಿಗಳ ಸಭೆ ಕರೆಯಲು ಉದ್ದೇಶಿಸಲಾಗಿದೆ ಮತ್ತು ಸಂಸದರ ನಿಯೋಗವನ್ನು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಮತ್ತು ವಾಣಿಜ್ಯ ಸಚಿವ ಆನಂದ ಶರ್ಮಾ ಬಳಿಗೆ ಕರೆದೊಯ್ಯಲಾಗುವುದು ಎಂದರು. ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಇದ್ದರು.