ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಾಲಿಕೆ ಆರೋಗ್ಯಾಧಿಕಾರಿ ಮನೆಗೆ ಲೋಕಾ ದಾಳಿ

Srinivasa Murthy VN
Updated On : 17 Feb 2013, 2:37 am

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಶಿವಲಿಂಗ ಕೊಂಡದಕುಳಿ ಅವರ ಮಂಗಳೂರು ಮತ್ತು ಬಿಜಾಪುರದ ಮನೆಗೆ ಶನಿವಾರ ಏಕಕಾಲದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಮಿತಿಗಿಂತ ಅಧಿಕ ಆಸ್ತಿಪಾಸ್ತಿ ಹೊಂದಿರುವುದನ್ನು ಪರಿಶೀಲನೆ ನಡೆಸಿ, ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಕಪಿತಾನಿಯೊ ಬಳಿಯ ನಲಪ್ಪಾಡ್ ಪ್ರೆಸಿಡೆನ್ಸಿ ಫ್ಲ್ಯಾಟ್ಗೆ ಮುಂಜಾನೆ 6 ಗಂಟೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಮನೆಯಲ್ಲಿರುವ ದಾಖಲೆ ಪತ್ರಗಳನ್ನು ಪರಿಶೀಲಿಸಿ ವಶಪಡಿಸಿದ್ದಾರೆ. ಈ ಫ್ಲ್ಯಾಟ್ನ 5ನೇ ಮಹಡಿಯಲ್ಲಿ 501 ಮತ್ತು 507 ನಂಬರ್ನ ಕೊಠಡಿಯನ್ನು ಇವರು ಖರೀದಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಎರಡು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ ಎನ್ನಲಾಗಿದ್ದು, ಇದಲ್ಲದೆ 900 ಗ್ರಾಂ ಚಿನ್ನ, 3 ಕಿಲೋ ಬೆಳ್ಳಿಯನ್ನು ವಶಪಡಿಸಲಾಗಿದೆ.
ಇದೇ ವೇಳೆ ಬಿಜಾಪುರದ ನಿವಾಸದಿಂದಲೂ ರು. 45 ಲಕ್ಷ ನಗದು, 133 ಗ್ರಾಂ ಚಿನ್ನವನ್ನು ವಶಪಡಿಸಲಾಗಿದೆ. ಭ್ರಷ್ಟಾಚಾರ ಮೂಲಕ ಕೋಟಿಗಟ್ಟಲೆ ಸಂಪಾದಿಸಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಐಜಿಪಿ ಸತ್ಯನಾರಾಯಣ ರಾವ್ ಮಾರ್ಗದರ್ಶನದಲ್ಲಿ ಎಸ್ಪಿ ಮೋಹನದಾಸ್, ಡಿವೈಎಸ್ಪಿ ವಿಠಲದಾಸ ಪೈ, ಇನ್ಸ್ಪೆಕ್ಟರ್ ಉಮೇಶ್ ಶೇಟ್ ಕಾರ್ಯಾಚರಣೆ ನಡೆಸಿದ್ದರು.

ಜಿಲ್ಲೆಯಲ್ಲಿ 2ನೇ ಮಳೆ
ಮಂಗಳೂರು: ಮಂಗಳೂರು ಸಹಿತ ಜಿಲ್ಲೆಯ ಕೆಲವೆಡೆ ಶನಿವಾರ ರಾತ್ರಿ ಎರಡನೇ ಮಳೆಯಾಗಿದೆ. ಶುಕ್ರವಾರ ಮುಂಜಾನೆ ಧಾರಾಕಾರ ಸುರಿದಿದ್ದ ಮಳೆ ಮರುದಿನ ರಾತ್ರಿ ವೇಳೆಗೆ ಮತ್ತೆ ಕಾಣಿಸಿದೆ.
 ರಾತ್ರಿ 10 ಗಂಟೆ ಸುಮಾರಿಗೆ ಬಂದ ಮಳೆ ಕೆಲಹೊತ್ತು ತುಂತುರು ಸುರಿಯಿತು. ಈ ಅಕಾಲಿಕ ಮಳೆ ಬೇಸಗೆಯ ಸೆಕೆಯನ್ನು ಒಂದಷ್ಟು ದೂರ ಮಾಡುವಲ್ಲಿ ಸಫಲವಾಯಿತು. ಶನಿವಾರ ಸಂಜೆಯಾಗುತ್ತಿದ್ದಂತೆ ನಗರದಲ್ಲಿ ತುಸು ಮೋಡದ ವಾತಾವರಣವಿದ್ದು, ತಂಗಾಳಿ ಬೀಸುತ್ತಿತ್ತು.
ಬಂಟ್ವಾಳದಲ್ಲಿ ಧಾರಾಕಾರ ಮಳೆ: ಬಂಟ್ವಾಳ ಪರಿಸರದಲ್ಲಿ ಶನಿವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ರಸ್ತೆಯಲ್ಲಿ ನೀರು ಹರಿವಷ್ಟು ತಾಸುಗಟ್ಟೆ ಮಳೆಯಾಗಿದೆ.

ಮರದ ದಿಮ್ಮಿ ಸಾಗಾಟ: ಓರ್ವ ಸೆರೆ
ಬೆಳ್ತಂಗಡಿ: ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ವೇಣೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಮೂಡುಕೋಡಿಯಿಂದ ಮೂಡುಬಿದಿರೆಗೆ ತೆರಳುತ್ತಿದ್ದ ವಾಹನವನ್ನು ಹೊಸಂಗಡಿ ಎಂಬಲ್ಲಿ ತಡೆದು ನಿಲ್ಲಿಸಿದಾಗ ಅದರಲ್ಲಿ 14 ಸಾಗುವಾನಿ ದಿಮ್ಮಿ, 18 ಹಲಸಿನ ದಿಮ್ಮ ಮತ್ತು 8 ಹೆಬ್ಬಲಸು ದಿಮ್ಮಿಗಳಿರುವುದು ಕಂಡುಬಂತು. ಕೂಡಲೆ ಅವುಗಳನ್ನು ವಶಪಡಿಸಿಕೊಳ್ಳಲಾಯಿತು. ವಾಹನ ಚಾಲಕ ಮುತ್ತಪ್ಪ ಯಾನೆ ಮೊನು ಎಂಬಾತನನ್ನು ಬಂಧಿಸಲಾಗಿದೆ. ಮರದ ದಿಮ್ಮಿಗಳ ಮೌಲ್ಯ ರು. 3 ಲಕ್ಷ ಹಾಗೂ ಟೆಂಪೊ ಮೌಲ್ಯ ರು. 5 ಲಕ್ಷವೆಂದು ಅಂದಾಜಿಸಲಾಗಿದೆ.

ಭಗವಾಧ್ವಜಕ್ಕೆ ಕಿಡಿಗೇಡಿಗಳಿಂದ ಬೆಂಕಿ
ಬೆಳ್ತಂಗಡಿ: ಗುರುವಾಯನಕೆರೆ ಸನಿಹದ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ಎಂಬಲ್ಲಿ ಅನೇಕ ವರ್ಷಗಳಿಂದ ಹಾರಾಡುತ್ತಿದ್ದ ಭಗವಾ ಧ್ವಜಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ವಿದ್ಯಮಾನ ಶುಕ್ರವಾರ ರಾತ್ರಿ ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ. ಧ್ವಜ ಅರೆಬರೆ ಸುಟ್ಟು ಹೋಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ. ಭಾನುವಾರ ಧ್ವಜವನ್ನು ಬದಲಾಯಿಸಲಾಗುವುದು ಎಂದು ಅಲ್ಲಿನ ನಾಗರಿಕರು ತಿಳಿಸಿದ್ದಾರೆ.

ರಿಕ್ಷಾ ಪಲ್ಟಿ: ಪ್ರಯಾಣಿಕ ಸಾವು
ಮಂಗಳೂರು: ವಾಮಂಜೂರಿನಲ್ಲಿ ಆಟೋರಿಕ್ಷಾ ಪಲ್ಟಿಯಾಗಿ ಪ್ರಯಾಣಿಕ ಪದವಿನಂಗಡಿ ನಿವಾಸಿ ಭೋಜ ಎಂಬಾತ ಸಾವಿಗೀಡಾದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಮುಂಬಯಿನಿಂದ ಊರಿಗೆ ಬಂದಿದ್ದ ಭೋಜ, ತನ್ನಿಬ್ಬರು ಸಂಗಡಿಗರ ಜತೆ ರಿಕ್ಷಾದಲ್ಲಿ ಕಿನ್ನಿಗೋಳಿಯಲ್ಲಿ ಯಕ್ಷಗಾನ ನೋಡಿ ವಾಪಾಸ್ ಆಗುತ್ತಿದ್ದಾಗ ಮಧ್ಯರಾತ್ರಿ ರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿತ್ತು. ಘಟನೆಯಲ್ಲಿ ಭೋಜ ಸ್ಥಳದಲ್ಲೇ ಮೃತಪಟ್ಟರೆ, ಪ್ರಯಾಣಿಕರಾದ ಶ್ರೀನಿವಾಸ, ಲಕ್ಷ್ಮಣ ಗಾಯಗೊಂಡಿದ್ದಾರೆ. ಕಂಕನಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾರು ಕಳವು, ಸುಲಿಗೆ ಆರೋಪಿ ಸೆರೆ
ಮಂಗಳೂರು: ನಗರದ ರಥಬೀದಿಯಲ್ಲಿ ಕಾರನ್ನುಕಳವು ಮಾಡಿ ಕೇರಳದಲ್ಲಿ ಮಹಿಳೆಗೆ ಡಿಕ್ಕಿಹೊಡೆದು ಆಕೆಯ ಚಿನ್ನಾಭರಣ ದರೋಡೆ ಮಾಡಿದ ಆರೋಪಿಯನ್ನು ಬಂದರು ಪೊಲೀಸರ ತಂಡ ಬಂಧಿಸಿದೆ.
ಮಂಗಳೂರಿನ ಬೆಂಗರೆ ನಿವಾಸಿ ಅಬ್ಬಾಸ್ ಯಾನೆ ಜಾಹೀರ್ ಅಬ್ಬಾಸ್ ಯಾನೆ ಇಬ್ನೂ ಅಬ್ಬಾಸ್(32)ಬಂಧಿತ ಆರೋಪಿ. ಈತನ ವಿರುದ್ಧ ನಾಲ್ಕು ಪ್ರಕರಣ ದಾಖಲಾಗಿದೆ. ಬಂದರು ಠಾಣೆಯಲ್ಲಿ 2 ವಾಹನ ಕಳವು, ಪಾಂಡೇಶ್ವರದಲ್ಲಿ 1 ವಾಹನ ಕಳವು, ಚಿನ್ನ ಕಳವು ಪ್ರಕರಣ ದಾಖಲಾಗಿದೆ. ಕೇರಳ ಕಣ್ಣೂರು ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ರಥಬೀದಿಯಿಂದ ಕಾರು ಕಳವು ಮಾಡಿದ ಆರೋಪಿಯು ಕಣ್ಣೂರಿನಲ್ಲಿ ರೇಷ್ಮಾ ಎಂಬಾಕೆಗೆ ಡಿಕ್ಕಿಹೊಡೆಸಿ ಆಕೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದ.
 ಬಂಧಿತ ಆರೋಪಿಯಿಂದ 2 ಕಾರು, 5 ಪವನ್ ಚಿನ್ನವನ್ನು ವಶಪಡಿಸಲಾಗಿದೆ. ಇವುಗಳ ಮೌಲ್ಯ ರು. 2.50 ಲಕ್ಷ ಎನ್ನಲಾಗಿದ್ದು, ಬಂದರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಬಂದರು ಇನ್ಸ್ಪೆಕ್ಟರ್ ಮಂಜುನಾಥ ಶೆಟ್ಟಿ, ಎಸ್ಐ ರವಿಶಂಕರ್, ಎಎಸ್ಐ ಶಶಿಕಾಂತ್, ಸಿಬ್ಬಂದಿಗಳಾದ ಜನಾರ್ದನ, ಮಣಿ, ವಿನೋದ್ ಕುಮಾರ್, ಸುಬ್ರಹ್ಮಣ್ಯ, ಲಕ್ಷ್ಮೀಕಾಂತ್ ತಂಡ ಕಾರ್ಯಾಚರಣೆ ನಡೆಸಿತ್ತು.

ಮುದ್ದಾಡಿಯಲ್ಲಿ ಕೃಷಿ ಉತ್ಸವ
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ಇಲ್ಲಿನ ಬಜಿರೆ ಮುದ್ದಾಡಿಯಲ್ಲಿ ಕೃಷಿ ಉತ್ಸವ ವೈಭವದಿಂದ ನಡೆಯುತ್ತಿದೆ. ಕೃಷಿ ಮೇಳದಲ್ಲಿ ಏತ ನೀರಾವರಿ ಹೇಗೆ ಮಾಡುತ್ತಿದ್ದರು ಎಂಬ ಪ್ರಾತ್ಯಕ್ಷಿಕೆ ನಿರಂತರವಾಗಿ ನಡೆಯುತ್ತಿದ್ದು, ವಿಶೇಷವಾಗಿ ಮಕ್ಕಳನ್ನು ಬೆರಗುಗೊಳಿಸಿತು. ಅಲ್ಲದೆ, 50 ವರ್ಷಗಳ ಹಿಂದೆ ಪ್ರತಿ ಮನೆಯಲ್ಲಿದ್ದ ಬೀಸು ಕಲ್ಲು, ಶ್ಯಾವಿಗೆ ಮಣೆ, ಉಜ್ಜೇರುವಿನಂತಹ ಪರಿಕರಗಳನ್ನೂ ಇಡಲಾಗಿದೆ. ಭಾನುವಾರ ಪರ್ಯಾಯ ಇಂಧನ ಅನಿವಾರ್ಯತೆ ಮತ್ತು ಅವಕಾಶಗಳು ಬಗ್ಗೆ ಗೋಷ್ಠಿ, ಮಹಿಳಾ ವಿಚಾರಗೋಷ್ಠಿ, ಕೃಷಿಯ ಜೀವನಾಡಿ ಹೈನುಗಾರಿಕೆ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಜಾನುವಾರು ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.

ವೃಂದಾವನ ಸಮುಚ್ಚಯಕ್ಕೆ ಶಿಲಾನ್ಯಾಸ
ಮಂಗಳೂರು: ಮಣ್ಣಗುಡ್ಡೆಯ ನಿಧಿಲ್ಯಾಂಡ್ ಸಂಸ್ಥೆ ವೃಂದಾವನ ಸಮುಚ್ಚಯಕ್ಕೆ ಶುಕ್ರವಾರ ಶಿಲಾನ್ಯಾಸ ನಡೆಯಿತು. ಈ ಸಂದರ್ಭ ಸಮುಚ್ಚಯದ ಬ್ರೋಷರನ್ನು ಮೋತಿ ಶ್ಯಾಂ ಕಾಂಪ್ಲೆಕ್ಸ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಅರ್ಶದ್ ಬಿಡುಗಡೆಗೊಳಿಸಿದರು. ಚಿತ್ರಣವನ್ನು ಕರ್ಣಾಟಕ ಬ್ಯಾಂಕಿನ ಮಹಾಪ್ರಬಂಧಕ ಉಪೇಂದ್ರ ಪ್ರಭು ಅನಾವರಣಗೊಳಿಸಿದರು. ಫಾ. ವಿಕ್ಟರ್ ರೆಬೆಲ್ಲೊ, ನಿಧಿಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ. ಪ್ರಶಾಂತ್ ಸಾನಿಲ್, ನಿರ್ದೇಶಕ ಶರಶ್ಚಂದ್ರ ಸಾನಿಲ್ ಹಾಜರಿದ್ದರು.
ವೈಶಿಷ್ಟತೆಗಳು: ಒಟ್ಟು 1.7 ಎಕರೆ ವಿಸ್ತೀರ್ಣದಲ್ಲಿ ಸಮುಚ್ಚಯ ನಿರ್ಮಾಣಗೊಳ್ಳಲಿದೆ. ಕೆಳಮಹಡಿ ಒಳಗೊಂಡಂತೆ ಒಟ್ಟು 6 ಮಹಡಿ ಹೊಂದಿದೆ. 109 ಮನೆಗಳನ್ನು ಹೊಂದಿದ ಸಮುಚ್ಚಯ ಅತ್ಯಾಧುನಿಕ ಗುಣಮಟ್ಟದ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ. ಮಂಗಳೂರಿನ ಕೇಂದ್ರಭಾಗ ಮಣ್ಣಗುಡ್ಡೆಯಲ್ಲಿ ನಿರ್ಮಾಣಗೊಳ್ಳುವುದರಿಂದ ಶಾಂಪಿಂಗ್ ಮಾಲ್ಗಳು, ಶಾಲಾಕಾಲೇಜುಗಳು, ಬಸ್ ನಿಲ್ದಾಣ, ಮಾರುಕಟ್ಟೆ ಸುಲಭವಾಗಿ ತಲುಪಬಹುದಾಗಿದೆ.

ಇಂದಿನಿಂದ ರಾಷ್ಟ್ರೀಯ ಯುವ ಸಪ್ತಾಹ
ಪುತ್ತೂರು: ಸವಣೂರು ಯುವಕ ಮಂಡಲದ ಆಶ್ರಯದಲ್ಲಿ ಇಲ್ಲಿನ ಯುವ ಸಭಾಭವನ ವಠಾರದಲ್ಲಿ 17ರಿಂದ 23ರವರೆಗೆ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮ ನಡೆಯಲಿದೆ ಎಂದು ಯುವಕ ಮಂಡಲದ ಕಾರ್ಯಕಾರಿ ಸಮಿತಿ ಸದಸ್ಯ ಗಿರಿಶಂಕರ ಸುಲಾಯ ತಿಳಿಸಿದ್ದಾರೆ. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ  ಮಾತನಾಡಿ, ಫೆ. 17ರಂದು ಬೆಳಗ್ಗೆ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ತುಳು ಗೊಬ್ಬುಲು ಕ್ರೀಡಾಕೂಟ, ಸಂಜೆ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ಸಪ್ತಾಹವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ. ಸುಳ್ಯ ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಸಂಚಾಲಕ ಕೆ. ಸೀತಾರಾಮ ರೈ ಸವಣೂರು,  ವೈದ್ಯ ಡಾ.ಎಂ.ಕೆ. ಪ್ರಸಾದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸವಣೂರು ಯುವಕ ಮಂಡಲ ಕಾರ್ಯದರ್ಶಿ ರಾಜೇಶ್, ಮಾಜಿ ಅಧ್ಯಕ್ಷ ದಿನೇಶ್ ಮದು, ಮಹೇಶ್ .ಕೆ ಹಾಜರಿದ್ದರು.

ಇಂದಿನಿಂದ ಸಾಹಿತ್ಯ ಅಧ್ಯಯನ ಶಿಬಿರ
ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಕನ್ನಡ ಸಂಘ ಹಾಗೂ ನೀನಾಸಂ ಪ್ರತಿಷ್ಠಾನ ಹೆಗ್ಗೋಡು ಸಹಯೋಗದಲ್ಲಿ 15ನೇ ವರ್ಷದ ರಾಜ್ಯ ಮಟ್ಟದ ಸಾಹಿತ್ಯ ಅಧ್ಯಯನ ಶಿಬಿರ ಫೆ.17 ಮತ್ತು 18 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಇಂದಿನಿಂದ ಬ್ರಹ್ಮಕಲಶೋತ್ಸವ
ಪುತ್ತೂರು: ಬೆಟ್ಟಂಪ್ಪಾಡಿಯ ಶ್ರೀಮಹಾಲಿಂಗೇಶ್ವರ ದೇವಸ್ಥಾನ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆ.17ರಿಂದ 25ರತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು. ಫೆ.17ರಂದು ನಡೆಯುವ 'ಹಸಿರು ಹೊರೆ ಕಾಣಿಕೆ' ಮೆರವಣಿಗೆಯನ್ನು ಪುತ್ತೂರು ಪ್ರಸಾದ್ ಇಂಡಸ್ಟ್ರೀಸ್ನ ಶಿವಪ್ರಸಾದ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಫೆ.18ರಿಂದ 24ರವರೆಗೆ ಸಂಜೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇಂದು ಸಭಾಭವನ ಉದ್ಘಾಟನೆ
ಪುತ್ತೂರು: ಇಲ್ಲಿನ ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾದ ಸಮಾಜ ಮಂದಿರದ ಮೇಲಂತಸ್ತಿನ ಸಭಾಭವನದ ಉದ್ಘಾಟನಾ ಸಮಾರಂಭ ಫೆ.17ರಂದು ಬೆಳಿಗ್ಗೆ 10 ಗಂಟೆಗೆ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಮರಾಠಿ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಮಂಜುನಾಥ ನಾಯ್ಕ ತಿಳಿಸಿದ್ದಾರೆ.

ಮಂಗಳೂರು: ಇಂದು ವಿದ್ಯುತ್ ಇಲ್ಲ
ಮಂಗಳೂರು: ಕಾವೂರು ಕೆಐಒಸಿಎಲ್ ಲೈನಿನಲ್ಲಿ ದುರ್ಬಲ ಜಂಪ್ಗಳನ್ನು ಬದಲಾಯಿಸುವ ಹಾಗೂ ತುರ್ತು ನಿರ್ವಾಹಣಾ ಕಾಮಗಾರಿ ನಡೆಯಲಿರುವುದರಿಂದ ಫೆ. 17 ರಂದು ಬೆಳಗ್ಗೆ 10 ರಿಂದ ಅಪರಾಹ್ನ 3ರ ತನಕ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಮಂಗಳೂರು ಮೆಸ್ಕಾಂ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಲುಗಡೆ ಪ್ರದೇಶ: ಎಂಸಿಎಫ್, ಎಂಆರ್ಪಿಎಲ್, ಕೆಐಓಸಿಎಲ್, ರುಚಿಸೋಯಾ, ಎನ್ಎಂಪಿಟಿ, ಹೆಚ್ಪಿಸಿಎಲ್, ಬಿಎಎಸ್ಎಫ್, ಬ್ರೈಟ್ ಪ್ಯಾಕೇಜರ್ಸ್, ರಾಜಶ್ರೀ ಪ್ಯಾಕೇಜರ್ಸ್, ಪಣಂಬೂರು ಹಾಗೂ ಬೈಕಂಪಾಡಿ ವಿದ್ಯುತ್ ಉಪಕೇಂದ್ರದಿಂದ ಸರಬರಾಜಾಗುವ ಪ್ರದೇಶಗಳು.

ಕಟೀಲಿನಲ್ಲಿ ಇಂದು ಉಪನ್ಯಾಸ
ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಝೇಂಕಾರ ಬಳಗದ ಆಶ್ರಯದಲ್ಲಿ 17ರಂದು ಸಂಜೆ ಜರಗಲಿರುವ ಚಿಂತನಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಪ್ರತಾಪ್ ಸಿಂಹ ನಾಯಕ್ ಅವರಿಂದ ಏಕಾತ್ಮ ಮಾನವತಾವಾದದ ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಜರಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement