ರು. 1.7 ಕೋಟಿ ಮೌಲ್ಯ ಚಿನ್ನ ವಶ, ಆರೋಪಿ ಸೆರೆ
ಮಂಗಳೂರು: ದುಬೈನಿಂದ ವಿಮಾನದಲ್ಲಿ ಅಕ್ರಮವಾಗಿ ತಂದ 6 ಕಿಲೋ ಚಿನಢಿವನ್ನು ಮಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಶನಿವಾರ ಕೆಂಜಾರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡು ಆರೋಪಿ ಭಟ್ಕಳ ನಿವಾಸಿ ಅಪ್ರೋಲ್ ಎಂಬಾತನನ್ನು ಬಂಧಿಸಿದ್ದಾರೆ. ಮಧ್ಯಾಹ್ನ ದುಬೈನಿಂದ ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಆಗಮಿಸಿದ ಈತನನ್ನು ತಪಾಸಣೆ ನಡೆಸಿದಾಗ ಆತನ ಬಳಿ ರು. 1.7 ಕೋಟಿ ಮೌಲ್ಯದ 6 ಕಿಲೋ ಚಿನ್ನ ಪತ್ತೆಯಾಗಿತ್ತು. ದಾಖಲೆಪತ್ರ ರಹಿತ ಸಾಗಾಟ ಮಾಡಿದ ಹಿನ್ನಲೆಯಲ್ಲಿ ಚಿನ್ನವನ್ನು ವಶಪಡಿಸಿದ ಅಧಿಕಾರಿಗಳು, ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಕಸಾಯಿಖಾನೆಗೆ ದಾಳಿ; ನಾಲ್ವರ ಸೆರೆ
ಬಂಟ್ವಾಳ: ಮಂಚಿ ಗ್ರಾಮದ ಸುರಿಬೈಲು ಎಂಬಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ್ದು, ಕಸಾಯಿಖಾನೆಗೆ ತಂದಿದ್ದ 5 ಹೋರಿ ಹಾಗೂ 1 ದನವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಸಮೀನ್, ನಝೀರ್, ಸುಲೈಮಾನ್, ಅಬೂಬಕ್ಕರ್ ಸಿದ್ದೀಕ್ ಎಂದು ಗುರುತಿಸಲಾಗಿದೆ. ಕಲ್ಲಡ್ಕ ಇಸ್ಮಾಯಿಲ್ ಎಂಬವರಿಗೆ ಸೇರಿದ ಕಟ್ಟಡದಲ್ಲಿ ಪರವಾನಗಿ ಪಡೆಯದೆ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಮುಂಜಾನೆ 5 ಗಂಟೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಪೆಟ್ರೋಲ್ಬಂಕ್ನಿಂದ ಕಳವು
ಬಂಟ್ವಾಳ: ಇಲ್ಲಿನ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಎಂಬಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾಲಕ್ಷ್ಮೀ ಎಂಟರ್ಪ್ರೈಸಸ್ ಎನ್ನುವ ಪೆಟ್ರೋಲ್ ಪಂಪ್ ಕಚೇರಿಯ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು 24 ಸಾವಿರ ರುಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಗುರುವಾರ ರಾತ್ರಿ ಈ ಕಳವು ನಡೆದಿದ್ದು ಪೆಂಟ್ರೋಲ್ ಬಂಕ್ನ ಮಾಲೀಕ ಸುರೇಶ್ ಪೈ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶಿ ಬ್ರಾಂಡ್ ಸಿಗರೇಟ್ ವಶ
ಮಂಗಳೂರು: ಸಂಸ್ಥೆಯ ಗುರುತು ಪತ್ರಗಳಿಲ್ಲದೆ ಸಾಗಾಟ ಮಾಡುತ್ತಿದ್ದ ವಿದೇಶಿ ಬ್ರಾಂಡ್ನ ಸಿಗರೇಟ್ ಪ್ಯಾಕೇಟ್ಗಳನ್ನು ಮಂಗಳೂರಿನ ಕಸ್ಟಮ್ಸ್ ಇಲಾಖಾ ಅಧಿಕಾರಿಗಳು ಶನಿವಾರ ಕೆಂಜಾರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿ, ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿದೇಶದಿಂದ ಆಮದು ಮಾಡಿದ 83 ಸಿಗರೇಟ್ ಪ್ಯಾಕೆಟ್ಗಳನ್ನು ವಶಪಡಿಸಲಾಗಿದ್ದು, ಇದರ ಮೌಲ್ಯ ರು. 83 ಸಾವಿರ ಎನ್ನಲಾಗಿದೆ. ಫೆ.15ರಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ದುಬೈನಿಂದ ಮಂಗಳೂರಿಗೆ ಬಂದಿದ್ದ ಪ್ರಯಾಣಿಕರಾದ ಸೈದು ಮಣಕ್ಕಾಡ್ ತೆಕ್ಕೆ ಪೀಡಿಕಯಿಲ್, ಕಾಸರಗೋಡಿನ ಮೈದು ಕುಂಞ ಬಂಗ್ರಕುನ್ನು ಅಬ್ದುಲ್ಲ ಮತ್ತು ಬಂಟ್ವಾಳ ನಿವಾಸಿ ಕುಂಞಕೋಯ ತಂಞಳ್ರನ್ನು ತಪಾಸಣೆ ನಡೆಸಿದಾಗ ಅವರಲ್ಲಿ 83 ವಿದೇಶಿ ಬ್ರಾಂಡ್ನ ಸಿಗರೇಟ್ ಪ್ಯಾಕೇಟ್ ಸಿಕ್ಕಿತ್ತು. ಅವು ಯಾವ ಕಂಪನಿಗೆ ಸೇರಿದ್ದು ಎಂಬ ಮಾಹಿತಿ ಇರಲಿಲ್ಲ. ಈ ಹಿನ್ನಲೆಯಲ್ಲಿ ಮಾದಕದ್ರವ್ಯ, ತಂಬಾಕು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಕಸ್ಟಮ್ಸ್ ಆಯುಕ್ತ ಪುರುಷೋತ್ತಮ ತಿಳಿಸಿದ್ದಾರೆ.
ವಿದ್ಯಾರ್ಥಿ ಆತ್ಮಹತ್ಯೆ
ಮಣಿಪಾಲ: ಇಲ್ಲಿನ ಎಂಜಿನಿಯರಿಂಗ್ ಕಾಲೇಜು ಎಂಐಟಿಯಲ್ಲಿ ವಿದ್ಯಾರ್ಥಿಯೊಬ್ಬ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಮೃತ ಹರ್ಷ ಕಾಲಿಯಾ (20), ಮೂಲತಃ ಮುಂಬೈಯ ಕಾಂಡಿವಿಲಿಯ ನಿವಾಸಿಯಾಗಿದ್ದು, ಎಂಐಟಿಯಲ್ಲಿ ಕಂಪ್ಯೂಟರ್ ಸಾಯನ್ಸ್ ಎಂಜನಿಯರಿಂಗ್ನ 2ನೇ ವರ್ಷದ ವಿದ್ಯಾರ್ಥಿಯಾಗಿದ್ದ. ಅವರು ಕಾಲೇಜಿನ ಹಾಸ್ಟೇಲ್ನ 14ನೇ ಬ್ಲಾಕಿನ 7ನೇ ಮಹಡಿಯಿಂದ ಕೆಳಗೆ ಹಾರಿ ಗಂಭೀರ ಗಾಯಗೊಂಡಿದ್ದವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ. ಮೃತ ಹರ್ಷ ಕಾಲಿಯಾ ಕಲಿಕೆಯಲ್ಲಿ ಹಿಂದೆ ಇದ್ದು, ಅದರಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರಾಜೇಶ್ ಕುಮಾರ್ ಲಖನ್ಪಾಲ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಬ್ರೇಕ್ ಹಾಕಿದ ಬಸ್; ಲಾರಿ ನಜ್ಜುಗುಜ್ಜು
ಮೂಲ್ಕಿ: ಸಮೀಪದ ಕೊಲ್ನಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಲ್ಕಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಎಕ್ಪ್ರೆಸ್ ಬಸ್ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಲಾರಿಯ ಮುಂಭಾಗ ನಜ್ಜುಗುಜ್ಜಾಗಿರುವ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಲಾರಿ ಚಾಲಕ ತೀವ್ರ ಗಾಯಗೊಂಡಿದ್ದಾನೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲುಬಾಯಿ ಲಸಿಕೆ ಅಭಿಯಾನ
ಮಂಗಳೂರು: ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನದಂತೆ ಫೆ. 15 ರಿಂದ ಮಾ.21ರ ತನಕ ಕಾಲುಬಾಯಿ ರೋಗ ನಿರೋಧಕ ಲಸಿಕೆ ಕಾರ್ಯಕ್ರಮವು ನಡೆಯಲಿದೆ.
ಬೆಂಕಿ ಆಕಸ್ಮಿಕ: ಮಹಿಳೆ ಸಾವು
ಗಂಗೊಳ್ಳಿ: ಇಲ್ಲಿನ ಗುಜ್ಜಾಡಿ ಗ್ರಾಮದ ಮೆಂಕಿ ಕೆಳಮನೆ ಎಂಬಲ್ಲಿ ಮಹಿಳೆಯೊಬ್ಬರು ಬೆಂಕಿ ಆಕಸ್ಮಿಕದಿಂದ ಮೃತಪಟ್ಟ ಘಟನೆ ನಡೆದಿದೆ. ಮೃತರು ಉಷಾ (40) ಈಕೆ ಜ. 31ರಂದು ಮನೆಯಲ್ಲಿ ಕಟ್ಟಿಗೆ ಒಲೆಯಿಂದ ಅನ್ನದ ಪಾತ್ರೆಯ ತಿಳಿಯನ್ನು ಬಗ್ಗಿಸುತ್ತಿದ್ದಾಗ ಬಟ್ಟೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಮೈಯೆಲ್ಲಾ ಹರಡಿ ತೀವ್ರ ಸುಟ್ಟ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಶುಕ್ರವಾರ ಬೆಳಗ್ಗೆ 6.00 ಗಂಟೆಗೆ ಮೃತಪಟ್ಟಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.