ಪಿಲಿಕುಳ: ಕೃತಕ ಕಾವಿನಿಂದ 36 ಕಾಳಿಂಗಗಳ ಜನನ
ಕನ್ನಡಪ್ರಭ ವಾರ್ತೆ ಮಂಗಳೂರು ಜು.26
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕೃತಕ ಕಾವಿನಿಂದ 36 ಕಾಳಿಂಗ ಮರಿಗಳು ಜನಿಸಿವೆ.
ಧರ್ಮಸ್ಥಳ ಗ್ರಾಮದ ಕೃಷಿಕರೊಬ್ಬರ ತೋಟದಲ್ಲಿ ಅನಾಥವಾಗಿ ಕಂಡು ಬಂದಿದ್ದ ಕಾಳಿಂಗ ಸರ್ಪದ 37 ಮೊಟ್ಟೆಗಳನ್ನು ಉರಗ ಪ್ರಿಯರ ನೆರವಿನಿಂದ ಸಂರಕ್ಷಿಸಿ ಪಿಲಿಕುಳ ಮೃಗಾಯಲಕ್ಕೆ ತರಲಾಗಿತ್ತು. ಜೈವಿಕ ಉದ್ಯಾನವನದ ಉರಗ ಕೇಂದ್ರದಲ್ಲಿ 80 ದಿನಗಳ ಕಾಲ ಕೃತಕ ಕಾವು ನೀಡಿ 36 ಮರಿಗಳು ಮೊಟ್ಟೆಯೊಡೆದು ಹೊರ ಬಂದಿವೆ. ಮರಿಗಳು 1.5 ಅಡಿ ಉದ್ದವಿದ್ದು, ಆರೋಗ್ಯವಾಗಿವೆ. ಕೆಲವು ಸಮಯದ ನಂತರ ಕಾಳಿಂಗ ಮರಿಗಳನ್ನು ಅರಣ್ಯಕ್ಕೆ ಬಿಡಲಾಗುವುದು ಎಂದು ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.
ಮರಿಗಳು ಹುಟ್ಟುವಾಗಲೇ ತೀಕ್ಷ್ಣ ವಿಷ ಹೊಂದಿರುತ್ತದೆ. ಪ್ರಾಣಿ ಸಂಗ್ರಹಾಲಯದಲ್ಲಿ ಸಂತಾನೋತ್ಪತ್ತಿಯ ಬಗ್ಗೆ ವೈಜ್ಞಾನಿಕವಾಗಿ ತಿಳಿಯಲು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ನೆರವಿನಿಂದ ಕಾಳಿಂಗ ಸಂತಾನೋತ್ಪತ್ತಿ ಕೇಂದ್ರ ತೆರೆಯಲಾಗಿದೆ.
ಈ ಹಿಂದೆ ಉದ್ಯಾನವನದಲ್ಲಿ ಮೂರು ಕಾಳಿಂಗಗಳು 80 ಮರಿಗಳಿಗೆ ಜನ್ಮ ನೀಡಿದ್ದು, ಒಂದು ವರ್ಷದ ಬಳಿಕ ಅರಣ್ಯಕ್ಕೆ ಬಿಡಲಾಗಿತ್ತು.