ಅಕ್ಕ ಸತ್ತಳೆಂದು ನೇಣಿಗೆ ಶರಣಾದ ವಿವಿ ಸಹಾಯಕ ಗ್ರಂಥಪಾಲಕ
ಮಂಗಳೂರು: ಪ್ರೀತಿಯ ಅಕ್ಕನ ಅಗಲುವಿಕೆಯಿಂದ ನೊಂದ ಗ್ರಂಥಪಾಲಕರೊಬ್ಬರು ನೇಣಿಗೆ ಶರಣಾದ ಘಟನೆ ಗುರುವಾರ ಮಂಗಳೂರು ವಿ.ವಿ. ಆವರಣದಲ್ಲಿ ಸಂಭವಿಸಿದೆ.
ಕೊಣಾಜೆ ಮಂಗಳಗಂಗೋತ್ರಿಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದಲ್ಲಿ 22 ವರ್ಷದಿಂದ ಸಹಾಯಕ ಗ್ರಂಥಪಾಲಕರಾಗಿರುವ ಬಿಜಾಪುರ ನಿವಾಸಿ ಸಿದ್ಧಲಿಂಗಪ್ಪ ಕುಂಬಾರ(46) ಆತ್ಮಹತ್ಯೆ ಮಾಡಿಕೊಂಡವರು.
ತನ್ನ ಅಕ್ಕನಿಗೆ ಅಸೌಖ್ಯದ ನಿಮಿತ್ತ ವಾರದ ಹಿಂದೆ ಬಿಜಾಪುರಕ್ಕೆ ಹೋಗಿಬಂದಿದ್ದರು. ಆಗ ಪತ್ನಿಯನ್ನು ಅಲ್ಲೇ ಬಿಟ್ಟು ಬಂದು ವಿವಿ ಸಿಬ್ಬಂದಿ ಗೃಹದಲ್ಲಿ ಇಬ್ಬರು ಮಕ್ಕಳೊಂದಿಗೆ ಇದ್ದರು. ಇಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಅಕ್ಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದರಿಂದ ಖಿನ್ನತೆಗೊಳಗಾದ ಸಿದ್ಧಲಿಂಗಪ್ಪ ದಿನೇ ದಿನೇ ಚಿಂತೆಯಲ್ಲಿರುತ್ತಿದ್ದರು. ಬುಧವಾರ ಬೆಳಗ್ಗೆ ಸಿಬ್ಬಂದಿ ಗೃಹದಿಂದ ವಿವಿಗೆ ಹೋಗಿದ್ದ ಸಿದ್ಧಲಿಂಗಪ್ಪ ಸಂಜೆಯಾದರೂ ಮರಳಿ ಬಂದಿರಲಿಲ್ಲ. ವಾಚು ಮತ್ತು ಮೊಬೈಲ್‌ನ್ನು ಮನೆಯಲ್ಲೇ ಬಿಟ್ಟುಹೋಗಿದ್ದರು. ಈ ಬಗ್ಗೆ ಮಕ್ಕಳು ಮತ್ತು ವಿವಿ ಸಿಬ್ಬಂದಿ ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿದ್ಧಲಿಂಗಪ್ಪ ಹಲವು ಬಾರಿ ಮನೆಯಿಂದ ಹೋದವರು ಸಂಜೆ ಮರಳಿ ಬರುತ್ತಿದ್ದರಿಂದ ಪೊಲೀಸರಿಗೆ ದೂರು ನೀಡಿರಲಿಲ್ಲ.
ಗುರುವಾರ ಬೆಳಗ್ಗೆ ವಸತಿಗೃಹ ಹಿಂಬದಿಯ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಸಿದ್ಧಲಿಂಗಪ್ಪರ ಶವ ಪತ್ತೆಯಾಗಿತ್ತು. ಇವರ ಪತ್ನಿ ಬಿಜಾಪುರದಿಂದ ಬುಧವಾರ ಸಂಜೆ ಕೊಣಾಜೆಗೆ ಆಗಮಿಸಿದ್ದರು. ಅಕ್ಕನ ನಿಧನದ ಖಿನ್ನತೆಯಿಂದ ಈ ಕೃತ್ಯವೆಸಗಿದ್ದಾಗಿ ಪತ್ನಿ ಹೇಮಮ್ಮ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.