ಮಾರ್ಗದರ್ಶಿ 'ಎಜುಕೇಷನ್ಫೇರ್'ಗೆ ಚಾಲನೆ
ಮಂಗಳೂರು: ವೃತ್ತಿಪರ ಕೋರ್ಸ್ ಪ್ರವೇಶ ಕುರಿತಂತೆ ಸೂಕ್ತ ಮಾರ್ಗದರ್ಶನ ನೀಡಲು 'ಕನ್ನಡಪ್ರಭ' ಮತ್ತು 'ಇಂಡಿಯನ್ ಎಕ್ಸ್ಪ್ರೆಸ್' ಮಂಗಳೂರಲ್ಲಿ ಹಮ್ಮಿಕೊಂಡಿರುವ 'ಎಜುಕೇಷನ್ ಫೇರ್'ಗೆ ಮಂಗಳೂರಿನ ಬಿಜೈ ಚರ್ಚ್ ಹಾಲ್ನಲ್ಲಿ ಚರ್ಚಿನ ಧರ್ಮಗುರು ರೆ.ಫಾ.ವಿಕ್ಟರ್ ಮಚಾದೊ ಶನಿವಾರ ಚಾಲನೆ ನೀಡಿದರು.
ಪತ್ರಿಕೆ ಹಮ್ಮಿಕೊಂಡ ಎಜುಕೇಷನ್ ಫೇರ್ ಅನ್ನು ಶ್ಲಾಘಿಸಿದರಲ್ಲದೆ, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಮಾರ್ಗಸೂಚಿ. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಆಕಾಂಕ್ಷೆಗೆ ಪೂರಕವಾಗಿ ನೆರವಾಗಲಿ ಎಂದು ಹಾರೈಸಿದರು. ಎಜುಕೇಷನ್ ಫೇರ್ನಲ್ಲಿರುವ ಸ್ಟಾಲ್ಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಕಡೆಗಳಿಂದ ಸುಮಾರು 25ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಈ ಫೇರ್ಗೆ ಆಗಮಿಸಿದ್ದು, ತಮ್ಮಲ್ಲಿನ ಕೋರ್ಸ್ಗಳ ಬಗ್ಗೆ ಪ್ರತಿನಿಧಿಗಳು ಮಾಹಿತಿ ನೀಡಿದರು. ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸ್ಟಾಲ್ಗಳಿಗೆ ಭೇಟಿ ನೀಡಿ, ಭವಿಷ್ಯದಲ್ಲಿ ಯಾವ ಕೋರ್ಸ್ಗೆ ಸೇರಿದರೆ ಉತ್ತಮ ಎಂಬ ಬಗ್ಗೆ ಮಾಹಿತಿ ಪಡೆದರು. ಕೇವಲ ಡಾಕ್ಟರ್, ಎಂಜಿನಿಯರ್ ಅಲ್ಲದೆ ಇತರೆ ಕೋರ್ಸ್ಗಳ ಬಗ್ಗೆಯೂ ವಿದ್ಯಾರ್ಥಿಗಳು ಮಾಹಿತಿ ಪಡೆದರು. 10ನೇ ತರಗತಿಯಿಂದ ಮೇಲ್ಪಟ್ಟ ಎಲ್ಲ ಶಿಕ್ಷಣ ಕೋರ್ಸ್ಗೆ ಸಂಬಂಧಿಸಿ ಮಾಹಿತಿ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳಲ್ಲದೆ, ಹೆತ್ತವರು, ಪೋಷಕರು, ಶಾಲೆಯನ್ನು ಅರ್ಧದಲ್ಲೇ ಬಿಟ್ಟವರೂ ಈ ಫೇರ್ಗೆ ಆಗಮಿಸಿ ಮಾಹಿತಿ ಪಡೆಯುತ್ತಿದ್ದರು.
25 ಶಿಕ್ಷಣ ಸಂಸ್ಥೆಗಳ ಪೈಕಿ ಮಂಗಳೂರಿನ ಐದು ಶಿಕ್ಷಣ ಸಂಸ್ಥೆಗಳು ಭಾಗಹಿಸಿತ್ತು. ಕೆಲವು ಮಂದಿ ವಿದ್ಯಾರ್ಥಿಗಳು ಸ್ಥಳದಲ್ಲೇ ಪ್ರವೇಶ ಪಡೆದರು.
ಅಂಥವರಿಗೆ ಶುಲ್ಕದಲ್ಲಿ ರಿಯಾಯ್ತಿ ನೀಡಲಾಗಿತ್ತು. 6ರೀವ್ಸ್ ಈವೆಂಟ್ ಸಂಸ್ಥೆ ನಿರ್ದೇಶಕ ಯುವರಾಜ್, ಸಂಪರ್ಕಾಧಿಕಾರಿ ಕಿರಣ್ ಕುಮಾರ್, ಇಂಡಿಯನ್ ಎಕ್ಸ್ಪ್ರೆಸ್ ಪಬ್ಲಿಕೇಷನ್ ಲಿಮಿಟೆಡ್ ಮಂಗಳೂರು ವ್ಯವಸ್ಥಾಪಕ ಎಸ್.ಕೆ. ದಾಸ್ ಹಾಜರಿದ್ದರು.
ಇಂದು ಉಡುಪಿಯಲ್ಲಿ
ಉಡುಪಿ: ಶಿಕ್ಷಣಕ್ಕೆ ಸಂಬಂಧಪಟ್ಟಂತೆ 'ಕನ್ನಡಪ್ರಭ' ಮತ್ತು 'ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆಗಳ ಸಮಾಜಮುಖಿ ಕಾಳಜಿಯ ಹಿನ್ನೆಲೆಯಲ್ಲಿ ಜೂ.30ರಂದು ಉಡುಪಿಯ ಪುರಭವನದಲ್ಲಿ 'ಎಜುಕೇಷನ್ ಫೇರ್' ಆಯೋಜಿಸಲಾಗಿದೆ. ಕಾರ್ಯಕ್ರಮ ಬೆಳಗ್ಗೆ 9.30ಕ್ಕೆ ಆರಂಭವಾಗಿ ಸಂಜೆ 6 ಗಂಟೆವರೆಗೆ ನಡೆಯಲಿದೆ. ರಾಜ್ಯದ ವಿವಿಧ 15 ನಗರಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಿಇಟಿ ಹೊರತುಪಡಿಸಿ ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯ- ದೇಶದಲ್ಲಿ ಲಭ್ಯವಿರುವ ಕೋರ್ಸುಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುತ್ತದೆ. ಅದಕ್ಕಾಗಿ ವಿವಿಧ ಶಿಕ್ಷಣ ಸಂಸ್ಥೆ- ವಿವಿಗಳ ಮಾಹಿತಿ ಮಳಿಗೆಗಳಿರುತ್ತವೆ. ರಾಜ್ಯದ ವಿವಿಧ ಭಾಗದ ಸುಮಾರು 30 ಶಿಕ್ಷಣ ಸಂಸ್ಥೆಗಳು ಈ ಫೇರ್ನಲ್ಲಿ ಭಾಗವಹಿಸಲಿವೆ.
'ಎಜ್ಯುಕೇಷನ್ ಫೇರ್'ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ತಾವು ಸೇರ ಬಯಸುವ ಶಿಕ್ಷಣ ಸಂಸ್ಥೆಗಳ ಪ್ರವೇಶ ಶುಲ್ಕದಲ್ಲಿ ವಿಶೇಷ ರಿಯಾಯತಿಯನ್ನೂ ಒದಗಿಸುವ ವ್ಯವಸ್ಥೆ ಇದೆ.
ನಾನು ಮುಂದೆ ಎಂಜಿನಿಯರಿಂಗ್ ಕಲಿಯಬೇಕು ಎಂದಿದ್ದು, ಸೂಕ್ತ ವಿವರ ಪಡೆಯಲು ಬಂದಿದ್ದೇನೆ.
- ರತನ್ ಕುಮಾರ್, ಮುಡಿಪು ನವೋದಯ ವಸತಿ ಶಾಲೆಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ