ಡಾ. ಭರತಕುಮಾರ್ ಪೊಲಿಪುಗೆ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ
ಪ್ರತಿಷ್ಠಿತ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ-2013ಕ್ಕೆ ಪ್ರಸಿದ್ಧ ರಂಗಕರ್ಮಿ ಡಾ. ಭರತಕುಮಾರ್ ಪೊಲಿಪು ಅವರು ಆಯ್ಕೆ ಆಗಿದ್ದಾರೆ.
ಕ.ಪ್ರ. ವಾರ್ತೆ ಮಂಗಳೂರು ಮಾ. 1-
ಖ್ಯಾತ ರಂಗಕರ್ಮಿ ಸದಾನಂದ ಸುವರ್ಣ ಅವರ ಹೆಸರಿನಲ್ಲಿ ಕಾಂತಾವರ ಕನ್ನಡ ಸಂಘ ಕೊಡುತ್ತಿರುವ ಪ್ರತಿಷ್ಠಿತ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ-2013ಕ್ಕೆ ಪ್ರಸಿದ್ಧ ರಂಗಕರ್ಮಿ ಡಾ. ಭರತಕುಮಾರ್ ಪೊಲಿಪು ಅವರು ಆಯ್ಕೆ ಆಗಿದ್ದಾರೆ. ಈ ಪ್ರಶಸ್ತಿಯನ್ನು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಪ್ರದಾನಿಸಲಾಗುತ್ತಿದೆ ಎಂದು ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ.ನಾ.ಮೊಗಸಾಲೆ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ಬಳಿಯ ಪೊಲಿಪು ಮೂಲದ ಡಾ.ಪೊಲಿಪು ಮೂರು ದಶಕಗಳಿಂದ ಮುಂಬಯಿಯಲ್ಲಿದ್ದು ಕನ್ನಡದ ರಂಗಭೂಮಿಯನ್ನು ಅಸಾಧಾರಣ ರೀತಿಯಲ್ಲಿ ದುಡಿಸಿಕೊಳ್ಳುತ್ತ ಬಂದಿದ್ದಾರೆ.
ಸುಮಾರು 10ಕ್ಕೂ ಹೆಚ್ಚು ನಾಟಕಗಳನ್ನು ತಮ್ಮ ದಿಗ್ದರ್ಶನದಲ್ಲಿ ಮುಂಬಯಿ, ದೆಹಲಿ ಹಾಗೂ ಕರ್ನಾಟಕದ ಬಹುತೇಕ ಕಡೆ ಪ್ರದರ್ಶಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ನಾಟಕಗಳಲ್ಲಿ ಕಲಾತ್ಮಕತೆಯನ್ನು ಸಾಧಿಸುವಲ್ಲಿ ಅವರು ಅಪೂರ್ವ ಯಶಸ್ಸು ಕಂಡಿದ್ದಾರೆ. ಹೆಸರಾಂತ ನಟ, ನಾಟಕಕಾರರೂ, ಸಂಘಟಕರೂ ಆಗಿರುವ ಪೊಲಿಪು ಅವರು 'ಮುಂಬಯಿ ರಂಗಭೂಮಿ- ಒಂದು ತೌಲನಿಕ ಅಧ್ಯಯನ' ಎಂಬ ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.