ಅತ್ಯಾಚಾರಿಗೆ ಮತ ಬೇಡ, ಮಹಿಳಾ ದೌರ್ಜನ್ಯಕ್ಕೆ ತಡೆ
ಮಂಗಳೂರು: 'ಚುನಾವಣೆಗೆ ಅತ್ಯಾಚಾರಿಗಳು ಸ್ಪರ್ಧಿಸಿದರೆ ಮತ ಹಾಕಬೇಡಿ, ಉಳಿದವರು ಮತ ಕೇಳಲು ಬಂದರೆ ಮಹಿಳೆಯರ ಅಭಿವೃದ್ಧಿಗೆ ನಿಮ್ಮ ಯೋಜನೆ ಏನು ಎಂದು ಪ್ರಶ್ನಿಸಿ, ಅವರ ರಾಜಕೀಯ ನಿಲವನ್ನು ಸ್ಪಷ್ಟವಾಗಿ ಅರಿತುಕೊಳ್ಳಿ. ಮಹಿಳೆಯಾಭ್ಯುದಯಕ್ಕೆ ಯಾವುದೇ ಯೋಜನೆ ಹೊಂದಿರದವರನ್ನು ಸರಾಸಗಟ ತಿರಸ್ಕರಿಸಿ'.
ಇದು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಮಹಿಳಾ ಸಂಘಗಳ ಜಾಲದ ಆಶ್ರಯದಲ್ಲಿ ಹಿಂಸಾಚಾರ ರಹಿತ ಸಮಾಜ ನಿರ್ಮಾಣಕ್ಕೆ ಮಂಗಳೂರಿನಲ್ಲಿ ಶುಕ್ರವಾರ ನಡೆದ ಹಕ್ಕೊತ್ತಾಯ ಜಾಥಾ ಮತ್ತು ಸಮಾವೇಶದಲ್ಲಿ ಕೇಳಿಬಂದ ಆಗ್ರಹದ ನುಡಿ.
ವಿಶಾಖ ಗೈಡ್ಲೈನ್ಸ್ಗೆ (ಮಹಿಳಾ ದೌರ್ಜನ್ಯ ತಡೆಗೆ ರಾಜಸ್ತಾನ ಸರ್ಕಾರ ಜಾರಿಗೆ ತಂದ ನಿಯಮ) ನಿಯಮಾವಳಿ ರಚನೆಗೆ ಕಾರಣಕರ್ತರಾದ ರಾಜಸ್ತಾನದ ಬಾಂವ್ರಿದೇವಿ ಸಮಾವೇಶಕ್ಕೆ ಚಾಲನೆ ನೀಡುತ್ತಾ, ಒಕ್ಕೊರಲ ಕೂಗಿಗೆ ಸಭಾಂಗಣದಲ್ಲಿದ್ದ ಅಷ್ಟೂ ಮಹಿಳಾ ಬಳಗ ಕೈ ಎತ್ತಿ ಬೆಂಬಲ ಸೂಚಿಸಿತು.
ಅತ್ಯಾಚಾರಿಗೆ ಗಲ್ಲು ಬೇಡ!: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಬೇಡ, ಪುರುಷತ್ವ ಹರಣವೂ ಬೇಡ ಎನ್ನುವ ಮೂಲಕ ಮಹಿಳಾವಾದಿಗಳು ಅಚ್ಚರಿ ಮೂಡಿಸಿದರಲ್ಲದೆ, ಆದರೆ ಹೆಣ್ಮಕ್ಕಳ ಮೇಲೆ ಕೈ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪ್ರತ್ಯಾಂದು ಹೆಣ್ಮಕ್ಕಳಿಗೂ ಸ್ವತಂತ್ರವಾಗಿ ಜೀವಿಸುವ ಹಕ್ಕು ಇದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಮಹಿಳೆಯರ ತಂಟೆಗೆ ಬಂದರೆ ಒಕ್ಕೊರಲಿಂದ ವಿರೋಧಿಸುವುದಾಗಿ ಸಮಾವೇಶದಲ್ಲಿ ಸಾರಲಾಯಿತು.
ರಾಜ್ಯದಲ್ಲಿ ಮಹಿಳಾ ಸೇನೆ: ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಹಿಂಸೆ, ಅತ್ಯಾಚಾರ, ನೈತಿಕ ಪೊಲೀಸ್ಗಿರಿ ತಡೆಗೆ ಗುಲಾಬಿ ಸೇನೆ ಮಾದರಿಯಲ್ಲಿ ಮಹಿಳಾ ಸೇನೆ ಸಂಘಟಿಸಲು ಸಮಾವೇಶದಲ್ಲಿ ಸಂಕಲ್ಪ ತೊಡಲಾಯಿತು. ಕೋಮುಭಾವನೆ ಕೆರಳಿಸುವ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿತಲ್ಲದೆ, ಮಹಿಳಾ ಸೇನೆ ಪ್ರೀತಿ, ಸಹನೆಯಿಂದ ಹೋರಾಟ ನಡೆಸಲಿದೆ ಎಂದು ಸಮಾವೇಶದಲ್ಲಿ ಘೋಷಿಸಲಾಯಿತು.
ಮಹಿಳೆಯರಿಗೆ ರಕ್ಷಣೆ ಇಲ್ಲ: ಈ ಸಮಾವೇಶಕ್ಕೆ ಯಾವೊಬ್ಬ ಜನಪ್ರತಿನಿಧಿಯೂ ಬರಲಿಲ್ಲ. ಇದು ಮಹಿಳೆಯರ ರಕ್ಷಣೆ ಬಗ್ಗೆ ಜನಪ್ರತಿನಿಧಿಗಳಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಅಂಥವರಿಗೆ ಯಾಕೆ ಮತ ನೀಡಬೇಕು ಎಂದು ಸಮಾವೇಶದ ಅಧ್ಯಕ್ಷತೆ ವಹಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ವೈದೇಹಿ ಪ್ರಶ್ನಿಸಿದರು.
ಪುರುಷರ ಭರವಸೆಯನ್ನು ಮಹಿಳೆಯರು ಬೇಗನೆ ನಂಬುತ್ತಾರೆ. ಹಾಗೆಯೇ ಬೇಗ ಮೋಸ ಹೋಗುತ್ತಾರೆ. ಮಹಿಳೆಯರ ಲಜ್ಜೆ, ಸರಳತೆ, ದಾಕ್ಷಿಣ್ಯವನ್ನು ಅಪಾರ್ಥ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ತೊಂದರೆಯಾದಾಗ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಹೇಳಿದರು.
ಮಣಿಪುರದಲ್ಲಿ ಸೈನಿಕರ ದೌರ್ಜನ್ಯ ವಿರುದ್ಧ ಹೋರಾಟ ನಡೆಸುತ್ತಿರುವ ಇಶಾ ಶರ್ಮರನ್ನು ಬೆಂಬಲಿಸಿ ಮಹಿಳಾ ಸಂಘಟನೆಗಳು ರಾಷ್ಟ್ರಪತಿಗೆ ಪತ್ರ ಚಳುವಳಿ ನಡೆಸಬೇಕು ಎಂದು ಹೇಳಿದರು.
ನಾಡೋಜ ಸಾಹಿತಿ ಸಾ.ರಾ. ಅಬೂಬಕ್ಕರ್, ಹಾಲಕ್ಕಿ ಒಕ್ಕಲಿಗರ ಸಂಘದ ಸುಕ್ರಿ ಬೊಮ್ಮನ ಗೌಡ, ಸಮತಾದ ರತಿ ರಾವ್, ಪೌರ ಕಾರ್ಮಿಕರ ಸಂಘದ ಗೌರಿ, ಗಾರ್ಮೆಂಟ್ಸ್ ಲೇಬರ್ ಯೂನಿಯನ್ನ ರತ್ನಮ್ಮ, ತರಕಾರಿ ಬೆಳೆಗಾರರ ಮತ್ತು ತಲೆಹೊರೆ ಮಾರಾಟಗಾರರ ಸಂಘದ ಗೋಮ್ಸ್, ಜನವಾದಿ ಸಂಘಟನೆಯ ನೀಲಾ, ಸಾಧನಾ ಮಹಿಳಾ ಸಂಘದ ಗೀತಾ, ಅನುಪಮ ಮಹಿಳಾ ಮಾಸಿಕ ಸಂಪಾದಕಿ ಶಹನಾಜ್, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸ್ವತಂತ್ರ ಸಂಘಟನೆ ಅಧ್ಯಕ್ಷೆ ಜಯಲಕ್ಷ್ಮಿ, ರುತ್ ಮನೋರಮಾ, ವಿವಿಧ ಸಂಘಟನೆ ಮುಖಂಡರಾದ ಭಗೀರಥಿ, ಸುನೀತಾ, ಪದ್ಮ, ಶರಣಮ್ಮ ಮತ್ತಿತರರು ಮಾತನಾಡಿದರು.
ಇದಕ್ಕೂ ಮೊದಲು ಪಿವಿಎಸ್ನಲ್ಲಿ ಹಕ್ಕೊತ್ತಾಯ ಜಾಥಾವನ್ನು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಅಧ್ಯಕ್ಷೆ ಸುಶೀಲಾ ನಾಡ ಉದ್ಘಾಟಿಸಿದರು. ಬೆಸೆಂಟ್ ವೃತ್ತ, ಬಲ್ಲಾಳ್ಭಾಗ್, ಲಾಲ್ಭಾಗ್ ಮೂಲಕ ಜಾಥಾ ಕರಾವಳಿ ಉತ್ಸವ ಮೈದಾನ ತಲುಪಿತು.