ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ದೌರ್ಜನ್ಯ ವಿರುದ್ಧ ಶಾಂತ ಹೋರಾಟ ನಡೆಯಲಿ'

Srinivasa Murthy VN
Updated On : 9 Mar 2013, 12:26 pm

ಮಂಗಳೂರು: ಸಮಾಜದಲ್ಲಾಗುತ್ತಿರುವ ಮಹಿಳಾ ದೌರ್ಜನ್ಯದ ವಿರುದ್ಧ ಜಾತಿ, ವರ್ಣ, ಲಿಂಗ ಭೇದವಿಲ್ಲದೆ ಒಗ್ಗಟ್ಟಾಗಿ  ಶಾಂತ ರೀತಿಯಲ್ಲಿ ಹೋರಾಟ ನಡೆಸೋಣ ಎಂದು ದಲಿತ ಚಳುವಳಿಗಾರ್ತಿ ಊರ್ಮಿಳಾ ಪವಾರ್ ಹೇಳಿದ್ದಾರೆ.
ಗುರುವಾರ ವಿಶ್ವವಿದ್ಯಾಲಯದ ಹಳೆ ಸೆನೆಟ್ ಸಭಾಂಗಣದಲ್ಲಿ ನಡೆದ 'ಮಹಿಳೆಯರ ಮೇಲಿನ ದೌರ್ಜನ್ಯ, ಕಾರಣಗಳು ಮತ್ತು ಆಯಾಮಗಳು' ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ವರ್ಷಗಳಿಂದ ನಡೆಯುತ್ತಿದೆ. ದಿಲ್ಲಿಯ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ನಂತರ ಪ್ರಮುಖರೆಲ್ಲಾ ವಿಭಿನ್ನ ಹೇಳಿಕೆಗಳನ್ನು ಮಾಧ್ಯಮದಲ್ಲಿ ನೀಡುತ್ತಿದ್ದಾರೆ. ಮಹಿಳೆಯರು ರಕ್ಷಣೆಗಾಗಿ ಮೆಣಸಿನ ಸ್ಪ್ರೇ, ಚಾಕು ಇವುಗಳನ್ನು ಬಳಸಿಕೊಳ್ಳಿ ಎನ್ನುವುದರ ಬದಲು ದೌರ್ಜನ್ಯ ಮನಃಸ್ಥಿತಿ ಬದಲಾವಣೆಯಾಗುವಂತೆ ಎಲ್ಲರ ಹೃದಯದಲ್ಲಿ ಮನುಷ್ಯತ್ವವೆಂಬ ಪ್ರೀತಿ ಅರಳುವಂತೆ ಮಾಡೋಣ  ಎಂದರು.
ಬಡ ಕುಟುಂಬದಿಂದ ಬಂದ ತಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ಬಂದೆ. ಅಲ್ಲಿ ದಲಿತ ಮಹಿಳೆಯೊಬ್ಬಳನ್ನು ಅವಮಾನೀಯವಾಗಿ ನಡೆಸುತ್ತಿರುವ ರೀತಿಯನ್ನು ಕಂಡು ಸಂಘಟನೆಯನ್ನು ರೂಪಿಸುವಲ್ಲಿ ಸನ್ನದ್ಧನಾದೆ ಎಂದರು.
ಮಹಿಳೆಯನ್ನು ಹಿಂಸಿಸುವುದು, ಮಾನಸಿಕ ಕಿರುಕುಳ ನೀಡುವುದು, ತನ್ನ ಕೈ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂಬುದು ಪುರುಷರ ಹಕ್ಕು ಎಂಬುದಾಗಿ ತಿಳಿದುಕೊಂಡಿದ್ದಾರೆ. ಇದಕ್ಕೆ ವಿದ್ಯಾವಂತರು ಹೊರತಾಗಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಜಾಗತೀಕರಣದ ಹೆಸರಿನಲ್ಲಿ ಮಹಿಳೆಯನ್ನು ಜಾಹೀರಾತಿನ ಮೂಲಕ ವಿವಿಧ ಭಂಗಿಯಲ್ಲಿ ಚಿತ್ರಿಸಲಾಗುತ್ತಿದೆ. ಹೋರಾಟದ ಮೂಲಕ ಬಾರ್ ಗರ್ಲ್ಸ್ ಹುಡುಗಿಯರು ಸಮಾಜದಲ್ಲಿ ಪರ್ಯಾಯವಾಗಿ ಮಾನವೀಯ ನೆಲೆಯಲ್ಲಿ ಜೀವನ ಸಾಗಿಸುವ ವ್ಯವಸ್ಥೆ ಕಲ್ಪಿಸುವಂತೆ ಮಾಡಲಾಯಿತು ಎಂದರು.
6ನೇ ಶತಮಾನದಲ್ಲಿಯೇ ದಲಿತ ಮಹಿಳೆಯರ ದೌರ್ಜನ್ಯದ ಕುರಿತಾದ 522 ಸಾಹಿತ್ಯಗಳು ಬೆಳಕಿಗೆ ಬಂದಿದೆ ಎಂದರು. ಮಣಿಪುರ, ನೇಪಾಳದಿಂದ ಹೆಣ್ಣು ಮಕ್ಕಳನ್ನು ಅಪಹರಿಸಿ ಮುಂಬೈ, ಚೆನ್ನೈಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಮಧುರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಪರಾಧಿಗಳನ್ನು ವಜಾಗೊಳಿಸಿದ್ದು, ತೀವ್ರ ಬೇಸರ ತಂದಿದೆ ಎಂದರು.
ವಿಧವೆ ಮಹಿಳೆಯೊಬ್ಬಳು ಗರ್ಭವತಿಯಾದಳೆಂದು ಆಕೆಯನ್ನು ಮಹಿಳೆಯರೇ ಹೊಡೆದು ಕೊಂದು ಹಾಕಿದರು. ಅಲ್ಲಿ ಗರ್ಭಕ್ಕೆ ಕಾರಣನಾದ ಪುರುಷನಿಗೆ ಯಾವ ಶಿಕ್ಷೆಯನ್ನು ನೀಡಲಿಲ್ಲ. ಮಾನವೀಯತೆ ಇಲ್ಲದಿರುವುದೇ ಇಂಥ ಘಟನೆಗಳಿಗೆ ಕಾರಣ. ಸಂಪ್ರದಾಯಗಳಿಗೆ ಮನುಷ್ಯ ತನ್ನ ಮನಃಸ್ಥಿತಿಯನ್ನು ಬದಲಾಯಿಸಿರುವುದೇ ಇಂಥ ಘಟನೆಗಳು ಸಂಭವಿಸಲು ಕಾರಣ ಎಂದರು.
ಮನುಷ್ಯ ತನ್ನ ಅಂತಃಕರಣದಲ್ಲಿ ಮನುಷ್ಯತ್ವ, ಪ್ರೀತಿಯ ಮನೋಭಾವ ಮೂಡಿಸಲಿ. ಪ್ರತಿಯೊಬ್ಬರಲ್ಲಿಯೂ ಇಂಥ ಮನಸ್ಸು ಮೂಡಿದಾಗ ಸಮಾಜದಲ್ಲಿ ಬದಲಾವಣೆ ನಿರೀಕ್ಷಿಸಬಹುದು ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ, ಮಹಿಳಾ ದೌರ್ಜನ್ಯಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುತ್ತದೆ. ಆದರೆ ಇವುಗಳ ವರದಿ ಬೆಳಕಿಗೆ ಬರುವುದಿಲ್ಲ ಎಂದರು.
ದಿಲ್ಲಿಯ ಹಳ್ಳಿಗಳಲ್ಲಿ ಪ್ರತಿದಿನ 11 ಅತ್ಯಾಚಾರ ಪ್ರಕರಣ ನಡೆಯುತ್ತಿರುತ್ತದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ. ಸಂಘಟನೆಯ ಮೂಲಕ ಜಾಗೃತಿ ಮೂಡಿಸಿದಾಗ ಪ್ರಕರಣಗಳು ಕಡಿಮೆಯಾಗಬಹುದು. ಆದ್ದರಿಂದ ಪುರುಷರು ತಮ್ಮ ಮನೋಭಾವನೆ ಬದಲಾಯಿಸುವ ಜತೆಗೆ ಮಹಿಳೆಯರು ತಮ್ಮಲ್ಲಿ ಬದವಲಾವಣೆಯನ್ನು ಕಂಡುಕೊಳ್ಳಲಿ ಎಂದರು.

ಬೆಳ್ತಂಗಡಿ: ಮಹಿಳಾ ಸಮಾವೇಶ, ಗ್ರಾಮೀಣ ಉತ್ಪನ್ನಗಳ ಪ್ರದರ್ಶನ
ಬೆಳ್ತಂಗಡಿ:
ಅನ್ಯಾಯ, ದೌರ್ಜನ್ಯದ ವಿರುದ್ಧ ಮಹಿಳೆ ಮಾಡುವ ಹೋರಾಟಗಳನ್ನು ಪುರುಷರ ವಿರುದ್ಧ ಎಂದು ತಿಳಿದುಕೊಳ್ಳಬಾರದು ಎಂದು ಬೆಂಗಳೂರಿನ ಚೈಲ್ಡ್ ಫಂಡ್‌ನ ಕಾರ್ಯಕ್ರಮಗಳ ಅಭಿವೃದ್ಧಿ ವಿಭಾಗದ ನಿರ್ದೇಶಕಿ ಸ್ವಪ್ನಾ ರವೀಂದ್ರನ್ ಹೇಳಿದರು.
ಅವರು ಶುಕ್ರವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಸಮೀಪ ಕಪುಚಿನ್ ಕೃಷಿಕ್ ಸೇವಾ ಕೇಂದ್ರ,ದಯಾಳ್‌ಬಾಗ್ ಗ್ರಾಮಾಭಿವೃದ್ಧಿ ಯೋಜನೆ, ವಿಮುಕ್ತಿ ಲಾಯಿಲ ವತಿಯಿಂದ ನಡೆದ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಮಹಿಳಾ ಸಮಾವೇಶ ಹಾಗೂ ವಿವಿಧ ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಶಾಸಕ ವಸಂತ ಬಂಗೇರ, ಉಜಿರೆ ದೇವಳದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ನೆಟ್ನಾಯ, ಐಡಿಬಿಐ ಬ್ಯಾಂಕಿನ ಶಾಖಾ ಪ್ರಬಂಧಕ ಮ್ಯಾಥ್ಯೂ ಅಬ್ರಹಾಂ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಳ್ತಂಗಡಿ ಶಾಖಾ ಪ್ರಬಂಧಕ ಎಂ.ಎ. ಗೋಪಾಲಕೃಷ್ಣ, ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ಉಪಾಧ್ಯಕ್ಷ ಹೆನ್ರಿ ವಾಸ್, ಒಪೋರ್ಚುನಿಟಿ ಮೈಕ್ರೋ ಫೈನಾನ್ಸ್ ಇಂಡಿಯಾದ ಯೋಜನಾಧಿಕಾರಿ ಪ್ರದೀಪ್‌ರಾಜ್ ಅತಿಥಿಗಳಾಗಿದ್ದರು.
ಅಧ್ಯಕ್ಷತೆಯನ್ನು ಹೋಲಿ ಟ್ರಿನಿಟಿ ಕಪುಚಿನ್ ಪ್ರಾಂತ್ಯದ ಪ್ರಾಂತ್ಯಾಧಿಕಾರಿ ಡಾ.ಫಾ. ವಿನ್ಸೆಂಟ್ ಫುರ್ಟಾಡೋ ವಹಿಸಿದ್ದರು. ಉತ್ತಮ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲಾಯಿತು.
ಜ್ಯೋತಿ ಗೇರುಕಟ್ಟೆ ಸ್ವಾಗತಿಸಿದರು. ವಿಮುಕ್ತಿ ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷೆ ಸುಮತಿ ಭಟ್ ಪ್ರಸ್ತಾವಿಸಿದರು. ಕಾರ್ಯದರ್ಶಿ ತ್ರೇಸಿಯಾ ವರದಿ ಮಂಡಿಸಿದರು. ಒಕ್ಕೂಟದ ಹಿರಿಯ ಸದಸ್ಯೆ ಕಮಲ ಸಂಚಿಕೆ ಬಿಡುಗಡೆ ಮಾಡಿದರು. ಸಂಸ್ಥೆಯ ಪರಿಚಯವನ್ನು ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ. ವಿನೋದ್ ಮಸ್ಕರೇನಸ್ ಮಾಡಿದರು. ಮಮತಾ ಹಾಗೂ ಜೆಸಿಂತಾ ಸಂದೇಶ ವಾಚಿಸಿದರು. ಜೊತೆ ಕಾರ್ಯದರ್ಶಿ ಪ್ರೇಮಲತಾ ವಂದಿಸಿದರು.

ಆತ್ಮಶಕ್ತಿಯ ಮಹಿಳಾ ಸಮೂಹ ನಿರ್ಮಾಣ ಅಗತ್ಯ; ಶೋಭಿತಾ
ಪುತ್ತೂರು:
ಸಮಾಜದಲ್ಲಿ ಶಾರೀರಿಕ, ಮಾನಸಿಕ ಸದೃಢತೆ ಮತ್ತು ಆತ್ಮಶಕ್ತಿಯುಳ್ಳ ಮಹಿಳಾ ಸಮೂಹ ನಿರ್ಮಾಣ ಇಂದಿನ ಅಗತ್ಯವಾಗಿದೆ ಎಂದು ವಿದುಷಿ ಪುತ್ತೂರಿನ ಸ್ವರಧೇನು ಸಂಸ್ಥೆಯ ಸಂಚಾಲಕಿ ಶೋಭಿತಾ ಸತೀಶ್ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಪುತ್ತೂರಿನ ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ವತಿಯಿಂದ ಶುಕ್ರವಾರ ಬೊಳುವಾರಿನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಯನೆಸ್ ಕ್ಲಬ್ ಜಿಲ್ಲಾಧ್ಯಕ್ಷೆ ವತ್ಸಲಾ ರಾಜ್ಞಿ, ಪುತ್ತೂರು ಲಯನೆಸ್ ಕ್ಲಬ್ ಅಧ್ಯಕ್ಷೆ ರೋಹಿಣಿ ರಾಘವ ಆಚಾರ್ಯ ಇದ್ದರು.
ಸಮಾಜಸೇವಕಿ ನವ್ಯಶ್ರೀ ಮಹಿಳಾ ಮಂಡಲ ಅಧ್ಯಕ್ಷೆ ಪ್ರೇಮಲತಾ ರಾವ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೊಳುವಾರು ಸಾಂಸ್ಕೃತಿಕ ಕಲಾ ಕೆಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಸ್ವಾಗತಿಸಿದರು. ಸಂಚಾಲಕಿ ಕವಿತಾ ದಿನಕರ್ ಪಡೀಲ್ ವಂದಿಸಿದರು. ಸದಸ್ಯ ಟಿ. ರಂಗನಾಥ ರಾವ್ ಬೊಳುವಾರು ನಿರೂಪಿಸಿದರು.

ಬಂಟ್ವಾಳ: ವಿಶ್ವ ಮಹಿಳಾ ದಿನಾಚರಣೆ
ಬಂಟ್ವಾಳ:
ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ತಾಲೂಕು, ವಕೀಲರ ಸಂಘ ಬಂಟ್ವಾಳ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ.ಕೆ. ನವೀನ ಕುಮಾರಿ ಕಾರ್ಯಕ್ರಮ ಉದ್ಘಾಟಿಸಿ, ಮಹಿಳಾ ದೌರ್ಜನ್ಯ ತಡೆ ಕಾಯ್ದೆ- 2005 ಹಾಗೂ ವರದಕ್ಷಿಣೆ ಕಾಯ್ದೆ ಬಗ್ಗೆ ವಕೀಲರಾದ ಆಶಾಮಣಿ ಡಿ. ರೈ ಹಾಗೂ ಕೇಶವಿಗಿರೀಶ್ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ. ಲೈಲಾಮೇರಿ ಜಾರ್ಜ್ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ರೊನಾಲ್ಡ್ ಪ್ರವೀಣ್ ಕೊರೆಯ ಪ್ರಸ್ತಾವನೆಗೈದರು. ವಕೀಲರ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ, ತಹಶೀಲ್ದಾರ್ ಮಲ್ಲೇಸ್ವಾಮಿ, ಉಪಠಾಣಾಧಿಕಾರಿ ಗಂಗಾಧರ ಕೆ., ವಕೀಲರಾದ ಸತೀಶ್ ಕುಮಾರ್, ಗಣೇಶ್ ಪೈ, ಪಿ.ಸಿ. ಸಾಲ್ಯಾನ್, ರವೀಂದ್ರ ಕೆ., ಮೋಹನ್ ಪ್ರಭು ಇದ್ದರು. ನಂದಕಿಶೋರ್ ಸ್ವಾಗತಿಸಿ, ಜಯಲಕ್ಷ್ಮಿ ವಂದಿಸಿದರು. ಸುಕನ್ಯಾ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement