ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

20 ವರ್ಷದಿಂದ ಎಂಆರ್‌ಪಿಎಲ್ ಸಂತ್ರಸ್ತರಿಗೆ ಪರಿಹಾರವಿಲ್ಲ

Srinivasa Murthy VN
Updated On : 11 Mar 2013, 3:01 am

ಮಂಗಳೂರು: ಎಂಆರ್‌ಪಿಎಲ್ 20 ವರ್ಷಗಳ ಹಿಂದೆ ಕುತ್ತೆತ್ತೂರು ಗ್ರಾಮದ ಸರ್ಕಾರಿ ಕಾಲನಿಯ ನಿವಾಸಿಗಳ ಮನೆ, ಭೂಮಿಯನ್ನು ಅಕ್ರಮವಾಗಿ ವಶಪಡಿಸಿದ್ದು, ಇಲ್ಲಿಯವರೆಗೆ ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭಾಗ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
1993ರಲ್ಲಿ ಕುತ್ತೆತ್ತೂರಿನ ಸುಮಾರು 11 ಕುಟುಂಬಗಳ ಮನೆಗಳನ್ನು ಕೆಡವಿದ ಎಂಆರ್‌ಪಿಎಲ್‌ನಿಂದ ಇನ್ನೂ ಪರಿಹಾರ ಸಿಕ್ಕಿಲ್ಲ. ಇವರಲ್ಲಿ ಕೆಲವರು ನಿಧನ ಹೊಂದಿದ್ದು, ಅಪ್ಪಿ ಪೂಜಾರ್ತಿ ಮಗಳು ಚಿತ್ರಾಕ್ಷಿ, ತಿಮ್ಮು ಪೂಜಾರ್ತಿ, ಮೇರಿಯವರ ಸಂಬಂಧಿ ಡೋರಾ ಡಿಕುನ್ಹಾ ಪರಿಹಾರಕ್ಕಾಗಿ ಅಲೆದಾಡುತ್ತಿದ್ದಾರೆ.
ಕುತ್ತೆತ್ತೂರು ನಿವಾಸಿಗಳು ಗದ್ದೆ ಕೆಲಸದ ನಿಮಿತ್ತ ಮತ್ತು ಇನ್ನಿತರ ಕೆಲಸಕ್ಕೆ ತೆರಳಿದ ಸಮಯದಲ್ಲಿ ಮನೆಯನ್ನು ನೆಲಸಮ ಮಾಡಿಲಾಗಿತ್ತು. ಈ ಸಂದರ್ಭ ಅಶ್ವತ್ಥ ಮರವೊಂದು ಜಾಗದ ಗುರುತಿಗೆ ಸಾಕ್ಷಿಯಾಗಿತ್ತು ಎಂದು ಹೇಳಿದರು.
ಎಂಆರ್‌ಪಿಎಲ್ ಬಳಿ ಸಂತ್ರಸ್ತರು ಪರಿಹಾರ ನೀಡಿ ಎಂದು ಕೇಳಿಕೊಂಡಾಗ ದಾಖಲೆ ತನ್ನಿ ಪರಿಹಾರ ಕೊಡುವುದಾಗಿ ಹಿಂದೆಕ್ಕೆ ಕಳುಹಿಸಿದ್ದಾರೆ ಎಂದರು.
 ಸುಬ್ರಾಯ ಆಚಾರ್ಯರವರಿಗೆ ಚೇಳ್ಯಾರಿನಲ್ಲಿ ಜಾಗ ನೀಡಿದ್ದು, ಮತ್ಯಾವ ಪರಿಹಾರವು ನೀಡಿಲ್ಲ. ಇಲ್ಲಿ ಸುಬ್ರಾಯ ಅವರು ಶೆಡ್ ಕಟ್ಟಿ ಜೀವನ ಸಾಗಿಸಿದ್ದು, ಈಗ ಅವರು ಹಾಸಿಗೆ ಹಿಡಿದಿದ್ದಾರೆ ಎಂದರು.
 ಉಳಿದಂತೆ ಸಂತ್ರಸ್ತರಾದ ಅಪ್ಪಿ ಪೂಜಾರ್ತಿ, ಕಮಲ ಪೂಜಾರ್ತಿ, ಬಾಲಕೃಷ್ಣ ನಾಯ್ಕ್, ನಾಗಪ್ಪ ಮೈಲಿ, ಮಾರ್ಶೆಲ್ ಡಿಸೋಜ, ಭವಾನಿ ಪೂಜಾರ್ತಿಯವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ತಿಳಿಸಿದರು.
 ಮನೆ ನೆಲಸಮಗೊಳಿಸುವ ಸಂದರ್ಭ ಇವರೆಲ್ಲರ ದಾಖಲೆಗಳು ಮಣ್ಣುಪಾಲಾಗಿದ್ದು, ಕುತ್ತೆತ್ತೂರು ಪಂಚಾಯ್ತಿನಲ್ಲಿ ಕೂಡ ಮಾಹಿತಿ ಇಲ್ಲವಾಗಿತ್ತು. ಸಾರ್ವಜನಿಕ ಹಿತಾಸಕ್ತಿ ಸಂಘಟನೆಗಳು ಈ ಕುರಿತು ಕರ್ನಾಟಕ ಗೃಹಮಂಡಳಿಯಲ್ಲಿ ಪರಿಶೀಲಿಸಿದಾಗ ದಾಖಲೆಗಳು ಲಭ್ಯವಾಗಿದೆ ಎಂದರು.
 ಆದರೆ ತೈಲಾಗಾರದ ಡ್ಯೆಪುಟಿ ಜನರಲ್ ಮ್ಯಾನೇಜರ್ ಪಿ.ಎ. ಜೋಸ್ ಸಾರ್ವಜನಿಕ ಹಿತಾಸಕ್ತಿ ಸಂಘಟನೆಗಳ ವಿರುದ್ಧ ಮಾನವ ಹಕ್ಕುಗಳ ಮಹಾಮಂಡಳಿಗೆ ದೂರು ನೀಡಿದ್ದಾರೆ ಎಂದು ಅವರು ವಿವರಿಸಿದರು.
 ಸಂಘಟನೆಗಳು ಸಂತ್ರಸ್ತರ ಸಮಸ್ಯೆಯನ್ನು ಉಲ್ಲೇಖಿಸಿ ಮಾನವ ಹಕ್ಕು ಮಂಡಳಿಗೆ ದೂರು ಸಲ್ಲಿಸಿತ್ತು. ಬಳಿಕ 2006ರಲ್ಲಿ ಭೂಸ್ವಾಧೀನಾಧಿಕಾರಿಯವರು ಕಡತಗಳನ್ನು ಪರಿಶೀಲಿಸಿ 'ಸುಬ್ರಾಯ ಆಚಾರ್ಯ ಅವರ ದಾವೆ ಸರಿ ಎಂದು ದೃಢಪಡಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಎಂಆರ್‌ಪಿಎಲ್‌ನ ಅಂದಿನ ಅಧಿಕಾರಿ ಸಂತೋಷ್ ಕದ್ರಿ ಅವರು ಸಂಘಟನೆಯವರಿಗೆ ಪತ್ರ ಮೂಲಕ ತಿಳಿಸಿದ್ದರು.
ಗೃಹಮಂಡಳಿಗೂ ಮೋಸ: ಗೃಹಮಂಡಳಿಯಿಂದ ಸಾಲ ಪಡೆದು ಮನೆ ಕಟ್ಟಿದ್ದ 11 ಮಂದಿ ಕುಟುಂಬಗಳು ಸುಮಾರು ರು. 1,38,135 ಪಾವತಿಸಲು ಬಾಕಿ ಇತ್ತು. ಗೃಹಮಂಡಳಿಯ ಅನುಮತಿ ಇಲ್ಲದೆ ಕೆಐಡಿಬಿ ಎಂಆರ್‌ಪಿಎಲ್‌ಗೆ ಜಾಗ ಒತ್ತುವರಿ ಮಾಡಲು ಅನುಮತಿ ನೀಡಿದ್ದು, 1992ರಲ್ಲಿಯೇ ಗೃಹ ಮಂಡಳಿ ಸಾಲವನ್ನು ತೀರಿಸುವಂತೆ ಸಂತ್ರಸ್ತರ ಪರವಾಗಿ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ನೋಟಿಸ್ ನೀಡಿದೆ. 2010 ರವರೆಗೆ ಎಂಆರ್‌ಪಿಎಲ್ ಯಾವುದೇ ಮೊತ್ತವನ್ನು ಗೃಹಮಂಡಳಿಗೆ ಸಲ್ಲಿಸಿಲ್ಲ ಎಂದು ಮತ್ತೊಂದು ನೋಟಿಸ್ ಕಳುಹಿಸಿತ್ತು.
 11 ಮಂದಿಯಲ್ಲಿ 5 ಮಂದಿ ನಿಧನ ಅಥವಾ ನಾಪತ್ತೆಯಾಗಿದ್ದು, ಉಳಿದವರು ಮರಣ ಹೊಂದುವ ಮುನ್ನ ಎಂಆರ್‌ಪಿಎಲ್ ಸೂಕ್ತ ಪರಿಹಾರ ನೀಡಲಿ ಎಂದು ಶ್ಯಾನುಭಾಗ್ ಆಗ್ರಹಿಸಿದರು.

10 ವರ್ಷದಿಂದ ಕೆಐಡಿಬಿ ಮನೆ ನಂಬರ್ ಕೊಟ್ಟಿಲ್ಲ
ಕುತ್ತೆತ್ತೂರಿನಲ್ಲಿ ವಾಸವಾಗಿದ್ದ ಅಪ್ಪಿ ಪೂಜಾರ್ತಿ ಅವರು 2002ರಲ್ಲಿ ಕ್ಯಾನ್ಸರ್‌ನಿಂದ ನಿಧನ ಹೊಂದಿದ್ದು, ಅವರ ಮಗಳು ಚಿತ್ರಾಕ್ಷಿ ಹಲವು ವರ್ಷಗಳಿಂದ ಪರಿಹಾರಕ್ಕಾಗಿ ಅಲೆದಾಡುತ್ತಿದ್ದಾರೆ. ಎಂಆರ್‌ಪಿಎಲ್ ಪರಿಹಾರ ನೀಡುವುದಾಗಿ ಒಪ್ಪಿದ್ದು, 10 ವರ್ಷದಿಂದ ಕೆಐಡಿಬಿಯಿಂದ ಮನೆ ನಂಬರ್‌ಗಾಗಿ ಅಲೆದಾಡುತ್ತಿದ್ದೇನೆ ಎಂದು ಚಿತ್ರಾಕ್ಷಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement