ಇಂದು ಮತ ಎಣಿಕೆ, 11 ಗಂಟೆಗೆ ಭವಿಷ್ಯ ಬಹಿರಂಗ
ಮಂಗಳೂರು: ಜಿಲ್ಲೆಯ 7 ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯ ಮತ ಎಣಿಕೆ ಸೋಮವಾರ ನಡೆಯಲಿದೆ.
189 ವಾರ್ಡ್‌ಗಳಿಗೆ 677 ಮಂದಿ ಕಣದಲ್ಲಿದ್ದು, ಸೋಮವಾರ ಮಧ್ಯಾಹ್ನ 11 ಗಂಟೆ ವೇಳೆಗೆ ಪೂರ್ತಿ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ. ಮಂಗಳೂರು ಮಹಾನಗರ ಪಾಲಿಕೆ, ಮೂಡುಬಿದಿರೆ, ಉಳ್ಳಾಲ, ಬಂಟ್ವಾಳ, ಪುತ್ತೂರು ಪುರಸಭೆ, ಬೆಳ್ತಂಗಡಿ ಹಾಗೂ ಸುಳ್ಯ ಪಟ್ಟಣ ಪಂಚಾಯ್ತಿಗಳ ಚುನಾವಣಾ ಮತ ಎಣಿಕೆ ಆಯಾ ತಾಲೂಕು ಕೇಂದ್ರದಲ್ಲಿ ಬೆಳಗ್ಗೆ 8 ರಿಂದ ಪ್ರಾರಂಭವಾಗಲಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ 186, ಬಿಜೆಪಿ 179, ಜೆಡಿಎಸ್ 130, ಸಿಪಿಐ 2, ಸಿಪಿಐಎಂ 33, ಸ್ವತಂತ್ರರು 55, ಜೆಡಿಯು 2, ಬಿಎಸ್‌ಆರ್ 14, ಎಸ್‌ಡಿಪಿಐ 46, ಕೆಜೆಪಿ 23, ಡಬ್ಲ್ಯೂಪಿಐ 6, ಐಯುಮುಲಿ 1 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಒಟ್ಟು 464298 ಮತದಾರರ ಪೈಕಿ 307537 ಮಂದಿ ಮತ ಚಲಾಯಿಸಿದ್ದರು. ಜಿಲ್ಲೆಯಲ್ಲಿ ಶೇ.66.24 ಮತದಾನವಾಗಿತ್ತು.
11 ಗಂಟೆಗೆ ಎಲ್ಲ ಫಲಿತಾಂಶ
ಬೆಳಗ್ಗೆ 8 ಗಂಟೆಗೆ ಪ್ರಥಮವಾಗಿ ಅಂಚೆ ಮತಪತ್ರ ಎಣಿಕೆ, ನಂತರ 12 ಕೊಠಡಿಗಳಲ್ಲಿ 48 ಮೇಜುಗಳಲ್ಲಿ 144 ಮಂದಿ ಮತ ಎಣಿಕೆ ನಡೆಸಲಿದ್ದಾರೆ. ಇವರಿಗೆ ಮೇಜು ಸಹಾಯಕರು, ಲೆಕ್ಕ ಸಹಾಯಕರು ಎಂದು 36 ಮಂದಿ ಇರುತ್ತಾರೆ. ಈ ಬಾರಿ ಎಲೆಕ್ಟ್ರಾನಿಕ್ ಮತ ಯಂತ್ರ ಬಳಸಿರುವುದರಿಂದ 11 ಗಂಟೆಗೆ ಪೂರ್ಣ ಫಲಿತಾಂಶ ನಿರೀಕ್ಷಿಸಲಾಗಿದೆ.
ವಿಜಯೋತ್ಸವ ಇಲ್ಲ
ಈ ಸಲವೂ ವಿಜೇತ ಅಭ್ಯರ್ಥಿಗಳು, ಪಕ್ಷಗಳು ವಿಜಯೋತ್ಸವ ಆಚರಿಸುವಂತಿಲ್ಲ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಲಂ 35 ಕೆ.ಪಿ. ಕಾಯ್ದೆಯನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದು ಮಾ.11ರಂದು ಬೆಳಗ್ಗೆ 6ರಿಂದ 14ರ ಬೆಳಗ್ಗೆ 6 ಗಂಟೆ ವರೆಗೆ ಜಾರಿಯಲ್ಲಿರುತ್ತದೆ. ಇದರನ್ವಯ ಯಾವುದೇ ಸಭೆ, ಸಮಾರಂಭ ಮತ್ತು ಪ್ರತಿಭಟನಾ ಮೆರವಣಿಗೆ ನಡೆಸುವಂತಿಲ್ಲ.
ಎಲ್ಲೆಲ್ಲಿ ಮತ ಎಣಿಕೆ...?
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ರೊಸಾರಿಯೊ ಶಾಲೆಯಲ್ಲಿ ನಡೆಯಲಿದೆ. ಮೂಡುಬಿದಿರೆ-ಮಹಾವೀರ ಕಾಲೇಜು, ಉಳ್ಳಾಲ-ಭಾರತ್ ಹೈಸ್ಕೂಲ್, ಬಂಟ್ವಾಳ-ತಾಲೂಕು ಪಂಚಾಯ್ತಿ ಸಾಮರ್ಥ್ಯ ಸೌಧ, ಪುತ್ತೂರು-ಫಿಲೋಮಿನಾ ಹೈಸ್ಕೂಲ್, ಬೆಳ್ತಂಗಡಿ-ಪಟ್ಟಣ ಪಂಚಾಯ್ತಿ, ಸುಳ್ಯ-ತಾಲೂಕು ಕಚೇರಿಯಲ್ಲಿ ಮತಎಣಿಕೆ ನಡೆಯಲಿದೆ. ಆಯಾ ತಾಲೂಕುಗಳ ತಹಸೀಲ್ದಾರ್ ಇಲ್ಲಿ ಚುನಾವಣಾ ಅಧಿಕಾರಿಯಾಗಿರುತ್ತಾರೆ. ಪಾಲಿಕೆ ಮತಎಣಿಕೆ ಜವಾಬ್ದಾರಿ ಪಾಲಿಕೆ ಆಯುಕ್ತರದ್ದು. ಈ ಬಾರಿ ಸ್ಥಳೀಯ ಸಂಸ್ಥೆಗಳಿಗೆ ಮತದಾನಕ್ಕೆ ಎಲೆಕ್ಟ್ರಾನಿಕ್ ಮತ ಯಂತ್ರ ಬಳಸಿರುವುದರಿಂದ ಮತಎಣಿಕೆ ಕಾರ್ಯ ಸುಲಭವಾಗಿ, ಬೇಗನೆ ಮುಕ್ತಾಯವಾಗಲಿದೆ. ಮತ ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿ, ಏಜೆಂಟ್ ಸಹಿತ 5 ಮಂದಿಗೆ ಪ್ರವೇಶ ಇರುತ್ತದೆ. ಅವರಿಗೆ ಮೊಬೈಲ್ ದೂರವಾಣಿ ನಿಷೇಧಿಸಲಾಗಿದೆ.
ಪ್ರತ್ಯೇಕ ಮಾಧ್ಯಮ ಕೇಂದ್ರ
ಆಯಾ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮದವರಿಗೆ ಪ್ರತ್ಯೇಕ ಕೇಂದ್ರ ತೆರೆಯಲಾಗಿದೆ. ವಿಶಾಲ ಪರದೆಯಲ್ಲಿ ಕ್ಷಣ ಕ್ಷಣದ ಮತ ಎಣಿಕೆಯನ್ನು ಅಪ್‌ಡೇಟ್ ಮಾಡಲಾಗುತ್ತದೆ. ಅಲ್ಲಿಂದಲೇ ಮಾಧ್ಯಮದವರು ಮಾಹಿತಿ ಪಡೆಯಬೇಕು. ದೃಶ್ಯ ಮಾಧ್ಯಮ ಮತ್ತು ಛಾಯಾಚಿತ್ರ ಗ್ರಾಹಕರಿಗೆ ಬೆಳಗ್ಗೆ 8ರ ಬಳಿಕ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಹೆಚ್ಚುತ್ತಿದೆ ಕದನ ಕುತೂಹಲ, ಕೋಟಿ ಮುಟ್ಟಿದ ಬೆಟ್ಟಿಂಗ್
ಬಂಟ್ವಾಳ: ಪುರಸಭೆಯ 23 ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯ ಫಲಿತಾಂಶದ ಬಗ್ಗೆಯೇ ಎಲ್ಲರ ಗಮನ ಕೇಂದ್ರೀಕೃತವಾಗಿದ್ದು, ಎಲ್ಲೆಡೆಯಲ್ಲೂ ಕುತೂಹಲ ಮುಗಿಲು ಮುಟ್ಟಿದೆ.
ಮತ ಎಣಿಕೆ ಕಾರ್ಯ ಸೋಮವಾರ ಬಂಟ್ವಾಳ ತಾಪಂನ ಸಾಮರ್ಥ್ಯ ಸೌಧ ಕಟ್ಟಡದಲ್ಲಿ ಮಾ.11ರಂದು ನಡೆಯಲಿದ್ದು, ನಾವೇ ಗೆಲ್ಲುತ್ತೇವೆ ಎನ್ನುತ್ತಿರುವ ಅಭ್ಯರ್ಥಿಗಳಲ್ಲಿ ನಿಜವಾದ ಗೆಲುವಿನ ಸರದಾರರಾರು ಎನ್ನುವುದು ಗೊತ್ತಾಗಲಿದೆ.
ಬಿ.ಸಿ. ರೋಡಿನ ಅಶ್ರಮ ಶಾಲಾ ಪಕ್ಕದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಭದ್ರವಾಗಿ ಇರಿಸಲಾಗಿದ್ದು, ಈ ಕಟ್ಟಡದ ಸುತ್ತ ಪೊಲೀಸ್ ಭದ್ರತೆ ನೀಡಲಾಗಿದೆ. ಸೋಮವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, 4 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ. ಇದೇ ಮೊದಲ ಬಾರಿಗೆ ನಗರ ಸ್ಥಳಿಯಾಡಳಿತ ಸಂಸ್ಥೆಗೂ ಮತಯಂತ್ರ ಬಳಕೆಯಾಗುವುದರಿಂದ ಮಧ್ಯಾಹ್ನಕ್ಕೆ ಮುಂಚಿತವಾಗಿ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
ಮತದಾನದಲ್ಲಿ ಮಹಿಳೆಯರದ್ದೇ ಮೇಲುಗೈ: ಪುರಸಭಾ ವ್ಯಾಪ್ತಿಯ ಒಟ್ಟು 28,261 ಮಂದಿ ಮತದಾರರ ಪೈಕಿ 21,504 ಮಂದಿ ಮತ ಚಲಾಯಿಸಿದ್ದಾರೆ. 10,505 ಮಂದಿ ಗಂಡಸರು, 10,999 ಮಂದಿ ಹೆಂಗಸರು ತಮ್ಮ ಹಕ್ಕನ್ನು ಚಲಾಯಿಸಿದ್ದು, ಶೇ.76.09 ಮತದಾನವಾಗಿದೆ. ಪುರಸಭಾ ವ್ಯಾಪ್ತಿಯ 23 ಸ್ಥಾನಗಳಿಗೆ 82 ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾರರು ಯಾರನ್ನು ಬಹುಮತ ನೀಡಿ ಆಯ್ಕೆ ಮಾಡಿದ್ದಾರೆ ಎಂಬುದು ಬಹಿರಂಗವಾಗಲು ಸೋಮವಾರದವರೆಗೆ ಕಾಯಲೇ ಬೇಕು.
ವಾರ್ಡ್ ವಾರ್: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ 23 ವಾರ್ಡ್‌ಗಳಿಗೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ಕಾಂಗ್ರೆಸ್ 22 ವಾರ್ಡನಲ್ಲಿ ಅಧಿಕೃತ ಹಾಗೂ ವಾರ್ಡ್ 5ರಲ್ಲಿ ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ಸೂಚಿಸಿ ಚುನಾವನೆಯನ್ನು ಎದುರಿಸಿದೆ. ರಾಷ್ಟ್ರೀಯ ಪಕ್ಷಗಳ ಗೆಲುವಿನ ನಾಗಾಲೋಟಕ್ಕೆ ಸಿಪಿಐ, ಸಿಪಿಎಂ, ಮುಸ್ಲಿಂ ಲೀಗ್ ಹಾಗೂ ಪ್ರಾದೇಶಿಕ ಪಕ್ಷಗಳಾದ ಜೆಡಿಎಸ್, ಎಸ್‌ಡಿಪಿಐ, ಕೆಜೆಪಿ ಸಹಿತ ಸ್ವತಂತ್ರ ಅಭ್ಯರ್ಥಿಗಳು ಲಗಾಮು ಹಾಕುವ ಯತ್ನ ನಡೆಸಿವೆ. ಹೀಗಾಗಿ ಕದನ ಕುತೂಹಲ ಹೆಚ್ಚಾಗಿದೆ.
ಕೋಟಿ ಮುಟ್ಟಿದೆ ಬೆಟ್ಟಿಂಗ್: ಸೋಮವಾರ ನಡೆಯಲಿರುವ ಪುರಸಭಾ ಚುನಾವಣಾ ಮತ ಎಣಿಕೆಗೆ ಪೂರ್ವಭಾವಿಯಾಗಿ ಬಂಟ್ವಾಳದಲ್ಲಿ ಅಭ್ಯರ್ಥಿಗಳ ಪರವಾದ ಬೆಟ್ಟಿಂಗ್ ಜಾಲ ಕೋಟಿ ಮಟ್ಟಕ್ಕೂ ಮುಟ್ಟಿದೆಯಂತೆ. ವಿವಿಧ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ತಂತಮ್ಮ ಅಭ್ಯರ್ಥಿಗಳು, ಪಕ್ಷ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ಪರಸ್ಪರ ಬೆಟ್ಟಿಂಗ್ ಕಟ್ಟಿದ್ದು ಇದರ ಮೌಲ್ಯ ಲಕ್ಷಗಳನ್ನು ದಾಟಿ ಕೋಟಿವರೆಗೂ ಮುಟ್ಟಿದೆ. ಬಹುತೇಕ ಎಲ್ಲಾ ವಾರ್ಡ್‌ಗಳಿಗೂ ಬೆಟ್ಟಿಂಗ್ ಕಟ್ಟಲಾಗಿದೆಯಾದರೂ, ಎಲ್ಲರ ಕುತೂಹಲ ಕೇಂದ್ರೀಕೃತವಾಗಿರುವುದು ವಾರ್ಡ್ ಸಂಖ್ಯೆ 5ರಲ್ಲಿ. ಪುರಸಭೆಯ ನಿಕಟಪೂರ್ವಾಧ್ಯಕ್ಷ ದಿನೇಶ್ ಭಂಡಾರಿ ಹಾಗೂ ಪಕ್ಷೇತರ ಅಭ್ಯರ್ಥಿ ಪ್ರವೀಣಣಿ ಬಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದ್ದು, ಪ್ರತಿಷ್ಠೆಯ ಕಣ ಎಂದು ಹೇಳಲಾಗಿದ್ದು, ಈ ವಾರ್ಡ್‌ನ ಫಲಿತಾಂಶವನ್ನೇ ಆಧರಿಸಿ ಅತಿ ಹೆಚ್ಚು ಬೆಟ್ಟಿಂಗ್ ನಡೆದಿದೆ ಎನ್ನಲಾಗಿದೆ.