'ನುಡಿಸಿರಿ, ವಿರಾಸತ್ ಮೂಲಕ ಎಲ್ಲ ಜಾತಿ, ಧರ್ಮದವರನ್ನು ಒಗ್ಗೂಡಿಸುವ ಆಸೆ'
ಬೆಳ್ತಂಗಡಿ: ವಿಶ್ವ ನುಡಿಸಿರಿ, ವಿರಾಸತ್ ಮೂಲಕ ಎಲ್ಲಾ ಜಾತಿ ಮತ ಧರ್ಮದವರನ್ನು ಒಂದೂಗೂಡಿಸುವ ಸಂಕಲ್ಪ ನನ್ನದು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ್ ಆಳ್ವ ಹೇಳಿದರು.
ಅವರು ಶುಕ್ರವಾರ ಸಂಜೆ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಮೂಡುಬಿದಿರೆಯಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಅಂಗವಾಗಿ ನಡೆಯುತ್ತಿರುವ ಪ್ರಚಾರ ಅಭಿಯಾನದ ಅಂಗವಾಗಿ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನ ಬೆಳ್ತಂಗಡಿ ಘಟಕವನ್ನು ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಪ್ರಭಾಕರ್ ಉದ್ಘಾಟಿಸಿ ಆಳ್ವರ ಸಾಂಸ್ಕೃತಿಕ ಕಾರ್ಯ ಯಜ್ಞದಂತೆ. ಸಮಾಜಮುಖಿಯಾಗಿದೆ ಎಂದರು.
ಶಾಸಕ ವಸಂತ ಬಂಗೇರ ಶುಭ ಹಾರೈಸಿದರು. ಉದ್ಯಮಿ ಕೆ. ರಮಾನಂದ ಸಾಲಿಯಾನ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ವೇದಿಕೆಯಲ್ಲಿದ್ದರು. ಎಸ್‌ಡಿಎಂ ಉಜಿರೆ ಕಾಲೇಜಿನ ಉಪನ್ಯಾಸಕ ಸಂಪತ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಉಪನ್ಯಾಸಕ ಚಂದ್ರಶೇಖರ ಗೌಡ ವಂದಿಸಿದರು.
ಬಳಿಕ ನಡೆದ ಮೋಹಿನಿ ಅಟ್ಟಂ, ಪಂಜಾಬ್ ಜನಪದ ಬಂಜಾರ ನೃತ್ಯ, ಬಡಗುತಿಟ್ಟು ಯಕ್ಷಗಾನ ಶೃಂಗಾರದ ವೈಭವ ಮತ್ತು ದಶಾವತಾರ, ಮಣಿಪುರಿ ಸ್ಪಿಕ್ ಡ್ಯಾನ್ಸ್, ನವದುರ್ಗೆಯರ ಭರತನೃತ್ಯ, ಮಣಿಪುರಿ ದೋಲ್ ಚಲಮ್, ಕೇರಳದ ಓಪ್ಪಣಂ, ಮಹಾರಾಷ್ಟ್ರದ ಲಾವಣಿ ನೃತ್ಯ, ಜೀವನ್ ರಾಂ ಸುಳ್ಯ ನಿರ್ದೇಶನದಲ ದೇವವೃದ್ಧರು ಕಿರು ನಾಟಕ, ತೆಂಕುತಿಟ್ಟು ಯಕ್ಷಗಾನದ ಹನುಮ ಒಡ್ಡೋಲಗ, ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹದ ಬೇಟೆ ನೃತ್ಯ, ಕಥಕ್ ನೃತ್ಯ, ಮಹಿಳಾ ಕಂಸಾಳೆ ಜನಮನಸೂರೆಗೊಂಡಿತು.
ರಾ.ಹೆ. 75ರಲ್ಲಿ ಬಿರುಕು...!
ಬಂಟ್ವಾಳ:ರಾಷ್ಟ್ರೀಯ ಹೆದ್ದಾರಿ 75ರ ಬ್ರಹ್ಮರಕೂಟ್ಲುವಿನಲ್ಲಿ ರಸ್ತೆಯಲ್ಲಿ ಮೂಡಿರುವ ಬಿರುಕೊಂದು ವಾಹನ ಸವಾರರ ಪ್ರಾಣಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಹೆದ್ದಾರಿಯಲ್ಲಿರುವ ಸೇತುವೆ ಹಾಗೂ ರಸ್ತೆ ಸಂದಿಸುವ ಸ್ಥಳದಲ್ಲಿ ಸರಿಯಾದ ಡಾಂಬರೀಕರಣವಾಗದೇ ಈ ಬಿರುಕು ಕಾಣಿಸಿಕೊಂಡಿದೆ. ಇಲ್ಲಿ ಚತುಷ್ಪಥ ರಸ್ತೆ ದ್ವಿಪಥವಾಗಿ ಪರಿವರ್ತನೆಯಾಗುವುರಿಂದ ಹೆದ್ದಾರಿಯಲ್ಲಿ ಅತೀ ವೇಗದಲ್ಲಿ ಬರುವ ವಾಹನಗಳು ಇಲ್ಲಿ ದಿಢೀರ್ ಬ್ರೇಕ್ ಹಾಕುವ ಪರಿಣಾಮ ಅಪಘಾತಗಳು ನಡೆಯುತ್ತಿವೆ.
ವಾಹನಗಳ ಸರಣಿ ಡಿಕ್ಕಿಯಂತಹ ಹಲವಾರು ರಸ್ತೆ ಅಪಘಾತಗಳು ಇಲ್ಲಿ ನಡೆದಿದ್ದು, ರಸ್ತೆಯಲ್ಲಿನ ಈ ಬಿರುಕೇ ಕಾರಣ ಎನ್ನಲಾಗುತ್ತಿದೆ. ಹೊಂಡದಾಕೃತಿಯಲ್ಲಿರುವ ಈ ಬಿರುಕನ್ನು ಮುಚ್ಚುವಂತೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಮಹೇಶ್‌ಪ್ರಸಾದ್ ಸ್ವತಃ ಎರಡು ಬಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಇದೊಂದು ಸಮಸ್ಯೆಯೇ ಅಲ್ಲ ಎನ್ನವಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ಪ್ರಾಣಾಪಾಯ ಸಂಭವಿಸುವ ಮೊದಲು ಹೆದ್ದಾರಿ ಇಲಾಖೆ ಎಚ್ಚೆತ್ತುಕೊಳ್ಳಲಿ ಎನ್ನುತ್ತಾರೆ ಸ್ಥಳೀಯರು.