ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

1ನೇ ಕ್ಲಾಸ್ ಸೇರ್ಪಡೆಗೆ ಮಕ್ಕಳೇ ಬ್ಯಾಟಿಂಗ್!

Srinivasa Murthy VN
Updated On : 13 Mar 2013, 11:26 am

-ಆತ್ಮಭೂಷಣ್
ಮಂಗಳೂರು: ಸರ್ಕಾರಿ ಶಾಲೆಯಲ್ಲಿ ಗುಣಮಟ್ಟ ಶಿಕ್ಷಣ, ಉತ್ತಮ ಬೋಧಕ ವರ್ಗ, ಸಕಲ ಸೌಕರ್ಯ ಇದ್ದರೂ ಮಕ್ಕಳ ಕೊರತೆ ಮಾಮೂಲು. ಇದೇ ಕಾರಣಕ್ಕೆ ಪ್ರತಿ ವರ್ಷ ಒಂದೆರಡು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಇದನ್ನು ಸವಾಲಾಗಿ ಸ್ವೀಕರಿಸಿದ ಬಂಟ್ವಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ)ಹೊಸ ಪ್ರಯೋಗ ನಡೆಸಿ ಯಶಸ್ವಿಯಾಗಿದೆ. ಮುಂದಿನ ವರ್ಷಕ್ಕೆ ಈಗಲೇ 15 ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯಲಿದ್ದಾರೆ.
 ಇಂಥದ್ದೊಂದು ವಿಶೇಷ ಪ್ರಯತ್ನ ನಡೆಸಿರುವುದು ಬಂಟ್ವಾಳ ಕರಿಯಂಗಳದ ಪಲ್ಲಿಪಾಡಿ ಸರ್ಕಾರಿ ಶಾಲೆ. 1 ರಿಂದ 8ನೇ ತರಗತಿ ವರೆಗಿನ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ 85. ಈ ವರ್ಷ 1ನೇ ತರಗತಿಯಲ್ಲಿ 10 ಮಕ್ಕಳಿದ್ದಾರೆ. ಸಮೀಪದಲ್ಲೇ ಎರಡು ಖಾಸಗಿ ಶಾಲೆಗಳು. ಸರ್ಕಾರಿ ಶಾಲೆಯಿಂದಲೂ ಮಕ್ಕಳನ್ನು ಸೆಳೆದುಕೊಳ್ಳಲು ಪ್ರಾರಂಭಿಸಿದಾಗ ಎಸ್‌ಡಿಎಂಸಿ ಶಾಲೆಯನ್ನು ಉಳಿಸಿಕೊಳ್ಳಲು ತಂತ್ರ ರೂಪಿಸಬೇಕಾಯಿತು.
ಮನೆಗೆ ಮಕ್ಕಳ ಅಭಿಯಾನ: ಈ ಬಾರಿ ಒಂದನೇ ತರಗತಿಯಲ್ಲಿ ಮಕ್ಕಳ ಸಂಖ್ಯೆ ಕುಸಿಯುವ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಂಡ ಎಸ್‌ಡಿಎಂಸಿ ಜನವರಿಯಲ್ಲಿ ವಿಶೇಷ ಯೋಜನೆಯನ್ನು ರೂಪಿಸಿತು. ಅಂದರೆ ಶಾಲಾ ಶಿಕ್ಷಕರ ಜತೆ ಮಕ್ಕಳನ್ನೂ ಕರೆದುಕೊಂಡು ಹೋಗುವುದು. ಅದೇನು ದೊಡ್ಡ ಸಂಗತಿಯಲ್ಲ, ಮಕ್ಕಳು ತಮಗೆ ಸರ್ಕಾರಿ ಶಾಲೆಯಲ್ಲಿ ಕಲಿಸಿದ್ದನ್ನು, ಆಂಗ್ಲ ಭಾಷಾ ಜ್ಞಾನವನ್ನು ಒರೆಗೆ ಹಚ್ಚುತ್ತಾರೆ. ಮನೆಯಲ್ಲಿ ಬೌದ್ಧಿಕ ಸಾಮರ್ಥ್ಯ ಪ್ರದರ್ಶಿಸಿ ಸರ್ಕಾರಿ ಶಾಲೆ ಬಗ್ಗೆ ವಿಶ್ವಾಸ ಮೂಡಿಸುತ್ತಾರೆ. ಇದಕ್ಕೆ ತಲೆದೂಗುವ ಹೆತ್ತವರು ತಮ್ಮ ಮಗುವನ್ನು ಒಂದನೇ ತರಗತಿಗೆ ಸರ್ಕಾರಿ ಶಾಲೆಗೆ ಸೇರಿಸುವ ನಿರ್ಧಾರ ಕೈಗೊಳ್ಳುತ್ತಾರೆ.
ಈವರೆಗೆ 15 ಮಕ್ಕಳು ದಾಖಲು: ಈ ವಿಶೇಷ ಪ್ರಯತ್ನದಿಂದ ಈಗಲೇ 15 ಮಕ್ಕಳು ಒಂದನೇ ತರಗತಿಗೆ ದಾಖಲಾಗಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ ಪಟ್ಟಿ ತೆಗೆದುಕೊಂಡು ಒಂದನೇ ತರಗತಿ ಸೇರ್ಪಡೆಗೆ ಮಕ್ಕಳು ಎಲ್ಲಿದ್ದಾರೆ ಎಂದು ಗುರುತಿಸುತ್ತೇವೆ. ನಂತರ ಅಂಥ ಮನೆಗಳಿಗೆ ತೆರಳುತ್ತೇವೆ. ಪ್ರತಿ ಮನೆಗೆ 20 ಮಕ್ಕಳನ್ನು ಕರೆದುಕೊಂಡು ಹೋಗುತ್ತೇವೆ. ಈ ಪ್ರಯೋಗ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯುವಲ್ಲಿ ಪರಿಣಾಮ ಬೀರಿದೆ. ಇದೇ ರೀತಿ ಖಾಸಗಿ ಶಾಲೆಯಿಂದ ಎರಡು ಮಕ್ಕಳನ್ನು ವಾಪಾಸ್ ಸರ್ಕಾರಿ ಶಾಲೆಗೆ ಸೇರಿಸುವಲ್ಲಿ ಸಫಲರಾಗಿದ್ದೇವೆ ಎನ್ನುತ್ತಾರೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ರಾವ್.
 ಖಾಸಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳಂತೆ ಸರ್ಕಾರಿ ಶಾಲೆಯಲ್ಲೂ ಸಮವಸ್ತ್ರ ಜತೆಗೆ ಟೈ, ಬೂಟ್ಸ್ ಇದೆ. ಒಂದನೇ ತರಗತಿಯಿಂದ ಇಂಗ್ಲಿಷ್ ಪರಿಚಯಿಸಲು ನವೆಂಬರ್‌ನಲ್ಲಿ ವಿಶೇಷ ಶಿಕ್ಷಕರನ್ನು ನೇಮಿಸಲಾಗಿದೆ. ಹೀಗೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಏನೂ ಕಡಿಮೆ ಇಲ್ಲದಂತೆ ಈ ಸರ್ಕಾರಿ ಶಾಲೆ ಸುಸಜ್ಜಿತವಾಗಿ ಮಕ್ಕಳನ್ನು ಆಕರ್ಷಿಸುವಂತೆ ಮಾಡಲಾಗಿದೆ ಎನ್ನುತ್ತಾರೆ ಅವರು.

ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದ ಆಂಗ್ಲ ಮಾಧ್ಯಮ ಬೋಧನೆಗೆ ಅವಕಾಶವಿದೆ. ಒಂದನೇ ತರಗತಿಯಿಂದ ಭಾಷೆಯಾಗಿ ಇಂಗ್ಲಿಷ್ ಕಲಿಸಬಹುದು. ಜಿಲ್ಲೆಯ ಕೆಲವೇ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಪರಿಚಯಿಸಲಾಗುತ್ತಿದೆ. ಒಂದನೇ ತರಗತಿಗೆ ಮಕ್ಕಳ ದಾಖಲಾತಿಗೆ ಪಲ್ಲಿಪಾಡಿ ಶಾಲೆಯಲ್ಲಿ ನಡೆದಿರುವ ಪ್ರಯತ್ನ ಇತರರಿಗೆ ಮಾದರಿ.
- ಶಿವಪ್ರಕಾಶ್, ಸರ್ವ ಶಿಕ್ಷಣ ಅಭಿಯಾನ ಜಿಲ್ಲಾ ಸಂಯೋಜಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement