ಮಂಗಳೂರು ರಾಮಕೃಷ್ಣ ಮಠಕ್ಕೆ 'ಏರ್ಯ ಪ್ರಶಸ್ತಿ' ಪ್ರದಾನ
ಮಂಗಳೂರು: ತ್ಯಾಗ ಮತ್ತು ಸೇವೆಯಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳು ವಿವೇಕಾನಂದರ ಸಂದೇಶವನ್ನು ಜೀವನದಲ್ಲಿ ಅಳವಡಿಸಬೇಕು ಎಂದು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಹೇಳಿದರು.
ನಗರದ ಕೆನರಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಮಂಗಳೂರು ರಾಮಕೃಷ್ಣ ಮಠಕ್ಕೆ ನೀಡಿದ 'ಏರ್ಯ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದರು. ಕೆನರಾ ಹೈಸ್ಕೂಲ್ ಎಸೋಸಿಯೇಷನ್ ಅಧ್ಯಕ್ಷ ಎಸ್.ಎಸ್.ಕಾಮತ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯಲ್ಲಿ ದೊರಕಿದ ಮೊತ್ತವನ್ನು ವ್ಯಕ್ತಿತ್ವ ವಿಕಸನದ 'ದಿಶಾ' ಪುಸ್ತಕ ಪುನರ್ ಮುದ್ರಣಕ್ಕೆ ಬಳಸಲಾಗುವುದು ಎಂದರು. ಕಾರ್ಕಳ ಉಪನ್ಯಾಸಕ ಆದರ್ಶ ಗೋಖಲೆ ಅಭಿನಂದನಾ ಭಾಷಣ ಮಾಡಿ, ರಾಮಕೃಷ್ಣ ಮಠ ಮೌಲ್ಯಾಧಾರಿತ ಸಮಾಜ, ಸಂಸ್ಕೃತಿ ಸ್ಥಾಪನೆಗೆ ಶ್ರಮಿಸುತ್ತಿದೆ. ಏರ್ಯ ಪ್ರಶಸ್ತಿಯನ್ನು ರಾಮಕೃಷ್ಣ ಮಠಕ್ಕೆ ನೀಡುವ ಮೂಲಕ ಪ್ರಶಸ್ತಿ ಮೌಲ್ಯ ಹೆಚ್ಚಿದಂತಾಗಿದೆ ಎಂದರು. ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಪ್ರೊ.ಸತೀಶ್ ಭಟ್ ಸ್ವಾಗತಿಸಿ, ಪ್ರಾಧ್ಯಾಪಕಿ ಪ್ರಮೀಳಾ ನಿರೂಪಿಸಿದರು.