ಸಂಜೆ ಗಾಳಿ ಮಳೆ: ಕಡಬ, ಸುಳ್ಯ ಸುತ್ತಮುತ್ತ ಅಪಾರ ಹಾನಿ
ಉಪ್ಪಿನಂಗಡಿ/ಸುಳ್ಯ: ಕೌಕ್ರಾಡಿ ಗ್ರಾಮದ ಇಚಿಲಂಪಾಡಿಯ ಹಲವೆಡೆ ಸೋಮವಾರ ಸಂಜೆ ಬೀಸಿದ ಭಾರಿ ಗಾಳಿ, ಮಳೆ ಹಾಗೂ ಸಿಡಿಲಿಗೆ ಕೃಷಿ ಹಾನಿ ಹಾಗೂ ಆಲಂಕಾರಿನಲ್ಲಿ ಮನೆಗೆ ಹಾನಿಯಾಗಿದೆ.
ಭಾರೀ ಗಾಳಿಯೊಂದಿಗೆ ಸುರಿದ ಮಳೆ ಪರಸರವನ್ನು ತಂಪಾಗಿಸಿದರೆ, ಗಾಳಿಯ ಹೊಡೆತಕ್ಕೆ ಕೃಷಿ ಬೆಳೆಗಳು ಹಾನಿಗೀಡಾದವು. ಇಚಿಲಂಪಾಡಿ ನಿವಾಸಿಗರಾದ ಕೆ.ಐ. ಅಬ್ರಹಾಂ, ಜಾನಪ್ಪ ಪೂಜಾರಿ, ಪ್ರವೀಣ್ ವಿ.ಜಿ., ಜೋಜಿ, ಕೆ.ಸಿ. ವರ್ಗೀಸ್, ಶೈಜು, ರಮಣಿ, ಮನೋಜ್ ಮುಂತಾದವರ ತೋಟದ ರಬ್ಬರ್, ಅಡಕೆ ಮರಗಳು ಹಾನಿಗೊಂಡರೆ, ಮನೆಯ ಶೀಟ್ಗಳು ಗಾಳಿಗೆ ಹಾರಿಹೋಗಿ ತುಂಡಾಗಿ ಅಪಾರ ಹಾನಿ ಸಂಭವಿಸಿದೆ.
ಅಕಾಲಿಕ ಮಳೆಗೆ ಹಲವು ಕಡೆ ಕೃಷಿ ನಾಶವಾಗಿದ್ದು, ಗ್ರಾ.ಪಂ. ಸದಸ್ಯ ಕೆ.ಐ. ಅಬ್ರಹಾಂ ಮತ್ತು ಗ್ರಾಮಕರಣಿಕರು ಹಾನಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಪ್ರಾಕೃತಿಕ ವಿಕೋಪದಡಿ ನಷ್ಟಕ್ಕೀಡಾದ ಕೃಷಿಕರಿಗೆ ಸೂಕ್ತ ಪರಿಹಾರವೊದಗಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲಾಗಿದೆ.
ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ಫರಿದಾಬಾನು ಎಂಬವರ ಮನೆಯ ಮನೆಗೆ ಗಾಳಿಯ ಹೊಡೆತಕ್ಕೆ ಸಿಲುಕಿ ಮರದ ಗೆಲ್ಲು ಬಿದ್ದ ಪರಿಣಾಮ ಮನೆ ಹಾನಿಗೀಡಾಗಿದೆ.
ಇನ್ನೊಂದೆಡೆ ಆಲಂಕಾರು ಗ್ರಾಮದ ಕೆದಿಲ ಸುನೀತ್ ನರ್ಸರಿಯ ಜೇಕೋಬ್ ಎಂಬವರ ಕೃಷಿ ಬೆಳೆಗಳಿಗೆ ಸಿಡಿಲು ಬಡಿದು ಬಾಳೆ, ತೆಂಗು ಮರಗಳು ಸುಟ್ಟುಹೋಗಿದ್ದು, ಸಿಡಿಲಾಘಾತದಿಂದಾಗಿ ಮನೆಯ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಈ ಬಗ್ಗೆ ಕಂದಾಯ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಕಳೆದ ಮೂರು ದಿನಗಳಿಂದ ಸಂಜೆ ವೇಳೆ ಸುರಿಯುತ್ತಿರುವ ಮಳೆ ಹಾಗೂ ಭಾರಿ ಗಾಳಿಗೆ ಕಡಬ ಪರಿಸರದಲ್ಲಿ ಹಲವೆಡೆ ಕೃಷಿ, ಮನೆಗಳಿಗೆ ಹಾನಿಗೀಡಾಗಿರುವ ಬಗ್ಗೆ ವರದಿಯಾಗಿದೆ. ಕೋಡಿಂಬಾಳ ಗ್ರಾಮದ ಬಳ್ಳಿಕಜೆ ರೇಗಪ್ಪ ಗೌಡ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಮನೆ ಜಖಂಗೊಂಡಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೋಮವಾರ ಸಂಜೆ ಬೀಸಿದ ಭಾರಿ ಗಾಳಿಗೆ ಬಲ್ಯ ಬಾಬ್ಲುಬೆಟ್ಟು ಬಿ.ಎಮ್. ಲಿಂಗಪ್ಪ ಗೌಡರ ಸುಮಾರು 175 ಅಡಕೆ ಮರ, 10 ರಬ್ಬರ್ ಗಿಡ ಹಾಗೂ 50 ಬಾಳೆ ಗಿಡಗಳು ಧರೆಗುರುಳಿ ಸಾವಿರಾರು ರುಪಾಯಿ ನಷ್ಟವುಂಟಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಮತ್ತು ಗ್ರಾ.ಪಂ. ಸದಸ್ಯರಾದ ಕೃಷ್ಣಪ್ಪ ದೇವಾಡಿಗ, ದೇವಯ್ಯ ಗೌಡ ಪನ್ಯಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
ಸುಳ್ಯದಲ್ಲಿ ಮನೆಗೆ ಹಾನಿ: ಕೆಲವು ದಿನಗಳಿಂದ ಸುರಿಯುತ್ತಿರುವ ಗಾಳಿ-ಮಳೆಗೆ ಸೋಮವಾರ ರಾತ್ರಿಯೂ ತಾಲೂಕಿನಾದ್ಯಂತ ವ್ಯಾಪಕ ಹಾನಿ ಸಂಭವಿಸಿದ್ದು ಗಾಳಿಮಳೆಗೆ ಬೆಟ್ಟಂಪಾಡಿಯಲ್ಲಿ ಮನೆಯ ಛಾವಣಿ ಸಂಪೂರ್ಣ ಹಾರಿ ಹೋಗಿ ಮನೆಗೆ ಹಾನಿಯಾಗಿದೆ.
ಸುಳ್ಯ ಬೆಟ್ಟಂಪಾಡಿಯಲ್ಲಿ ಥೋಮಸ್ ಮನೆಯ ಶೀಟ್ ಹಾಕಿದ ಛಾವಣಿ ಗಾಳಿಗೆ ಸಂಪೂರ್ಣ ನೆಲಸಮಗೊಂಡಿದ್ದು ಶೀಟ್ ಪುಡಿ ಪುಡಿಯಾಗಿ ಬಿದ್ದಿದೆ.
ಗಾಳಿ ರಭಸಕ್ಕೆ ಮನೆಯ ಶೀಟ್ ತುಂಡಾಗಿ ಸುಮಾರು 100 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದು ಮನೆಯೊಳಗಿನ ಗೃಹೋಪಯೋಗಿ ವಸ್ತುಗಳು ನೀರಿನಿಂದ ತೋಯ್ದಿವೆ. ಸಮೀಪದ ಚಂದ್ರ ಎಂಬವರ ಮನೆ ಮರ ಬಿದ್ದು ಹಾನಿಯಾಗಿದೆ. ಹಾಗೂ ಜನಾರ್ದನ ಎಂಬವರ ಮನೆಯ ಶೀಟ್ ಹುಡಿಯಾಗಿದೆ. ಹಸೈನಾರ್ ಎಂಬವರ ಮನೆಗೂ ಮರಬಿದ್ದು ಹಾನಿಯಾಗಿದೆ. ಬೆಟ್ಟಂಪಾಡಿ ಕ್ರೀಡಾಂಗಣದ ಬಳಿ ಗೌರಿಶಂಕರ ಎಂಬವರ ಮನೆಯ ಶೀಟ್ ಹಾರಿ ಹೋಗಿದೆ. ರಾಧಾಕೃಷ್ಣ ಎಂಬವರ ತೋಟದ ಅಡಕೆ ಮರಗಳು ಮುರಿದಿವೆ. ಅಂಗಳದಲ್ಲಿದ್ದ ಅಡಕೆ ನೀರಲ್ಲಿ ಕೊಚ್ಚಿ ಹೋಗಿದೆ.