'ಟ್ರಾನ್ಸ್ಪೋರ್ಟ್ ಹಬ್'ಗೆ ಶಿಲಾನ್ಯಾಸ
ಕ.ಪ್ರ. ವಾರ್ತೆ ಮಂಗಳೂರು ಮಾ, 18-
ಮಂಗಳೂರಿನ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಎಚ್ಪಿಸಿಎಲ್)ಮಾದರಿಯಲ್ಲಿ ದೇಶದ ಇತರೆ ಪೆಟ್ರೋಲಿಯಂ ಉತ್ಪನ್ನ ಕಂಪನಿಗಳ ಆವರಣದಲ್ಲಿ 'ಟ್ರಾನ್ಸ್ಪೋರ್ಟ್ ಹಬ್' ನಿರ್ಮಿಸಲಾಗುವುದು ಎಂದು ಪೆಟ್ರೋಲಿಯಂ ಸಚಿವ ಡಾ.ವೀರಪ್ಪ ಮೊಯ್ಲಿ ಹೇಳಿದರು. ಸುರತ್ಕಲ್ ಬಾಳ ವ್ಯಾಪ್ತಿಯ ಎಚ್ಪಿಸಿಎಲ್ ಆವರಣದಲ್ಲಿ ಸೋಮವಾರ ದೇಶದ ಮೊದಲ 'ಸಾರಿಗೆ ಹಬ್'ಗೆ ಶಿಲಾನ್ಯಾಸ ನೆರವೇರಿಸಿ, ದೇಶದಲ್ಲಿ ಪರಿಣತ ತೈಲ ಕಂಪನಿಗಳಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಆಮದು, ರಫ್ತು ಹೇರಳವಾಗಿ ನಡೆಯುತ್ತಿದೆ. ದೇಶಕ್ಕೆ 150 ಬಿಲಿಯನ್ ಡಾಲರ್ಸ್ ಪೆಟ್ರೋಲಿಯಂ ಉತ್ಪನ್ನ ಆಮದಾಗುತ್ತಿದ್ದು, ಪ್ರಸಕ್ತ ಶೇ.75 ಬೇಡಿಕೆ ಇದೆ. ಇದಕ್ಕೆ 7 ಲಕ್ಷ ಕೋಟಿ ವಿದೇಶಿ ವಿನಿಮಯ ನೀಡಬೇಕಿದ್ದು, ಇದರ ಬದಲು ದೇಶದಲ್ಲೇ ಇರುವ ಪೆಟ್ರೋಲಿಯಂ ನಿಕ್ಷೇಪಗಳನ್ನು ಹೊರತೆಗೆಯಲು ರೂಪುರೇಷೆ ತಯಾರಿಸಲಾಗುತ್ತಿದೆ. 2030ರ ವೇಳೆಗೆ ಭಾರತ ತೈಲೋತ್ಪನ್ನದಲ್ಲಿ ಪೂರ್ಣ ಸ್ವಾವಲಂಬಿಯಾಗಿ ಸೊನ್ನೆ ಆಮದು ತಲುಪಬೇಕು. ಮಾ.26ರಂದು ರಾಜಸ್ಥಾನದಲ್ಲಿ ತೈಲೋತ್ಪನ್ನ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
'ಟ್ರಾನ್ಸ್ಪೋರ್ಟ್ ಹಬ್' ಎಂದರೆ....
ಟ್ರಾನ್ಸ್ಪೋರ್ಟ್ ಹಬ್ ಎಂದರೆ, ಗ್ಯಾಸ್, ತೈಲ ಸಾಗಾಟಕ್ಕೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಒಂದೆಡೆ ಒದಗಿಸುವುದು. ಇಲ್ಲಿ 300 ಟ್ಯಾಂಕರ್ಗಳನ್ನು ನಿಲ್ಲಿಸಲು ಬೇಕಾದ ಸುಸಜ್ಜಿತ ವ್ಯವಸ್ಥೆ, ಈ ಟ್ಯಾಂಕರ್ಗಳ ಚಾಲಕ, ನಿರ್ವಾಹಕರಿಗೆ ವಸತಿ, ಊಟ ಉಪಾಹಾರ ಕೇಂದ್ರ, ಸ್ನಾನ ಗೃಹ, ವಿಶ್ರಾಂತಿ ಗೃಹ, ಕುಡಿವ ನೀರು, ಶೌಚಾಲಯ, ವಿವಿಧ ಭಾಷೆಗಳಲ್ಲಿ ಸುರಕ್ಷಾ ವಾಕ್ಯ ಇರುತ್ತವೆ. ಮುಖ್ಯ ದ್ವಾರ ಬಳಿ ತಂಗುದಾಣ, ವಿಶ್ರಾಂತಿ ಗೃಹ, ಹೆಸರು ಕೂಗುವ ವ್ಯವಸ್ಥೆ, ಸಂಚಾರಿ ವೀಕ್ಷಣಾ ಫಲಕ, ಔಷಧಾಲಯ, ಮನರಂಜನಾ ಕೊಠಡಿಯನ್ನೂ ಒಳಗೊಳ್ಳಲಿದೆ.