ಮಂಗಳೂರಲ್ಲಿ ಏರ್ ಕಾರ್ಗೋಗೆ ಸಚಿವ ಅಜಿತ್ಸಿಂಗ್ ಚಾಲನೆ
ಕನ್ನಡಪ್ರಭ ವಾರ್ತೆ, ಮಂಗಳೂರು, ಮಾ.18
ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಸರಕು ಸಂಕೀರ್ಣ ಮತ್ತು ಗ್ರಾಹಕರ ಅವಶ್ಯಕತೆಗಳ ಸೌಲಭ್ಯಕ್ಕೆ (ಕನ್ಸ್ಯಾಮರ್ ಟರ್ಮಿನಲ್ ಎಕ್ವಿಪ್ಮೆಂಟ್ ಸೌಲಭ್ಯ- ಕ್ಯೂಟ್) ಕೆಂಜಾರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಕಾರ್ಗೋ ಸೇವೆಗೆ ಚಾಲನೆ ನೀಡಿದ ಕೇಂದ್ರ ವಿಮಾನಯಾನ ಸಚಿವ ಅಜಿತ್ ಸಿಂಗ್, ಇಲ್ಲಿಂದ ಪ್ರಸ್ತುತ ಪ್ರಯಾಣಿಕ ವಿಮಾನದಲ್ಲಿ 'ಪ್ಯಾಸೆಂಜರ್ ಬಿಲ್ಲಿ' ಹೆಸರಿನಲ್ಲಿ ಸರಕು ಸಾಗಾಟ ಮಾಡಲಾಗುತ್ತದೆ. ಸರಕು ಪ್ರಮಾಣ ಜಾಸ್ತಿಯಾದಂತೆ ಪ್ರತ್ಯೇಕ ವಿಮಾನ ಬಳಸಲಾಗುವುದು. ಪ್ರಸಕ್ತ ದಿನಂಪ್ರತಿ 1ರಿಂದ 2 ಟನ್ನಷ್ಟು ಸರಕು ನಿರ್ವಹಣೆ ನಿರೀಕ್ಷಿಸಲಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಮಂಗಳೂರಿನಿಂದ ರಬ್ಬರ್, ಕಾಫಿ, ಹಣ್ಣುಹಂಪಲು, ಮೀನು ಇತ್ಯಾದಿ ತಾಜಾ ಉತ್ಪನ್ನಗಳನ್ನು ರಫ್ತು ಮಾಡಲು ಸುಲಭ. ಇದು ದೇಶದ 8ನೇ ಏರ್ ಕಾರ್ಗೋ ಆಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಮುಂದಿನ 5 ವರ್ಷದಲ್ಲಿ ಕಾರ್ಗೋ ನಿರ್ವಹಣೆ ಶೇ.12.15ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಮಾ.31ರಿಂದ ಮಂಗಳೂರಿನಿಂದ ದಾಮನ್ಗೆ ಏರ್ ಇಂಡಿಯಾ ಯಾನ ಶುರುವಾಗಲಿದೆ. ಈ ನಿಲ್ದಾಣಕ್ಕೆ 6 ತಿಂಗಳಲ್ಲಿ 3ನೇ ಏರ್ ಬ್ರಿಡ್ಜ್ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುವುದು ಎಂದರು.ಕೇಂದ್ರ ಸಚಿವ ವೀರಪ್ಪಮೊಯ್ಲಿ ಮತ್ತಿತರರು ಇದ್ದರು.
ಇಂದು ಕ್ಯಾನ್ಸರ್ ಉಚಿತ ತಪಾಸಣೆ
ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕ್ಯಾನ್ಸರ್ ಕೇರ್ ಇಂಡಿಯಾ ಸಹಯೋಗದೊಂದಿಗೆ ಮಾ.19ರಂದು ಆರ್.ಟಿ.ನಗರದಲ್ಲಿರುವ ಚೋಳನಾಯಕನಹಳ್ಳಿಯ ಸುಮಂಗಲಿ ಸೇವಾ ಟ್ರಸ್ಟ್ನಲ್ಲಿ ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಆಯೋಜಿಸಿದೆ. ಆಸಕ್ತರು ಶಿಬಿರಕ್ಕೆ ತೆರಳುವ ಮೂಲಕ ಕಾನ್ಸರ್ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.
ಧ್ಯಾನ ಉಚಿತ ತರಬೇತಿ ಶಿಬಿರ
ಐಎಸ್ಆರ್ಸಿ ಸಂಸ್ಥೆ ವತಿಯಿಂದ ಪ್ರಾಣಾಹುತಿ ಸಹಿತ ಧ್ಯಾನ ಉಚಿತ ತರಬೇತಿ ಶಿಬಿರ ಮಾ.23 ಮತ್ತು 24ರಂದು ಹಮ್ಮಿಕೊಳ್ಳಲಾಗಿದೆ. ತರಬೇತಿ ಆಂಗ್ಲ ಭಾಷೆಯಲ್ಲಿದ್ದು, ಹೆಸರನ್ನು ನೊಂದಾಯಿಸಿಕೊಳ್ಳಲು 9986500044, 9353017279.
ಫೆಲೋಷಿಪ್ಗೆ ಅರ್ಜಿ ಆಹ್ವಾನ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ 2013-14ನೇ ಶೈಕ್ಷಣಿಕ ಸಾಲಿಗೆ ಎಚ್ಐವಿ ಮೆಡಿಸನ್ ಫೆಲೋಷಿಪ್ ಕೋರ್ಸ್ಗೆ ಅರ್ಹ ಎಂಬಿಬಿಎಸ್ ಮತ್ತು ಬಿಡಿಎಸ್ ಪದವೀದರರ ಆಯ್ಕೆಗೆ ಮಾ.18ರಿಂದ ಅರ್ಜಿಗಳನ್ನು ವಿತರಿಸಲಾಗುತ್ತಿದೆ. ಅಧಿಸೂಚನೆಯನ್ನು ವಿಶ್ವವಿದ್ಯಾಲಯದ ವೆಬ್ಸೈಟ್ನಲ್ಲಿ ಪ್ರಚುರಪಡಿಸಿದ್ದು, ಅಭ್ಯರ್ಥಿಗಳು ಆನ್ಲೈನ್ ಮುಖೇನ ಅರ್ಜಿ ಫಾರಂಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಏ.22ರೊಳಗಾಗಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕಾಗಿದೆ. ಢಿಢಿಢಿ.ಝಠ್ಜ್ಡಡ.ಛ್ಛ.್ಝಟಿ ಮುಖಾಂತರ ಅರ್ಜಿಗಳನ್ನು ಪಡೆಯಬಹುದು.
ಕಸಾಪದಿಂದ ಸಾಹಿತ್ಯ ಸಮ್ಮೇಳನ
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಘಟಕವು ಏಪ್ರಿಲ್ ತಿಂಗಳ ಅಂತಿಮ ಭಾಗದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲಿದೆ. ಸಮ್ಮೇಳನದಲ್ಲಿ ಭಾಗವಹಿಸಲಿಚ್ಛಿಸುವವರು ಹಾಗೂ ಹೆಬ್ಬಾಳ ಕ್ಷೇತ್ರದ ಉದಯೋನ್ಮುಖ ಕವಿಗಳು, ಸಾಹಿತ್ಯ, ಸಂಸ್ಕೃತಿ, ಕಲೆ, ಜಾನಪದ ಕುರಿತಾದ ತಮ್ಮ ಕಿರು ಲೇಖನಗಳನ್ನು ಏ.5ರೊಳಗಾಗಿ ಕಳುಹಿಸಬಹುದು. ಮಾಹಿತಿಗೆ- 9448045869, 9632544327.
ಬೇಸಿಗೆ ಶಿಬಿರ
ರಂಗಾಭರಣ ಕಲಾಕೇಂದ್ರವು ಏ.15ರಿಂದ ಮೇ 15ರವರೆಗೆ ಒಂದು ತಿಂಗಳ ಬೇಸಿಗೆ ಶಿಬಿರ ಆಯೋಜಿಸಿದೆ. ಶಿಬಿರವು ಸಂಜಯನಗರದ ಕೆ.ಇ.ಬಿ. ಬಡಾವಣೆಯಲ್ಲಿರುವ ಚಂದ್ರಪ್ರಿಯಾ ರಂಗಮಂದಿರದಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಚಿತ್ರಕಲೆ, ಕ್ರಾಫ್ಟ್, ಸ್ಪಾಟ್ ಪೈಂಟಿಂಗ್, ಗ್ಲಾಸ್ ಪೈಂಟಿಂಗ್, ಚಲನಚಿತ್ರ ನೃತ್ಯ ಹಾಗೂ ಚಲನಚಿತ್ರ ಭಕ್ತಿಗೀತೆಗಳಲ್ಲಿ ತರಬೇತಿ ನೀಡಲಾಗುವುದು. ಪ್ರವೇಶ ಮತ್ತು ಹೆಚ್ಚಿನ ಮಾಹಿತಿಗೆ- 9019309090, 8453268938 ಸಂಪರ್ಕಿಸಿ.
ಪ್ರವಾಸೋದ್ಯಮ ಇಲಾಖೆಗೆ ಪ್ರಶಸ್ತಿ
ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಇಲಾಖೆ 2011-12ನೇ ಸಾಲಿನ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿ ಗಳಿಸಿದೆ.ಕೇಂದ್ರ ಪ್ರವಾಸೋದ್ಯಮ ಇಲಾಖೆ ನೀಡುವ ರಾಷ್ಟ್ರೀಯ ಪ್ರಶಸ್ತಿಯಲ್ಲಿ ಉತ್ತಮ ಪ್ರವಾಸೋದ್ಯಮ ಪ್ರಚಾರ ವಿಭಾಗದಲ್ಲಿ ರಾಜ್ಯಕ್ಕೆ ಪ್ರಶಸ್ತಿ ಲಭಿಸಿದೆ. ಪ್ರಚಾರ ವಿಭಾಗದಲ್ಲಿಯೇ ಕಳೆದ 5 ವರ್ಷದಲ್ಲಿ ರಾಜ್ಯಕ್ಕೆ ದೊರೆಯುತ್ತಿರುವ 4ನೇ ಪ್ರಶಸ್ತಿಯಿದು.ಮಾ.18ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಪ್ರಶಸ್ತಿ ವಿತರಿಸಿದರು. ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪರವಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯದ ಪ್ರವಾಸೋದ್ಯಮ ಪ್ರಚಾರಕ್ಕಾಗಿ ಕೈಗೊಂಡ ಕ್ರಮಗಳು ಕೇಂದ್ರದ ಮೆಚ್ಚುಗೆಗೆ ಒಳಗಾಗಿವೆ. ಇಲಾಖೆಯ ಕಾರ್ಯತತ್ಪರತೆಗೆ ಪ್ರಶಸ್ತಿ ದೊರಕಿದೆ. ಇದರಿಂದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ಸಾಹ ಹೆಚ್ಚುತ್ತದೆ. ರಾಜ್ಯದ ಪ್ರವಾಸೋದ್ಯಮದ ವಿಶೇಷವನ್ನು ವಿಶ್ವಕ್ಕೆ ತಿಳಿಸಲು ಇದೊಂದು ವೇದಿಕೆಯಾಗುತ್ತದೆ ಎಂದು ಪ್ರಶಸ್ತಿ ಸ್ವೀಕರಿಸಿದ ಜಾದವ್ ಅಭಿಪ್ರಾಯಪಟ್ಟಿದ್ದಾರೆ.
ವೈರಮುಡಿಗೆ ವಿಶೇಷ ಪ್ರವಾಸ
ಮೇಲುಕೋಟೆಯಲ್ಲಿ ಮಾ.22 ರಂದು ನಡೆಯುವ ವೈರಮುಡಿ ಉತ್ಸವಕ್ಕಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಒಂದು ದಿನದ ಪ್ರವಾಸ ಏರ್ಪಡಿಸಿದೆ. ಬೆಂಗಳೂರಿನ ಬಾದಾಮಿ ಹೌಸ್ ನಿಂದ ಮಧ್ಯಾಹ್ನ 3ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6ಗಂಟೆಗೆ ಹಿಂತಿರುಗಲಾಗುವುದು. ಸೀಟಿಗೆ ರು. 550 ಪಾವತಿಸಬೇಕಾಗಿದ್ದು, ಹೆಚ್ಚಿನ ವಿವರಗಳಿಗೆ ವ್ಯವಸ್ಥಾಪಕರು, ಕೆ.ಎಸ್.ಟಿ.ಡಿ.ಸಿ ಬೆಂಗಳೂರು ಮಹಾನಗರ ಪಾಲಿಕೆ ಎದುರು, ಬಾದಾಮಿ ಹೌಸ್ ಅಥಛಿಜ ದೂರವಾಣಿ ಸಂಖ್ಯೆ - 43344334/43344337ಗೆ ಸಂಪರ್ಕಿಸಬಹುದು.
ತುಂಗಭದ್ರಾದಿಂದ ಆಂಧ್ರಕ್ಕೆ ನೀರು
ಹೊಸಪೇಟೆ: ಕುಡಿಯುವ ನೀರಿನ ಅಭಾವ ಅಧಿಕವಾಗಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ಸೋಮವಾರ ಆಂಧ್ರಪ್ರದೇಶಕ್ಕೆ ನೀರು ಬಿಡಲಾಗಿದೆ. ಬೆಳಗ್ಗೆ 8 ಗಂಟೆಯಿಂದ 3,138 ಕ್ಯುಸೆಕ್ ನೀರು ತುಂಗಭದ್ರಾ ನದಿ ಮೂಲಕ ಬಿಡಲಾಗಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಕಂಡು ಬಂದಿದ್ದರಿಂದ ಆಂಧ್ರಪ್ರದೇಶದ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜಲಾಶಯದಿಂದ ಆಂಧ್ರಪ್ರದೇಶದ ಕೋಟಾ ನೀರು ಬಿಡಲಾಗುತ್ತಿದೆ. ತುಂಗಭದ್ರಾ ಮಂಡಳಿ ಅಧಿಕಾರಿಗಳು ಆದೇಶ ನೀಡುವವರೆಗೂ ನೀರು ಹರಿಸಲಾಗುತ್ತದೆ ಎಂದು ತುಂಗಭದ್ರಾ ಆಡಳಿತ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.
ಅಭ್ಯರ್ಥಿ ಆಯ್ಕೆ: ಮಾತಿನ ಚಕಮಕಿ
ಸುಳ್ಯ: ಕೆಜೆಪಿ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸಭೆ ಸೋಮವಾರ ನಡೆದಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕೆಂಬ ವಿಚಾರವಾಗಿ ಬಿಸಿ ಬಿಸಿ ಚರ್ಚೆ ನಡೆದು, ಮಾತಿನ ಚಕಮಕಿಯೂ ನಡೆಯಿತು. ವಿಧಾನಸಭಾ ಚುನಾವಣೆಗೆ ಸುಳ್ಯ ಕ್ಷೇತ್ರದಿಂದ ಕುಂಞರಾಮನ್ರನ್ನು ಅಭ್ಯರ್ಥಿಯಾಗಿಸದೆ ಕುಶಲ ಅವರನ್ನು ಅಭ್ಯರ್ಥಿಯಾಗಿಸಲು ಕ್ಷೇತ್ರಾಧ್ಯಕ್ಷರು ಆಸಕ್ತರಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಾಲಕೃಷ್ಣ ಗೌಡರಿಗೂ ಕುಂಞರಾಮನ್ರಿಗೂ ಮಾತುಗಳ ವಿನಿಮಯವಾಯಿತು. ಅಲ್ಲದೆ, ಸುಳ್ಯ ತಾಲೂಕು ಅಧ್ಯಕ್ಷರನ್ನಾಗಿ ಶಿವಶಂಕರ್ ಅವರನ್ನು ನೇಮಿಸಬೇಕೆಂಬ ಪ್ರಸ್ತಾಪ ಬಂತೆಂದೂ, ವಿಧಾನಸಭಾ ಅಭ್ಯರ್ಥಿಯಾಗಿ ಕುಂಞರಾಮನ್ರಿಗೆ ಪ್ರಥಮ ಆದ್ಯತೆ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಆಗ ಎರಡೂ ಬಣಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಸೈಮನ್ ಚೇತರಿಕೆ
ಬೆಳಗಾವಿ: ಅನಾರೋಗ್ಯದ ಕಾರಣದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಗಲ್ಲು ಶಿಕ್ಷೆಗೆ ಒಳಗಾಗಿರುವ ವೀರಪ್ಪನ ಸಹಚರ ಸೈಮನ್(45) ನನ್ನ ಆರೋಗ್ಯದಲ್ಲಿ ಸೋಮವಾರ ಚೇತರಿಕೆಯಾಗಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಎಸ್.ಟಿ. ಕಳಸದ ಹೇಳಿದ್ದಾರೆ. ತೀವ್ರ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿರುವ ಈತನನ್ನು ಚಿಕಿತ್ಸೆಗಾಗಿ ಭಾನುವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಕೈದಿಗಳ ವಾರ್ಡ್ನಲ್ಲಿ ಸೈಮನ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಡೆಡ್ಲೈನ್ ವಿಸ್ತರಣೆ
ಮುಂಬೈ: ಹಳೆ ಚೆಕ್ ಪುಸ್ತಕಗಳನ್ನು ವಾಪಸ್ ಪಡೆದು ಹೊಸ ಚೆಕ್ ಪುಸ್ತಕಗಳನ್ನು ನೀಡುವ ಅಂತಿಮ ಗಡುವಿನ ದಿನಾಂಕವನ್ನು ಆರ್ಬಿಐ ವಿಸ್ತರಿಸಿದೆ.ಜುಲೈ ಅಂತ್ಯದ ವರೆಗೂ ಹಳೇ ಚೆಕ್ಗಳನ್ನು ಮಾನ್ಯ ಮಾಡುವಂತೆ ಹೇಳಿರುವ ಆರ್ಬಿಐ, ಅಲ್ಲಿವರೆಗೂ ಹೊಸ ಚೆಕ್ಪುಸ್ತಕಗಳನ್ನು ವಿತರಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ.ಎಲೆಕ್ಟ್ರಾನಿಕ್ ಡೆಬಿಟ್ ಸೌಲಭ್ಯ ಇರುವಲ್ಲಿ ಪೋಸ್ಟ್ ಡೇಟೆಡ್ ಚೆಕ್ಗಳ ಮಾನ್ಯತೆ ರದ್ದು ಮಾಡುವುದಾಗಿ ಆರ್ಬಿಐ ಹೇಳಿದೆ. ಅಂದರೆ ಇನ್ನು ಮುಂದೆ ಐಎಂಐಗಳಲ್ಲಿ ಎಲೆಕ್ಟ್ರಾನಿಕ್ ಡೆಬಿಟ್ ಸೌಲಭ್ಯ ಬಳಕೆ ಮಾಡುವಂತೆ ಹೇಳಿದೆ. ದಿನಾಂಕ ವಿಸ್ತರಣೆಯಾಗಿರುವ ಬಗ್ಗೆ ಬ್ಯಾಂಕುಗಳು ಎಸ್ಎಂಎಸ್ ಅಲರ್ಟ್, ಪತ್ರಗಳು, ಬ್ಯಾಂಕುಗಳು, ಎಟಿಎಂಗಳಲ್ಲಿ ಭಿತ್ತಿಪತ್ರಗಳನ್ನು ಹಾಕುವ ಮೂಲಕ ಗ್ರಾಹಕರಲ್ಲಿ ಅರಿವು ಮೂಡಿಸಬೇಕು ಎಂದು ಸೂಚನೆ ನೀಡಿದೆ. ಹೊಸ ಚೆಕ್ ಪುಸ್ತಕಗಳ ವಿತರಣೆ ಮತ್ತು ಹಳೆ ಚೆಕ್ ಪುಸ್ತಕಗಳ ಅವಧಿ ಮಾರ್ಚ್ 31ರವರೆಗೆ ಮಾತ್ರ ಇತ್ತು.
ಸಾರಿಗೆ ಅದಾಲತ್
ಬೆಂಗಳೂರು : ರಾಜಾಜಿನಗರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮಾ.20ರಂದು ಮಧ್ಯಾಹ್ನ 4 ಗಂಟೆಗೆ ಸಾರಿಗೆ ಅದಾಲತ್ ಆಯೋಜಿಸಲಾಗಿದ್ದು ಸಾರ್ವಜನಿಕರು ಭಾಗವಹಿಸಲು ಕೋರಿದೆ.
ಜಾನಪದ ಅಕಾಡೆಮಿಗೆ ಸಹ ಸದಸ್ಯರ ಆಯ್ಕೆ
ಕರ್ನಾಟಕ ಜಾನಪದ ಅಕಾಡೆಮಿಯ ಸಹ ಸದಸ್ಯರನ್ನಾಗಿ ಡಾ. ಮುದೇನೂರು ನಿಂಗಪ್ಪ, ಡಾ.ಮುತ್ತಯ್ಯ, ಹ್ಝಾಡಿ ಡಾ .ಅಭಯ ಕುಮಾರ್ ರವರನ್ನು ಇತ್ತೀಚೆಗೆ ನಡೆದ ಅಕಾಡೆಮಿ ಸರ್ವಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ವೆಂಕಟೇಶ್ ಪ್ರಸಾದ್ 'ಅರ್ಥ್' ಬೆಂಬಲ
ಹವಮಾನದ ಬದಲಾವಣೆಯ ಕುರಿತು ಜಾಗೃತಿ ಮೂಡಿಸಿ ಅದರ ತಡೆಗೆ ಕ್ರಮ ಕೈಗೊಳ್ಳುವ ಡಬ್ಲ್ಯುಡಬ್ಲ್ಯುಎಫ್ನ ಜಾಗತಿಕ ಅಭಿಯಾನ ಅರ್ಥ್ ಅವರ್ಗೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬೆಂಬಲ ಸೂಚಿಸಿದ್ದಾರೆ. 5ನೇ ವರ್ಷದ ಈ ಅಭಿಯಾನವನ್ನು ಮಾ.23ರಂದು ರಾತ್ರಿ 8.30ರಿಂದ9.30ರ ವರೆಗೆ ಆಯೋಜಿಸಲಾಗಿದ್ದು, ಅಭಿವೃದ್ಧಿ ಮತ್ತು ಪರಿಸರ ಆತಂಕಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬೆಂಬಲ ಸೂಚಿಸಲು ವ್ಯಕ್ತಿಗಳು, ಸಂಘಟನೆಗಳು, ಸರ್ಕಾರಗಳು ಮತ್ತು ಸಮೂಹಗಳು ವಿದ್ಯುತ್ಯ್ ಬಳಕೆ ಮಾಡದೇ ಇರುವ ಅತ್ಯಂತ ದೊಡ್ಡ ಜಾಗತಿಕ ಪರಿಸರ ಚಳವಳಿ ಇದಾಗಿದೆ. ಭೂಮಿಯ ಸಂಪನ್ಮೂಲಗಳ ಹೆಚ್ಚು ಬಳಕೆಯಿಂದಾಗಿ ಹವಮಾನದ ಬದಲಾವಣೆಯ ವೇಗ ಮತ್ತು ಗಾತ್ರ ಜಗತ್ತಿನ ಮೇಲೆ ಪರಿಣಾಮ ಉಂಟುಮಾಡುತ್ತಿದೆ. ಹೀಗಾಗಿ ನಮ್ಮ ಶಕ್ತಿ ಉತ್ಪಾದನೆ ವ್ಯವಸ್ಥೆ ಮತ್ತು ಮರುಬಳಕೆಯ ಉತ್ಪನ್ನಗಳನ್ನು ಪರಿವರ್ತಿಸದಿದ್ದರೆ ನಾವು ಹವಮಾನ ಅಸ್ಥಿರತೆ ಕ್ಷೇತ್ರವನ್ನು ಪ್ರವೇಶಿಸಿ ನಮ್ಮನ್ನು ಶಕ್ತಿಯ ಅಭದ್ರತೆ ಕಾಡಲಿದೆ. ಇದಕ್ಕೆ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಬೆಂಬಲ ಸೂಚಿಸಬೇಕು ಎಂದು ವೆಂಕಟೇಶ್ ಪ್ರಸಾದ್ ಮನವಿ ಮಾಡಿದ್ದಾರೆ.
ಆರು ಮಂದಿ 'ಅಂದರ್'
ಅಂದರ್-ಬಾಹರ್ ಅಡ್ಡೆ ಮೇಲೆ ಭಾನುವಾರ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಅಕ್ಕಿಪೇಟೆಯ ಕಾರ್ತಿಕ್(38), ರಾಮು(32), ಚಾಮರಾಜಪೇಟೆಯ ರಾಮ್ಕುಮಾರ್(38), ಅಂಜನಪ್ಪ ಗಾರ್ಡನ್ನ ಪಿಂಟೋ(32), ಕೆ.ಪಿ.ಅಗ್ರಾಹರದ ಮುತ್ತುರಾಜ್(28) ಹಾಗೂ ಮಾಗಡಿ ರಸ್ತೆಯ ಸರವಣ(27) ಬಂಧಿತರು. ಆರೋಪಿಗಳು ಕಾಟನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ವಿ.ದೇವಸ್ಥಾನ ರಸ್ತೆ ಸಮೀಪದ ಲಾಡ್ಜ್ವೊಂದರಲ್ಲಿ ಇಸ್ಪೀಟ್ ಆಟವಾಡುತ್ತಿದ್ದರು. ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ನಗದು ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಟನ್ಪೇಟೆ ಠಾಣೆಯಲ್ಲಿ ದೂರುದಾಖಲಾಗಿದೆ.
ಅಪಘಾತದಲ್ಲಿ ಇಬ್ಬರು ಸಾವು
ಮಾಲೂರು: ಮಾರುತಿ ಓಮ್ನಿ ಹಾಗೂ ಎತ್ತಿನ ಗಾಡಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಬೆಳಗಿನ ಜಾವ 5.30ರ ಸುಮಾರಿಗೆ ಇಲ್ಲಿನ ಬೆಂಗಳೂರು ರಸ್ತೆಯ ಚೊಕ್ಕಂಡಹಳ್ಳಿ ಸಮೀಪದ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಮೃತರನ್ನು ಬೆಂಗಳೂರಿನ ಕಮ್ಮನಹಳ್ಳಿಯ ಸುಬ್ಬಯ್ಯನಪಾಳ್ಯದ ಹರ್ಷ ಬಡಾವಣೆಯ ಪ್ರಭಾಕರ್(28) ನರಸಿಂಹನ್ (37) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಗಾಯಗೊಂಡಿರುವ ಎತ್ತಿನಗಾಡಿ ಚಾಲಕ ದೊಡ್ದಗಾನಹಳ್ಳಿಯ ರವಿಕುಮಾರ್ನನ್ನು ಸ್ಥಳೀಯ ಆಸ್ವತ್ರೆಗೆ ಹಾಗೂ ಗಾಯಗೊಂಡಿರುವ ಹಸುಗಳನ್ನು ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬೆಂಗಳೂರಿನ ಸುಬ್ಬಯ್ಯನಪಾಳ್ಯದ ಹರ್ಷ ಬಡಾವಣೆಯಲ್ಲಿ ನಿರ್ಮಿಸಲಾಗುತ್ತಿರುವ ದೇವಾಲಯಕ್ಕಾಗಿ ಶಿವಾರ ಪಟ್ಟಣದಿಂದ ಆಂಜನೇಯಸ್ವಾಮಿ ಪ್ರತಿಮೆ ತರಲು ಮಾರುತಿ ಓಮ್ನಿಯಲ್ಲಿ ತೆರಳುತ್ತಿದ್ದರು. ಬೆಳಗ್ಗಿನ ಜಾವ ನಿದ್ರೆ ಮಂಪರ್ನಲ್ಲಿ ಮುಂದೆ ಸಾಗುತ್ತಿದ್ದ ಚಪ್ಪಡಿ ಕಲ್ಲು ತುಂಬಿದ್ದ ಎತ್ತಿನ ಟೈರ್ ಗಾಡಿಗೆ ಹಿಂದಿನಿಂದ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ.