ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಗೆ ಎಸ್‌ವಿಪಿ ಹೆಸರು

Srinivasa Murthy VN
Updated On : 20 Mar 2013, 1:54 am

ಮಂಗಳೂರು: ಮಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಗೆ ಎಸ್.ವಿ.ಪರಮೇಶ್ವರ್ ಭಟ್ಟರ ಹೆಸರಿಡುವುದಾಗಿ ವಿವಿ ಕುಲಪತಿ ಟಿ.ಸಿ. ಶಿವಶಂಕರಮೂರ್ತಿ ಮಂಗಳವಾರ ಘೋಷಿಸಿದರು. ಮಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ ಪ್ರೊ.ಎಸ್.ವಿ.ಪರಮೇಶ್ವರ್ ಭಟ್ಟ ಜನ್ಮಶತಮಾನೋತ್ಸವ ಆಚರಣೆ ಪ್ರಯುಕ್ತ ಎಸ್‌ವಿಪಿ ಸಾಹಿತ್ಯ ಅವಲೋಕನ ಸಂದರ್ಭ ಮಾತನಾಡಿ, ಎಸ್‌ವಿಪಿ ಕೊಡುಗೆಯನ್ನು ದಾಖಲಿಸಲು 'ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ' ಎಂದು ಹೆಸರಿಸಲು ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.  ಅವಲೋಕನ ಉದ್ಘಾಟಿಸಿದ ವಿಮರ್ಶಕ, ವಿಶ್ರಾಂತ ಕುಲಪತಿ ಬಿ.ಎ. ವಿವೇಕ್ ರೈ ಮಾತನಾಡಿದರು.

ಭಿನ್ನ ಕೋಮುಗಳ ವಿದ್ಯಾರ್ಥಿಗಳ ನಡುವೆ ಹೈಕೈ
ಪುತ್ತೂರು:
ಹಿಂದೂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿಯೊಬ್ಬಳನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಗದರಿಸಿದರೆಂಬ ಕಾರಣಕ್ಕಾಗಿ ಕಾಲೇಜಿನೊಳಗೆ ಪರಸ್ಪರ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದು ಹಲ್ಲೆ ನಡೆಸುವ ಹಂತಕ್ಕೆ ತಲುಪಿದ ಘಟನೆ ಮಂಗಳವಾರ ಸಂಜೆ ಪುತ್ತೂರಿನ ಬೊಳುವಾರಿನಲ್ಲಿ ನಡೆದಿದೆ. ಬೊಳುವಾರಿನ ಖಾಸಗಿ ಕಾಲೇಜೊಂದರಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಕಾಲೇಜು ವಠಾರದಲ್ಲಿ ಬಜರಂಗದಳ ಹಾಗೂ ಕೆಎಫ್‌ಡಿ ಕಾರ್ಯಕರ್ತರು ಜಮಾಯಿಸಿ ತುಸು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಎರಡು ದಿನಗಳ ಹಿಂದೆ ಕೆಲವು ವಿದ್ಯಾರ್ಥಿಗಳು ತರಗತಿಯೊಳಗೆ ಪಟಾಕಿ ಸಿಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜಿನ ಶಿಕ್ಷಕಿ ಪಟಾಕಿ ಸಿಡಿಸಿದವರ್ಯಾರು ಎನ್ನುವ ಮಾಹಿತಿ ನೀಡದೆ ಪಾಠ ಮಾಡುವುದಿಲ್ಲ ಎಂದು ಗದರಿಸಿದ್ದರು. ಆದರೆ ಮಂಗಳವಾರ ಸಂಜೆ ಒಂದು ಸಮುದಾಯದ ವಿದ್ಯಾರ್ಥಿನಿಯೊಬ್ಬಳು, ಪಟಾಕಿ ಸಿಡಿಸಿದವರ ಮಾಹಿತಿ ನೀಡಲು ಮುಂದಾಗಿದ್ದಳು. ಆಗ ಮತ್ತೊಂದು ಕೋಮಿನ ಕೆಲವು ವಿದ್ಯಾರ್ಥಿಗಳು ಬಂದು ಆಕೆಯನ್ನು ಗದರಿಸಿದ್ದು ಈ ವಿವಾದಕ್ಕೆ ಕಾರಣ ಎನ್ನಲಾಗಿದೆ.

ಕಲುಷಿತ ನೀರು ಸೇವನೆ: ಬಾಲಕಿ ಸಾವು
ಹಾವೇರಿ
: ಕಲುಷಿತ ನೀರು ಸೇವನೆಯಿಂದ ಅಸ್ಪಸ್ಥಗೊಂಡ ತಾಲೂಕಿನ 50ಕ್ಕೂ ಹೆಚ್ಚು ಜನ ವಾಂತಿ-ಭೇದಿಯಿಂದ ಬಳಲಿದರೆ 6 ವರ್ಷದ ಬಾಲಕಿಯೊಬ್ಬಳು ವಾಂತಿ-ಭೇದಿಗೆ ಬಲಿಯಾದ ಘಟನೆ ಹಾವೇರಿ ತಾಲೂಕಿನ ಬೆಳವಿಗಿ ಗ್ರಾಮದಲ್ಲಿ ಮಂಗಳವಾರ ಜರುಗಿದೆ.

ಐವರಿಗೆ ವಿಎಸ್‌ಕೆ ವಿವಿ ಗೌರವ ಡಾಕ್ಟರೇಟ್
ಬಳ್ಳಾರಿ: 
ಸಂಗೀತದಲ್ಲಿ ಸಾಧನೆಗೈದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಇತಿಹಾಸ ಸಂಶೋಧಕ ಕೆಳದಿ ಗುಂಡಾ ಜೋಯಿಸ್ ಸೇರಿ ಐವರಿಗೆ ಮಾ.20ರಂದು ನಡೆಯುವ ವಿವಿಯ ಮೊದಲನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೆಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (ವಿಎಸ್‌ಕೆ) ಕುಲಪತಿ ಪ್ರೊ. ಮಂಜಪ್ಪ ಹೊಸಮನೆ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಣು ಭೌತಶಾಸ್ತ್ರಜ್ಞ ಡಾ. ಇಬ್ರಾಹಿಂ ಬಿಜಲಿ ಸೈಯದ್, ರಂಗಭೂಮಿ ಕಲಾವಿದೆ ಮರಿಯಮ್ಮನಹಳ್ಳಿಯ ಕೆ. ನಾಗರತ್ನಮ್ಮ, ಭೂಗರ್ಭ ಶಾಸ್ತ್ರಜ್ಞ ಪ್ರೊ. ಸಿ. ನಾಗಣ್ಣ ಅವರೂ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ ಎಂದರು. ವಿವಿ ಮೊದಲ ಘಟಿಕೋತ್ಸವದಲ್ಲಿ  ಕನ್ನಡ, ಇಂಗ್ಲಿಷ್ ರಾಜ್ಯಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಎಂಇಡಿ, ಬಿಇಡಿ ಪೂರ್ಣಗೊಳಿಸಿದ ವಿವಿಧ ವಿಭಾಗಗಳ 2,628 ವಿದ್ಯಾರ್ಥಿಗಳಿಗೆ ಪದವಿ, 16 ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಗುತ್ತದೆ. ರಾಸಾಯನಿಕ ಶಾಸ್ತ್ರದಲ್ಲಿ ಪ್ರೌಢ ಪ್ರಬಂಧ ಮಂಡಿಸಿದ ಇಬ್ಬರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement