ನ್ಯಾಯದ ಮಾತು ಹೇಳಿದ್ದಕ್ಕೆ ತಲೆ ದಂಡ!
ಮಂಗಳೂರು: ನ್ಯಾಯದ ಮಾತುಗಳನ್ನಾಡಿದರೆ ತಲೆ ಒಡೆವ ಶಿಕ್ಷೆ!
ಬಂಟ್ವಾಳ ತಾಲೂಕು ಮುಡಿಪು ಮಿತ್ತಕೋಡಿಯಲ್ಲಿ ಮಣ್ಣು ಸಾಗಿಸುವ ಟಿಪ್ಪರ್ನಿಂದ ದ್ವಿಚಕ್ರವಾಹನದವರಿಗೆ ಕಣ್ಣಿಗೆ ಮಣ್ಣು ಬಿದ್ದು ಸಮಸ್ಯೆ ಆಗುತ್ತಿದೆ, ಟರ್ಪಾಲು ಹಾಕಿ ಸ್ವಾಮಿ ಎಂದು ನ್ಯಾಯಯುತ ಮಾತು ಹೇಳಿದವರ ಮತ್ತು ಇದಕ್ಕೆ ಸಂಬಂಧ ಪಡದೇ ಇದ್ದವನ ತಲೆ ಒಡೆಯಲಾಗಿದೆ!
ಮುಡಿಪು ಮಿತ್ತಕೋಡಿ ಎಂಬಲ್ಲಿ ಇನ್ಫೋಸಿಸ್ ಕಾಮಗಾರಿಗೆ ಮೊಹಮ್ಮದ್ ಆನಿಸ್ ಇರಾ ಎಂಬವರಿಗೆ ಸೇರಿದ ಟಿಪ್ಪರ್ನಲ್ಲಿ ಶನಿವಾರ ಮಣ್ಣು ಸಾಗಾಟ ಮಾಡಲಾಗುತ್ತಿತ್ತು.
ಮಣ್ಣು ಸಾಗಾಟ ಮಾಡುವಾಗ ಲೋಡ್ಗೆ ಟರ್ಪಾಲ್ ಹಾಕದ ಕಾರಣ ಹಿಂಬದಿ ಬರುತ್ತಿದ್ದ ಬೈಕ್ ಸವಾರರಿಗೆ ಸಮಸ್ಯೆ ಆಗುತ್ತಿತ್ತು. ಈ ಬಗ್ಗೆ ಮುಡಿಪು ಹೂ ಮಾರಾಟ ಮಾಡುವ ಮೋಹನ್ ಎಂಬವರು ಟಿಪ್ಪರ್ ಚಾಲಕನ ಬಳಿ ಪ್ರಶ್ನಿಸಿ ಟರ್ಪಾಲು ಹೊದಿಸಿ ಹೋಗುವಂತೆ ಸೂಚಿಸಿದ್ದರು. ಚಾಲಕ ಇದಕ್ಕೆ ಒಪ್ಪದೆ ಗಲಾಟೆಯಾಗಿತ್ತು. ಘಟನೆ ನಡೆದ ಬಳಿಕ ಸಂಜೆ ಮೋಹನ್ ತನ್ನ ಅಂಗಡಿಯಲ್ಲಿ ಜಗದೀಶ್ ಎಂಬವರ ಜತೆ ಇದ್ದ ವೇಳೆ ಟಿಪ್ಪರ್ ಮಾಲೀಕ ಅನಿಸ್ ತನ್ನ ಬೆಂಬಲಿಗರ ಜತೆ ಬಂದು ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧ ಪಡದ ಜಗದೀಶ್ನ ತಲೆಗೂ ಸೊಂಟೆಯಿಂದ ಹೊಡೆದಿದ್ದು ಇಬ್ಬರೂ ಗಂಭೀರ ಗಾಯಗೊಂಡಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಗಡಿಗೆ ನುಗ್ಗಿ ಥಳಿಸುತ್ತಿರುವುದನ್ನು ನೋಡಿದ ಸ್ಥಳೀಯರು ಒಟ್ಟುಗೂಡಿ ಹಲ್ಲೆಕೋರರನ್ನು ಬೆನ್ನಟ್ಟಿಕೊಂಡು ಹೊಡೆದಿದ್ದಾರೆ. ಆದರೆ ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.