ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕದ್ರಿ ದೇವಸ್ಥಾನದಲ್ಲಿ ಬುಲೆಟ್ ಪತ್ತೆ!

ಕದ್ರಿ ದೇವಸ್ಥಾನದ ಒಳಗೆ ಭಾನುವಾರ ಪಿಸ್ತೂಲ್‌ನ ಪಾಯಿಂಟ್ 22 ಬುಲೆಟ್ ಉದ್ಯಮಿಯೊಬ್ಬರಿಗೆ ಸಿಕ್ಕಿರುವುದು 'ಅಂಡರ್‌ವರ್ಲ್ಡ್ ಶೂಟೌಟ್‌' ವದಂತಿಗೆ ಕಾರಣವಾಗಿದೆ.

Srinivasa Murthy VN
Updated On : 1 Apr 2013, 12:22 pm

ಕ.ಪ್ರ. ವಾರ್ತೆ ಮಂಗಳೂರು ಮಾ. 31-
ಕದ್ರಿ ದೇವಸ್ಥಾನದ ಒಳಗೆ ಭಾನುವಾರ ಪಿಸ್ತೂಲ್‌ನ ಪಾಯಿಂಟ್ 22 ಬುಲೆಟ್ ಉದ್ಯಮಿಯೊಬ್ಬರಿಗೆ  ಸಿಕ್ಕಿರುವುದು 'ಅಂಡರ್‌ವರ್ಲ್ಡ್ ಶೂಟೌಟ್‌' ವದಂತಿಗೆ ಕಾರಣವಾಗಿದೆ.
ಶನಿವಾರ ಬೆಳಗ್ಗೆ 11.30ರ ವೇಳೆಗೆ ಕುಲಶೇಖರ ಅವಿನಾಶ್ ಮೊಸಾಯಿಕ್ ಸಂಸ್ಥೆ ಮಾಲೀಕ ಪ್ರಕಾಶ್ ಸೇರಿಗಾರ್ ತಮ್ಮ ಮಗಳ ಮದುವೆ ಆಹ್ವಾನ ಪತ್ರಿಕೆಯನ್ನು ಕದ್ರಿ ದೇವರ ಮುಂದಿಡಲು ಆಗಮಿಸಿದ್ದರು.
ದೇಗುಲ ಆವರಣದೊಳಗಿನ ದುರ್ಗಾಪರಮೇಶ್ವರಿ ಗುಡಿಗೆ ತೆರಳುತ್ತಿದ್ದ ವೇಳೆ ಬುಲೆಟ್ ಸಿಕ್ಕಿದೆ. ಇದೇ ವೇಳೆಗೆ ಪಟಾಕಿ ಸದ್ದು ಕೇಳಿಸಿದೆ ಎಂದು ಪ್ರಕಾಶ್ ಹೇಳುತ್ತಾರೆ. ಬುಲೆಟ್ ಮುಟ್ಟಿದಾಗ ಬಿಸಿಯಾಗಿತ್ತು ಎನ್ನುವುದು ಅವರ ಹೇಳಿಕೆ.
ಬೇಸಿಗೆಯ ಬಿರು ಬಿಸಿಲಿಗೆ ಬಿಸಿಯಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಸುತ್ತಮುತ್ತಲೂ ಕಟ್ಟಡಗಳಿವೆ. ಹೀಗಾಗಿ ಗುಂಡು ಗಾಳಿಯಲ್ಲಿ ಹಾರಿ ಬಂದು ಬೀಳುವ ಸಾಧ್ಯತೆ ಇಲ್ಲ. ಗೋಡೆಗೋ ಮಹಡಿಗೋ ತಗುಲಿ ಸಿಡಿಯಬೇಕು. ಅಲ್ಲಿ ಗುಂಡು ಸಿಡಿದ ಯಾವುದೇ ಗುರುತು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ವಿಧಿ ವಿಜ್ಞಾನ ವಿಭಾಗ ತಜ್ಞರೂ ಆಗಿರುವ ಪೊಲೀಸ್ ಅಧಿಕಾರಿಗಳು ಬುಲೆಟ್ ಪರಿಶೀಲನೆ ನಡೆಸಿದ್ದಾರೆ. ಇದು ಪಾಯಿಂಟ್ 22 ಪಿಸ್ತೂಲ್ ಬುಲೆಟ್, ಬುಲೆಟ್‌ನಲ್ಲಿ ಗನ್‌ಪೌಡರ್ ಸ್ವಲ್ಪ ಮೆತ್ತಿಕೊಂಡಿತ್ತು. ಒಂದು ವೇಳೆ ಗುಂಡು ಸಿಡಿಸಿದ್ದರೆ ಅದರಲ್ಲಿ ಗನ್ ಪೌಡರ್ ಉಳಿಯುವ ಸಾಧ್ಯತೆ ಇಲ್ಲ. ಬುಲೆಟ್ ಮುಂಭಾಗದ ಸೀಸ ತೆಗೆದಂತಿದೆ. ಸೀಸಕ್ಕೆ ಗೋಲ್ಡ್ ಬಣ್ಣವಿದ್ದು ಇದು ಅಸಲಿಯೇ ಎಂಬ ಬಗ್ಗೆ ಸಂಶಯ ಮೂಡಿದೆ ಎನ್ನುತ್ತಾರೆ.
ಸ್ಥಳಕ್ಕೆ ಭೇಟಿ ನೀಡಿದ ಗುಪ್ತಚರ ವಿಭಾಗ ಮತ್ತು ಅಪರಾಧ ಗುಪ್ತವಾರ್ತೆ ದಳ ಪೊಲೀಸರಿಗೂ ಶೂಟ್‌ಔಟ್ ಆಗಿದೆ ಎಂಬುದಕ್ಕೆ ಸಾಂದರ್ಭಿಕ ಅಥವಾ ಖಚಿತ ಸಾಕ್ಷ್ಯ ಸಿಕ್ಕಿಲ್ಲ. ಕೇವಲ ಬುಲೆಟ್ ಸಿಕ್ಕಿರುವುದು ಮತ್ತು ಸದ್ದು ಕೇಳಿದ ಹಿನ್ನೆಲೆಯಲ್ಲಿ ಸುದ್ದಿಗೆ ರೆಕ್ಕೆಪುಕ್ಕ ಬಂದಿದೆ.

ತಾಯಿ ಅಂತಿಮ ದರ್ಶನಕ್ಕೆ ಮಗನಿಗೆ ತಡೆ: ದೂರು
ಕನ್ನಡಪ್ರಭ ವಾರ್ತೆ, ಮಂಗಳೂರು, ಮಾ.31
-
ಆಸ್ಪತ್ರೆಯಲ್ಲಿ ತಾಯಿ ಸಾವು-ಬದುಕಿನ ನಡುವೆ ಒದ್ದಾಡುತ್ತಿರುವಾಗ ಅವರ ಮುಖ ನೋಡಲು ಸಹೋದರಿಯರು ಬಿಟ್ಟಿಲ್ಲ ಎಂದು ಪದವಿನಂಗಡಿ ನಿಜಿಗುರಿ ನಿವಾಸಿ ಸತೀಶ್ ಪೂಜಾರಿ ಗ್ರಾಮಾಂತರ ಪೊಲೀಸರಲ್ಲಿ ದೂರು ನೀಡಿದ್ದಾರೆ.
ಮಾ.30ರಂದು ಸತೀಶ್ ಪೂಜಾರಿ ತಾಯಿ ರಾಜೀವಿ ಪೂಜಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿರುವಾಗ ಮತ್ತು ಮೃತಪಟ್ಟ ಮೇಲೆ ತಾಯಿ ಅಂತಿಮ ದರ್ಶನಕ್ಕೆ ಮೂವರು ಸಹೋದರಿಯರು ಅವಕಾಶ ನೀಡಿರಲಿಲ್ಲ. ಭಾನುವಾರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹೋದ ಸತೀಶ್‌ಗೆ ಮೂವರು ಸಹೋದರಿಯರು ಪ್ರವೇಶಕ್ಕೆ ನಿರಾಕರಿಸಿ, ಹಲ್ಲೆಗೆ ಮುಂದಾದರು. ಪೊಲೀಸರು ಮಧ್ಯಪ್ರವೇಶಿಸಿದ ಬಳಿಕ ತಾಯಿ ಅಂತಿಮ ದರ್ಶನಕ್ಕೆ ಅವಕಾಶ ನೀಡಿದರು.
ಗೋಪಾಲ ಮತ್ತು ರಾಜೀವಿ ಪೂಜಾರಿಗೆ 4 ಮಕ್ಕಳು. ಸತೀಶ, ಕುಸುಮ, ಮಾಲತಿ ಸುಜಾತ. ಮೂವರು ಸಹೋದರಿಯರು ತಾಯಿಯನ್ನು ನೋಡಿಕೊಳ್ಳುತ್ತಿದ್ದರು.
ತಾಯಿಯ 2.8 ಎಕರೆ ಜಾಗವನ್ನು ಮೂವರು ಸಹೋದರಿಯರು ಅಕ್ರಮವಾಗಿ ತಮ್ಮ ವಶ ಮಾಡಿಕೊಂಡು ದಾಖಲೆ ಪೋರ್ಜರಿ ಮಾಡಿ ಮಾರಾಟ ಮಾಡಿದ್ದಾರೆ ಎಂದು ಸತೀಶ್ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement