ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತಾರತಮ್ಯ ನೀತಿ ಆರೋಪ: ಚುನಾವಣಾ ಆಯೋಗಕ್ಕೇ ಪಕ್ಷೇತರ ಅಭ್ಯರ್ಥಿ ನೋಟಿಸ್

Srinivasa Murthy VN
Updated On : 3 May 2013, 1:20 am

ಉಡುಪಿ: ಬಡ ಸಾಮಾನ್ಯ ಪಕ್ಷೇತರ ಅಭ್ಯರ್ಥಿಗಳು ಮತ್ತು ನೋಂದಾಯಿತ ಪಕ್ಷಗಳ ಕೋಟ್ಯಾಂತರ ರು. ವ್ಯಯಿಸುವ ಅಭ್ಯರ್ಥಿಗಳ ನಡುವೆ ಚುನಾವಣಾ ಆಯೋಗ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿರುವ ಕಾಪು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿಜಯಕುಮಾರ್ ಹೆಗ್ಡೆ, ಈ ಬಗ್ಗೆ ತಮ್ಮ ವಕೀಲರ ಮೂಲಕ ಚುನಾವಣಾ ಆಯೋಗಕ್ಕೆ ನೋಟಿಸ್ ಕಳುಹಿಸಿದ್ದಾರೆ.
 ಈ ತಾರತಮ್ಯ ಮತ್ತು ಇತರ ಅವ್ಯವಸ್ಥೆಗಳು ಸರಿಯಾಗುವ ವರೆಗೆ ಕಾಪು ಕ್ಷೇತ್ರದ ಚುನಾವಣೆ ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ.
ಹೆಗ್ಡೆ ಆರೋಪವೇನು?: ಪಕ್ಷೇತರ ಅಭ್ಯರ್ಥಿಗಳಿಗೆ ಮತ್ತು ನೋಂದಣಿ ಆಗಿರದ ಪಕ್ಷಗಳ ಅಭ್ಯರ್ಥಿಗಳಿಗೆ ಮತದಾರರ ಪಟ್ಟಿ ಉಚಿತವಾಗಿ ನೀಡಲಾಗುವುದಿಲ್ಲ, ನೋಂದಾಯಿತ ಪಕ್ಷದ ಅಭ್ಯರ್ಥಿಗಳಿಗೆ ಮಾತ್ರ ಉಚಿತವಾಗಿ ನೀಡಲಾಗುತ್ತದೆ ಎಂದು ಚುನಾವಣಾ ಆಯೋಗದ ನಿಯಮದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ ಹೆಗ್ಡೆ, ತಾನು ಕಾಪು ಕ್ಷೇತ್ರದ ಮತದಾರರ ಪಟ್ಟಿಯನ್ನು ಹಣ ಕೊಟ್ಟು ಅದೂ ಅರ್ಜಿ ಸಲ್ಲಿಸಿದ 2 ದಿನಗಳ ನಂತರ ಪಡೆಯಬೇಕಾಯಿತು.
  ತಾನು ಕೂಡ ನೋಂದಾಯಿತ ಪಕ್ಷಗಳ ಅಭ್ಯರ್ಥಿಗಳಂತೆ ರು. 10 ಸಾವಿರ ಠೇವಣಿ ಇಟ್ಟು ಸ್ಪರ್ಧಿಸಿದ್ದೇನೆ, ಬಿಟ್ಟಿ ಸ್ಪರ್ಧಿಸುತ್ತಿಲ್ಲ. ಆದರೂ ಚುನಾವಣಾ ಆಯೋಗ ಈ ರೀತಿ ತಾರತಮ್ಯ ಮಾಡುತ್ತಿದೆ ಎಂದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ಬಡ ಮತ್ತು ಜನಸಾಮಾನ್ಯರಾಗಿರುವ ತನ್ನಂತಹ ಪಕ್ಷೇತರ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸದಂತೆ, ಚುನಾವಣಾ ಪ್ರಚಾರ ನಡೆಸದಂತೆ, ನೋಂದಾಯಿತ ಪಕ್ಷಗಳ ಪರ ನಡೆಸುತ್ತಿರುವ ಷಡ್ಯಂತ್ರ ಇದು ಎಂದು ಆರೋಪಿಸಿದರು.
ಸತಾಯಿಸುತ್ತಾರೆ: ಚುನಾವಣಾ ಪ್ರಚಾರಕ್ಕೆ ಅಗತ್ಯವಿರುವ ಪರವಾನಗಿಗೆಗಳನ್ನು ಪಡೆಯಲು ತನ್ನಂತಹ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಸಾಕಷ್ಟು ಸತಾಯಿಸುತ್ತಿದೆ. ದ್ವನಿವರ್ಧಕ, ಬ್ಯಾನರ್, ವಾಹನಗಳ ಬಳಕೆಗೆ ಪರವಾನಗಿ, ಲೆಕ್ಕಪತ್ರ ಇತ್ಯಾದಿಗಳಿಗೆ ಏಕಗವಾಕ್ಷಿ ವ್ಯವಸ್ಥೆ ಮಾಡದೆ ಹತ್ತಾರು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೂ ಸಾಕಷ್ಟು ಹೊತ್ತು ಸತಾಯಿಸಿ ತಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡಲಾಗುತ್ತಿದೆ. ವಾಹನ, ಧ್ವನಿವರ್ಧಕಗಳ ಬಳಕೆಗೆ ಚುನಾವಣಾಧಿಕಾರಿ, ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ, ವೃತ್ತ ನಿರೀಕ್ಷಕರು, ಸ್ಥಳೀಯ ಪೊಲೀಸ್ ಠಾಣೆ... ಹೀಗೆ ನಾಲ್ಕೈದು ಕಡೆಗಳಲ್ಲಿ ಪರವಾನಗಿ ಮಾಡಿಸಿಕೊಳ್ಳಬೇಕು. ಇದನ್ನೆಲ್ಲಾ ಮಾಡಿಕೊಳ್ಳಲು ನೋಂದಾಯಿತ ಪಕ್ಷಗಳ ಅಭ್ಯರ್ಥಿಗಳ ಬಳಿ ಬಾಡಿಗೆಗೆ ಕೆಲಸಗಾರರಿದ್ದಾರೆ. ಆದರೆ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಇಂತಹ ಅವ್ಯವಸ್ಥೆಗಳ ಮೂಲಕ ಅನಗತ್ಯವಾಗಿ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದರು.
 ರೈತ ಸಂಘದ ನಾಯಕ ಪ್ರಶಾಂತ, ಬೆಂಬಲಿಗ ಅಲ್ಬರ್ಟ್ ವಿಲಿಯಂ ಸೋನ್ಸ್ ಮತ್ತು ಯುಪಿಸಿಎಲ್ ಸಂತ್ರಸ್ತ ಓಡಿ ಮೊಗೇರ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement