ಭಾವನಾ ರೋಡ್ ಶೋ
ಸುಳ್ಯ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಶೀರ್ವದಿಸಿ ಗೆಲ್ಲಿಸಿಕೊಡಬೇಕು ಎಂದು ಚಿತ್ರನಟಿ, ಕಾಂಗ್ರೆಸ್ನ ತಾರಾ ಪ್ರಚಾರಕಿ ಭಾವನಾ ಮನವಿ ಮಾಡಿದರು.
ಸುಳ್ಯದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮೆಲ್ಲರ ನಿರೀಕ್ಷೆಗಳನ್ನು ಹಿಂದಿನ ಸರ್ಕಾರ ಸುಳ್ಳು ಮಾಡಿದೆ. ಜಿಲ್ಲೆಯ ಸಂಸ್ಕೃತಿಯನ್ನು ಹಾಳು ಮಾಡಿದೆ. ಹಾಗಾಗಿ ಸರಿಯಾಗಿ ಯೋಚಿಸಿ ಮತ ಹಾಕಿ. ತಪ್ಪು ಮಾಡುವ ನಾಯಕರನ್ನು ಆರಿಸಬೇಡಿ ಎಂದರು.
ರೋಡ್ ಶೋ...: ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ರಘು ಅವರ ಪರವಾಗಿ ಭಾವನಾ ಗುರುವಾರ ಸುಳ್ಯದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು. ಸುಳ್ಯದ ಜ್ಯೋತಿ ಸರ್ಕಲ್ನಿಂದ ತೆರೆದ ವಾಹನದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದ ಅವರು ಜನರತ್ತ ಕೈಬೀಸಿ ಕಾಂಗ್ರೆಸ್ಗೆ ಮತ ನೀಡುವಂತೆ ವಿನಂತಿಸಿದರು.
ಬಿ.ಸಿ. ರೋಡಿನಲ್ಲಿ ಪ್ರಚಾರ
ಬಂಟ್ವಾಳ: ರಮಾನಾಥ ರೈ ಅನುಭವಿ ರಾಜಕಾರಣಿ. ಅವರಲ್ಲಿನ ಕ್ರಿಯಾಶೀಲತೆ, ಪ್ರಬುದ್ಧತೆಯಿಂದ ಜನನಾಯಕರಾಗಿ 5 ಬಾರಿ ಗೆದ್ದಿದ್ದಾರೆ, ಈ ಬಾರಿಯ ಚುನಾವಣೆಯಲ್ಲಿಯೂ ಗೆದ್ದೇ ಗೆಲ್ಲುತ್ತಾರೆ ಎಂದು ಚಿತ್ರನಟಿ ಭಾವನಾ ಅಭಿಪ್ರಾಯಪಟ್ಟರು. ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಪರ ಪ್ರಚಾರಕ್ಕೆಂದು ಗುರುವಾರ ಬಂಟ್ವಾಳಕ್ಕೆ ಆಗಮಿಸಿದ್ದ ಅವರು ಬಿ.ಸಿ. ರೋಡಿನ ಚುನಾವಣಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಗಮನ ಸೆಳೆದ ಪ್ರಚಾರ..: ಚಿತ್ರನಟಿ ಭಾವನಾ ಗುರುವಾರ ಬಿ.ಸಿ. ರೋಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಪರ ರೋಡ್ ಶೋ ನಡೆಸುವ ಮೂಲಕ ಪ್ರಚಾರ ನಡೆಸಿ ಗಮನಸೆಳೆದರು. ಬಿ.ಸಿ. ರೋಡಿನ ಕಾಂಗ್ರೆಸ್ ಚುನಾವಣಾ ಕಚೇರಿಯಿಂದ ಹೊರಟು ಕೈಕಂಬ- ಬಿಸಿ. ರೋಡು ಬಸ್ ನಿಲ್ದಾಣದವರೆಗೆ ತೆರೆದ ಜೀಪಿನಲ್ಲಿ ಸಾಗಿ ಮತದಾರರತ್ತ ಕೈ ಬೀಸಿ ಮತಯಾಚಿಸಿದರು. ಬಿ.ಸಿ. ರೋಡು ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರಲ್ಲೂ ಭಾವನಾ ಮತಯಾಚಿಸಿದರು. ವಕೀಲೆ ಶೈಲಜಾ, ರಮಾನಾಥ ರೈ ಪುತ್ರಿ ಚರಿಷ್ಮಾ ರೈ ಭಾವನಾಗೆ ಸಾಥ್ ನೀಡಿದರು. ಕಾಂಗ್ರೆಸ್ ಮುಖಂಡರ ಸಹಿತ ನೂರಕ್ಕೂ ಅಧಿಕ ಕಾರ್ಯಕರ್ತರು ರೋಡ್ ಶೋನಲ್ಲಿ ಪಾಲ್ಗೊಂಡರು.