ವೈಚಾರಿಕ ದಾರಿದ್ರ್ಯದ ಕೇಂದ್ರ ಸರ್ಕಾರ
ಮಂಗಳೂರು: ಕೇಂದ್ರದಲ್ಲಿ ವೈಚಾರಿಕ ದಾರಿದ್ರ್ಯದ ದುರ್ಬಲ ಸರ್ಕಾರವಿದೆ. ಪಾಕಿಸ್ತಾನದಲ್ಲಿ ಸರಬ್ಜಿತ್ ಸಿಂಗ್ನನ್ನು ಕೊಲೆ ಮಾಡಲಾಗಿದೆ. ಇದು ಎಕ್ಸ್ಟ್ರಾ ಜುಡೀಶಿಯಲ್ ಕಿಲ್ಲಿಂಗ್ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಮಂಗಳೂರು ನೆಹರು ಮೈದಾನದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಪ್ರತಿ ದೇಶಗಳಲ್ಲಿಯೂ ಕೈದಿಗಳ ಗಲಭೆ ಆಗುತ್ತದೆ. ಆದರೆ ಎಂದಾದರೂ ಗಲ್ಲು ಶಿಕ್ಷೆ ಆಗಿರುವ ಕೈದಿಯ ಕೋಣೆಯಲ್ಲಿ ದಂಗೆ ಆಗಲು ಸಾಧ್ಯವೇ? ಕೋಣೆಯಲ್ಲಿಯೇ ಸರಬ್ಜಿತ್ನನ್ನು ಕೊಲೆ ಮಾಡಲಾಯಿತು.
ಗಲ್ಲು ಶಿಕ್ಷೆ ವಿಧಿಸಿದ ಬಳಿಕ ಭಾರತ ಸರ್ಕಾರಕ್ಕೆ ಸರಬ್ಜಿತ್ನನ್ನು ಉಳಿಸಲು ವಿಫುಲ ಅವಕಾಶ ಇತ್ತು. ರಾಯಭಾರಿ ವ್ಯವಸ್ಥೆಯನ್ನು ಕ್ರಿಯಾತ್ಮಕಗೊಳಿಸಿ ವಿಶ್ವದಲ್ಲಿ ಜನಾಭಿಪ್ರಾಯ ರೂಪಿಸಬಹುದಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ಪ್ರಕರಣವನ್ನು ಸರಬ್ಜಿತ್ ಕುಟುಂಬಕ್ಕೆ ಸೀಮಿತಗೊಳಿಸಿತು. ಸಹೋದರಿ ತನ್ನ ಅಣ್ಣನ ಪ್ರಾಣ ಭಿಕ್ಷೆಗಾಗಿ ಗೋಗರೆಯುತ್ತಿದ್ದರೆ ದಿಲ್ಲಿ ಸರ್ಕಾರದ ಮನಕರಗಲಿಲ್ಲ. ದಿಲ್ಲಿಯಲ್ಲಿರುವುದು ದುರ್ಬಲ ಸರ್ಕಾರ. ಚೀನಾ ಗಡಿ ದಾಟಿ ಮುಂದೊತ್ತಿ ಬರುತ್ತಿದ್ದರೂ ಭಾರತ ಸುಮ್ಮನಿದೆ. ನಮ್ಮ ಮೀನುಗಾರರನ್ನು ಕೊಂದ ಇಟಲಿ ನಾವಿಕರು ವಾಪಸ್ ಭಾರತಕ್ಕೆ ಬರಲು ಒಪ್ಪಲಿಲ್ಲ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಯಿತು. ನಾವು ಇಂಥ ದರ್ಬಲ ಸರ್ಕಾರದ ಮೇಲೆ ಭರವಸೆ ಇಡಬಹುದೇ? ಎಂದು ಪ್ರಶ್ನಿಸಿದರು. 'ನೀವು, ನಿಮ್ಮ ಹೆತ್ತವರು 50 ವರ್ಷದಿಂದ ಕಾಂಗ್ರೆಸ್ ಸರ್ಕಾರದ ಕಷ್ಟ ಸಹಿಸಿಕೊಂಡು ಬಂದಿರಿ ಇಂಥ ಸಂಕಟದಿಂದ ಹೊರಬರಲು, ಒಳ್ಳೆ ಬದುಕು ಬಯಸುವುದಿಲ್ಲವೇ? ಇದಕ್ಕಾಗಿ ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಿ' ಎಂದರು.
ಗೋಲ್ಡನ್ ಸ್ಪೂನ್
ಗೋಲ್ಡನ್ ಸ್ಪೂನ್ ಎಂದು ರಾಹುಲ್ ಗಾಂಧಿಯನ್ನು ಮೋದಿ, ಹಲವು ಬಾರಿ ಸಂಬೋಧಿಸಿ ಹೆಸರೆತ್ತದೆ ಮಾತನಾಡಿದರು. ಗಾಂಧೀಜಿ ನನ್ನ ಆದರ್ಶ ಎಂದು ಗೋಲ್ಡನ್ ಸ್ಪೂನ್ ಹೇಳುತ್ತಾರೆ. ಕಾಂಗ್ರೆಸ್ ಪಕ್ಷ ವಿಸರ್ಜನೆ ಮಾಡಬೇಕು ಎನ್ನುವ ಗಾಂಧೀಜಿಯ ಕೊನೆ ಆಸೆಯನ್ನು ಯಾವಾಗ ತೀರಿಸುತ್ತೀರಿ ಎಂದು ರಾಹುಲ್ಗೆ ಕುಟುಕಿದರು. ಬಿಜೆಪಿಗೆ ವಿಕಾಸವೇ ಅಜೆಂಡಾ, ವಿಕಾಸವೇ ಮಂತ್ರ, ವಿಕಾಸವೇ ಕನಸು. ಗುಜರಾತ್ನಲ್ಲಿ ಸರ್ಕಾರದ ತಿಜೋರಿ ಭದ್ರವಾಗಿದೆ. ಅದು ಜನರ ಹಣ, ಯಾರ ಕೈಗೂ ಸಿಗದಂತೆ ನೋಡಿಕೊಂಡಿದ್ದೇನೆ. ಕರ್ನಾಕಟದಲ್ಲಿಯೂ ತಿಜೋರಿ ಭದ್ರವಾಗಿರಬೇಕಾದರೆ ಬಿಜೆಪಿಗೆ ಮತ ನೀಡಿ ಎಂದರು.
ಕಾಂಗ್ರೆಸಿಗರ ಸುಳ್ಳು ಮಾತು
ಸ್ಥಳೀಯ ಕಾಂಗ್ರೆಸ್ ದೊಡ್ಡ ನಾಯಕ, 'ಮೋದಿ ಮಂಗಳೂರಿಗೆ ಬರುವುದಿಲ್ಲ' ಎಂದು ಸವಾಲು ಹಾಕಿದ್ದರಂತೆ. ಇಲ್ಲಿ ಮೋದಿ ವಿಚಾರ ಅಲ್ಲ ಅವರು ಹೇಳಿದ ಮಾತಿನ ವಿಚಾರ. ಕಾಂಗ್ರೆಸ್ನವರು ನಾನು ಬರುವುದಿಲ್ಲ ಹೇಳಿದರು ನಾನು ಬಂದೆ, ಬಿಜೆಪಿ ಆಡಳಿತ ನಡೆಸುವುದಿಲ್ಲ ಎಂದು ಅವರು ಹೇಳುತ್ತಾರೆ. ಬಿಜೆಪಿ ಆಡಳಿತ ನಡೆಸುತ್ತದೆ ಎಂದರು.
ಸಿದ್ದುಗೆ ಟಾಂಗ್
'ನಾವು ಹಣ ಕೊಡುತ್ತೇವೆ ನೀವು ಮತ ನೀಡಿ' ಎಂದು ಹೇಳಿದಂತೆ ಕಾಂಗ್ರೆಸ್ ಮುಖಂಡರೊಬ್ಬರು, 'ಕಾಂಗ್ರೆಸ್ ಗೆಲ್ಲಿಸಿದರೆ ಗೋಹತ್ಯೆಗೆ ಅವಕಾಶ ನೀಡುತ್ತೇವೆ' ಎಂದು ಹೇಳುತ್ತಾರೆ. ಇದು ಅಪಾಯಕಾರಿ. ಚುನಾವಣೆ ಅಧಿಕಾರಿಗಳು ಇದನ್ನು ಗಮನಿಸಬೇಕು. ಇಂಥವರು ನಮಗೆ ಬೇಕೇ ಎಂದು ಪ್ರಶ್ನಿಸಿದರು.