ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಂಬಿಗೆ ಸಚಿವ ಸ್ಥಾನ ಸಿಕ್ಕರೆ ಚಿತ್ರರಂಗಕ್ಕೆ ಲಾಭ: ಶಿವಣ್ಣ

Srinivasa Murthy VN
Updated On : 14 May 2013, 1:19 am

ಮಂಗಳೂರು/ಉಡುಪಿ: ಹೊಸ ಸರ್ಕಾರದಿಂದ ಚಲನಚಿತ್ರರಂಗ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ, ಮುಖ್ಯವಾಗಿ ಜನಸಾಮಾನ್ಯರಿಗೆ ಕಲ್ಯಾಣ ಕಾರ್ಯಕ್ರಮ ಮತ್ತು ಒಟ್ಟಾರೆ ಸಮಾಜದ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಚಿತ್ರ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಅಂಬರೀಶ್ ಸಿನಿಮಾ ರಂಗದಲ್ಲಿ ಸ್ಟಾರ್ ಆಗಿರುವುದರಿಂದ ಸಚಿವ ಸ್ಥಾನ ಸಿಕ್ಕಿದರೆ ಚಿತ್ರರಂಗಕ್ಕೆ ಲಾಭವಾಗಲಿದೆ ಎಂದು ಶಿವಣ್ಣ ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಮೇರುನಟ ಡಾ.ರಾಜ್ಕುಮಾರ್ ಸಮಾಧಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಉದ್ಘಾಟನೆ ಶೀಘ್ರ ಮಾಡುತ್ತೇವೆ ಎಂದರು. ಪತ್ನಿ ಗೀತಾ, ನಟರಾದ ಗುರುದತ್, ರಾಜಶೇಖರ್ ಇದ್ದರು.
ಉಡುಪಿಗೆ ಶಿವರಾಜ್ಕುಮಾರ್:  ನಟ ಶಿವರಾಜ್ ಕುಮಾರ್ ಸೋಮವಾರ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣನ ದರ್ಶನ ಪಡೆದರು.
ಅವರೊಂದಿಗೆ ಪತ್ನಿ ಗೀತಾ ಶಿವರಾಜ್, ಹಿರಿಯ ನಟ- 'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾ ಖ್ಯಾತಿಯ ಚಂದ್ರಶೇಖರ್, ನಟ- ನಿರ್ದೇಶಕ ಚಿ. ಗುರುದತ್ ಆಗಮಿಸಿದ್ದರು.
ಮೊದಲು ಪೇಜಾವರ ಮಠಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್, ಅಲ್ಲಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿದರು. ಶ್ರೀಗಳು ಅವರಿಗೆ ಶಾಲು ಹೊದೆಸಿ, ಗೌರವಿಸಿ ಫಲಮಂತ್ರಾಕ್ಷತೆಗಳನ್ನಿತ್ತರು. ತಾಯಿ ಪಾರ್ವತಮ್ಮ ಅವರ ಬಗ್ಗೆ ವಿಚಾರಿಸಿದರು.
ಅಲ್ಲಿಂದ ಕೃಷ್ಣ ಮಠಕ್ಕೆ ಆಗಮಿಸಿ ನವಗ್ರಹ ಕಿಂಡಿ ಮೂಲಕ ಸಪತ್ನಿಕರಾಗಿ ಕೃಷ್ಣನ ದರ್ಶನ ಪಡೆದರು. ನಂತರ ಅಂಬಲಪಾಡಿಯ ಮಹಾಕಾಳಿ ಜನಾರ್ದನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಭಾನುವಾರ ಕೊಲ್ಲೂರಿಗೆ ಆಗಮಿಸಿದ ಅವರು, ಮುಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಯೇ ತಂಗಿದ್ದು, ಸೋಮವಾರ ಮುಂಜಾನೆ ಉಡುಪಿಗೆ ಆಗಮಿಸಿದ್ದರು.
ದೇವರಲ್ಲಿ ತನಗೇನೂ ಬೇಡಿಲ್ಲ: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ಭಾನುವಾರ ಅಕ್ಷಯ ತದಿಗೆ ಎನ್ನುವುದು ತನಗೆ ಗೊತ್ತಿರಲಿಲ್ಲ, ಅದೃಷ್ಟವಶಾತ್ ಇದೇ ಪುಣ್ಯ ದಿನದಂದು ದೇವರ ದರ್ಶನಕ್ಕೆ ಬಂದಿದ್ದೇನೆ. ಕರಾವಳಿಯ ದೇವಾಲಯಗಳಿಗೆ ಭೇಟಿ ನೀಡುವ ಆಸೆ ಇತ್ತು, ಬಂದಿದ್ದೇನೆ. ತನಗಾಗಿ ಏನೂ ಕೇಳಿಕೊಂಡಿಲ್ಲ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ಬಿಡುಗಡೆಗೆ ಸಿದ್ಧವಾಗಿರುವ 'ಕಡ್ಡಿಪುಡಿ' ಚಿತ್ರದ ಬಗ್ಗೆ ತಮಗೆ ಭಾರಿ ನಿರೀಕ್ಷೆ ಇದೆ. ಮುಂದಿನ ಚಿತ್ರ 'ಭಜರಂಗಿ' ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಮಳೆ ಅಡ್ಡಿ ಮಾಡಿದೆ. ಈ ಚಿತ್ರಕ್ಕೆ ಹಾಕಿದ್ದ ಸೆಟ್ ಮಳೆಯಿಂದ ಕುಸಿದು ಚಿತ್ರೀಕರಣ ಸ್ಥಗಿತಗೊಂಡಿದೆ ಎಂದರು.

ಅಡಿಗರು ಸಮರ್ಥ ಕಾದಂಬರಿಕಾರ: ಡಾ. ಸರ್ಫ್ರಾಜ್ ಚಂದ್ರಗುತ್ತಿ
ಕಾಂತಾವರ:  ನೀತಿಯ ಕಲ್ಪನೆ ಬಿಟ್ಟು ಯೋಚಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ನೈತಿಕತೆಯನ್ನೇ ಕೇಂದ್ರವಾಗಿಟ್ಟುಕೊಂಡು 1955ರಲ್ಲಿ ಗೋಪಾಲಕೃಷ್ಣ ಅಡಿಗರು ಬರೆದ ಪ್ರಕಟಿಸಿದ 'ಅನಾಥೆ' ಶ್ರೇಷ್ಠ ಕಾದಂಬರಿಗಳ ಸಾಲಿಗೆ ಸೇರಿ ಜನಪ್ರಿಯವಾಗಿದೆ. ಆದುದರಿಂದ, ಅಡಿಗರು ಕವಿಯಷ್ಟೇ ಅಲ್ಲ ಸಮರ್ಥ ಕಾದಂಬರಿಕಾರ ಅನ್ನುವುದನ್ನೂ ನಿರೂಪಿಸಿದ್ದಾರೆ ಎಂದು ಸಾಹಿತಿ, ಉಪನ್ಯಾಸಕ ಡಾ. ಸರ್ಫ್ರಾಜ್ ಚಂದ್ರಗುತ್ತಿ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ, ಕಾಂತಾವರ ಕನ್ನಡ ಸಂಘದ 'ನಮ್ಮ ಕನ್ನಡ ನಮ್ಮದು' ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಅಡಿಗರ 'ಅನಾಥೆ' ಕಾದಂಬರಿ ಕುರಿತು ಮಾತನಾಡಿದರು.
ಸನಾತನವಾದಿಯಲ್ಲ: ಗಾಂಧಿ ಕಾಲದ ಲೇಖಕರಾಗಿ ಅವರು ಚಳುವಳಿಗಳಲ್ಲೂ ಭಾಗವಹಿಸಿದ್ದ ಅಡಿಗರನ್ನು ಪೂರ್ತಿ ಅರ್ಥ ಮಾಡಿಕೊಳ್ಳದವರು ಮಾತ್ರ ಅವರನ್ನು ಸನಾತನವಾದಿಗಳು ಎಂದು ಹೇಳುತ್ತಾರೆ. ಆದರೆ, ಆ ಮಾತು ಸುಳ್ಳು ಅನ್ನುವುದನ್ನು ಈ ಕಾದಂಬರಿಯ ಪಾತ್ರಗಳು ಸಾಬೀತುಪಡಿಸುತ್ತದೆ ಎಂದು ತಿಳಿಸಿದರು.
ಅನಾಥೆ ಕಾದಂಬರಿಯು ಮತಧರ್ಮದ ಪರವಾಗಿರದೆ ಧರ್ಮದ ಪರವಾಗಿದೆ. ಧರ್ಮಕ್ಕೆ ಕಳಂಕ ತರುವ ಮತಧರ್ಮದ ಬೋಳೇತನವನ್ನು ಅವರು ಇಲ್ಲಿ ಗೇಲಿ ಮಾಡುವುದಲ್ಲದೆ ತಮ್ಮ ಕಥೆ, ಕಾದಂಬರಿ, ಕಾವ್ಯಗಳಲ್ಲೂ ಕಂದಾಚಾರವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇನ್ನೊಬ್ಬರ ಕಾಲೆಳೆಯದೆ ಒಬ್ಬರ ಕಷ್ಟಕ್ಕೆ ಇನ್ನೊಬ್ಬರ ಕಾಲೆಳೆಯದೆ ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಕೈ ಹಿಡಿದು ನೆರವಾಗಿ ಅನ್ನುವ ಸಂದೇಶವನ್ನು ನೀಡುವ ಅಡಿಗರು ಎಲ್ಲಿ ಜೀವದಯೆ ಇದೆಯೋ ಅಲ್ಲಿ ದೇವರಿದ್ದಾನೆ ಎಂಬ ವಾದದಲ್ಲಿ ನಂಬಿಕೆಯುಳ್ಳವರಾಗಿದ್ದರು. ಎಲ್ಲ ಕವಿಗಳ ಆಳದಲ್ಲೂ ಮತಧರ್ಮಗಳನ್ನು ಮೀರಿದ ಮನುಷ್ಯ ಧರ್ಮವಿದೆ ಎಂದು ನಂಬಿದ್ದ ಅಡಿಗರ ಅನಾಥೆ ಕಾದಂಬರಿಯ ಎಲ್ಲ ಪಾತ್ರಗಳಲ್ಲೂ ಮನುಷ್ಯತ್ವದ ನದಿ ಹರಿಯುವುದನ್ನು ಕಾಣಬಹುದು ಎಂದರು.
ಸಿ.ಕೆ. ಪಡಿವಾಳ್ ಉಪಸ್ಥಿತಿಯಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು. ಸಾಹಿತಿ ಡಾ.ನಾ. ಮೊಗಸಾಲೆ ಸ್ವಾಗತಿಸಿದರು. ವಿ. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement