ಆರೋಗ್ಯ ಮತ್ತು ಸಮಾಜದಿಂದ ಸಂಶೋಧನೆ ಸಾಧ್ಯ: ಶ್ರೀನಾಥ್ ರೆಡ್ಡಿ
ಮಂಗಳೂರು: ಆರೋಗ್ಯ ಮತ್ತು ಸಮಾಜ ವಿಜ್ಞಾನ ಒಟ್ಟಿಗೆ ಇದ್ದಾಗ ಅದರ ಪರಿಣಾಮದಿಂದ ಆರೋಗ್ಯದ ಕುರಿತ ಸಂಪೂರ್ಣ ಸಂಶೋಧನೆ ನಡೆಸಲು ಸಾಧ್ಯ ಎಂದು ದಿಲ್ಲಿ ಭಾರತೀಯ ಸಾರ್ವಜನಿಕ ಆರೋಗ್ಯ ಫೌಂಡೇಶನ್ನ ಅಧ್ಯಕ್ಷ ಪ್ರೊ.ಕೆ. ಶ್ರೀನಾಥ್ ರೆಡ್ಡಿ ಹೇಳಿದರು. ಶನಿವಾರ ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆದ ಮಣಿಪಾಲ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ಮಾತನಾಡಿದರು. ವಿಶ್ವವಿದ್ಯಾಲಯಗಳು ದಾನಿ ಮತ್ತು ಸಂಶೋಧಕರನ್ನು ಸೃಷ್ಟಿಸಿದರೆ ಸಾಲದು, ಅಭಿವೃದ್ಧಿ ಮತ್ತು ನೈತಿಕತೆ ಮೌಲ್ಯವನ್ನು ಹೆಚ್ಚಿಸಿ ಉತ್ತಮ ನಾಗರಿಕತೆ ನಿರ್ಮಾಣಗೊಳ್ಳಿಸಬೇಕು ಎಂದರು. ಮಣಿಪಾಲದ ಉಪಕುಲಸಚಿವ ಡಾ.ಕೆ. ರಾಮ್ನಾರಾಯಣ್, ಸಹ ಕುಲಪತಿಗಳಾದ ಡಾ.ಎಚ್.ಎಸ್. ಬಲ್ಲಾಲ್, ಕುಲಸಚಿವ ಡಾ. ರಾಮದಾಸ್ ಪೈ ಮತ್ತಿತರರು ಇದ್ದರು.
'ಕಂಪ್ಯೂಟರ್ ಜ್ಞಾನ ವೃದ್ಧಿಗೆ ಸಹಕಾರಿ'
ಮಂಗಳೂರು: ಕಂಪ್ಯೂಟರ್ ತಂತ್ರಜ್ಞಾನದ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಲಾಭ ಗಳಿಸುವ ಜತೆಗೆ ಜ್ಞಾನವನ್ನು ವೃದ್ಧಿಸಲು ಸಾಧ್ಯ ಎಂದು ನಗರದ ಪಿಎ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ಡಾ.ಎಂ. ಶರ್ಮಿಳಾ ಕುಮಾರಿ ಹೇಳಿದ್ದಾರೆ. ಕೊಡಗು, ದ.ಕ., ಉಡುಪಿ ಜಿಲ್ಲೆಯ ಎಂಜಿನಿಯರ್ಸ್ ಅಸೋಸಿಯೇಶನ್ ವತಿಯಿಂದ ಮಂಗಳವಾರ ವುಡ್ಲ್ಯಾಂಡ್ ಹೊಟೇಲ್ನಲ್ಲಿ ನಡೆದ ಉಪನ್ಯಾಸದಲ್ಲಿ ಕಂಪ್ಯೂಟರ್ ಬಳಕೆಯ ಕುರಿತು ಮಾಹಿತಿ ನೀಡಿದರು. ಕೃಷಿಗೆ ಬಳಸುವ ಸಾಧನ, ಉಪಯೋಗ, ಪ್ರದೇಶದಲ್ಲಿ ಕೃಷಿ ಬೆಳೆಸಲು ಬಳಸಬಹುದಾದ ಅವಶ್ಯಕ ಸಾಮಾಗ್ರಿಗಳ ಬಗ್ಗೆ ತಿಳಿಸಿಕೊಡುತ್ತದೆ ಎಂದರು. ಕಣ್ಣಿನಿಂದ ನೋಡಿದ ವಸ್ತು, ಗ್ರಹಿಸಿ ಮೆದುಳಲ್ಲಿ ಸಂಗ್ರಹಿಸುತ್ತದೆ. ಅದನ್ನೇ ಇನ್ನೊಂದು ಬಾರಿ ಗಮನಿಸಿದಾಗ ತಕ್ಷಣ ಗುರುತಿಸುವ ಕೆಲಸ ಮಾಡುತ್ತದೆ. ಹಾಗೆಯೇ ಕಂಪ್ಯೂಟರ್ನಲ್ಲಿ ಸಂಗ್ರಹಿಸಡಲಾದ ಮಾಹಿತಿಗಳು ಶೇಖರಗೊಳ್ಳುತ್ತದೆ. ಅಗತ್ಯವೆನಿಸಿದಾಗ ಬಳಸಿಕೊಳ್ಳಲು ಸುಲಭವಾಗುತ್ತದೆ ಎಂದರು. ಕಂಪ್ಯೂಟರ್ ಮೂಲಕ ಮನುಷ್ಯನ ದೇಹದ ಕಣ್ಣು, ಬೆರಳುಗಳ ಗುರುತನ್ನು ಸಂಗ್ರಹಿಸಿಟ್ಟು, ತನ್ನ ಮೂಲವನ್ನು ಶಾಶ್ವತವಾಗಿ ಶೇಖರಿಸಿಡಬಹುದು. ಬೆರಳುಗಳ ಗುರುತಿಸುವಿಕೆಯಿಂದ ಕೊಲೆಗಾರರನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಬಸ್ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೇ ಸಾವು
ಕೋಟ: ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಸರ್ಕಾರಿ ಬಸ್ಸು ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ತೆಕ್ಕಟ್ಟೆ ಗ್ರಾಮದ ಗ್ರೇಸ್ ಹಾಲ್ ಬಳಿ ನಡೆದಿದೆ. ಕೊರ್ಗಿ ಗ್ರಾಮದ ನಿವಾಸಿ ಕುಶಲಶೆಟ್ಟಿ ಮೃತರು. ಇವರು ತಮ್ಮ ಮಗ ಕಿರಣ್, ಮನೆಯ ಸಮೀಪದ ಶೀನಪ್ಪ ಶೆಟ್ಟಿ ಮತ್ತು ರಾಜಾರಾಮ ಶೆಟ್ಟಿ ಅವರೊಂದಿಗೆ ತೆಕ್ಕಟ್ಟೆ ಗ್ರಾಮದ ಗ್ರೇಸ್ಹಾಲ್ನಲ್ಲಿ ನಡೆಯುವ ಮದುವೆಯ ಔತಣಕೂಟಕ್ಕೆ ತೆರಳಿದ್ದರು. ಹಿಂತಿರುಗಲು ಸಭಾಂಗಣದ ಮುಂಭಾಗ ನಿಂತಿದ್ದಾಗ ಕುಂದಾಪುರ ಕಡೆಯಿಂದ ಬಂದ ಕೆಎಸ್ಸಾರ್ಟಿಸಿ ಬಸ್ಸು ಡಿಕ್ಕಿ ಹೊಡೆದು ಕುಶಲ ಶೆಟ್ಟಿ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಆತ್ಮಹತ್ಯೆ
ಉಡುಪಿ: ಇಲ್ಲಿನ ಬನ್ನಂಜೆ ತಾರಾಬಾಯಿ ಕಂಪೌಂಡ್ ಎಂಬಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಮೃತರು ಅಕ್ಷಯ (18), ಈತ ಶ್ರೀನಿವಾಸ ಆಚಾರ್ಯ ಎಂಬವರ ಮಗ, ಸೋಮವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯ ಪಕ್ಕಾಸಿಗೆ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಅಕ್ಷಯನ ಎದೆ ಮತ್ತು ಕುತ್ತಿಗೆಯಲ್ಲಿ ಬಿಳಿ ಬಣ್ಣದ ಕಲೆಗಳು ಉಂಟಾಗಿದ್ದು, ಈ ಬಗ್ಗೆ ವೈದ್ಯರಿಂದ ಚಿಕಿತ್ಸೆ ಮಾಡಿಸಿದರೂ ಗುಣ ಆಗದೆ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೋಡಿಗೆ ಬಿದ್ದು ವ್ಯಕ್ತಿ ಮೃತ
ಬ್ರಹ್ಮಾವರ: ಇಲ್ಲಿನ ಕಚ್ಚೂರು ಗ್ರಾಮದ ಉಪ್ಪುನೀರಕೆರೆ ಎಂಬಲ್ಲಿ ವ್ಯಕ್ತಿಯೊಬ್ಬ ಕಾಲು ಜಾರಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಮೃತರು ಸುರೇಶ್ (38), ಅವರು ನಾಗೇಶ್ ಶ್ರೀಯಾನ್ ಎಂಬವರ ಅಣ್ಣ, ಕಚ್ಚೂರು ಕಡೆಯಿಂದ ನಡೆದುಕೊಂಡು ಬರುವಾಗ ಕೃಷ್ಣ ಪೂಜಾರಿ ಎಂಬವರ ಮನೆಯ ಬಳಿ ಮೋರಿಯ ಹತ್ತಿರ ಆಕಸ್ಮಿಕವಾಗಿ ಕಾಲು ಜಾರಿ 15 ಅಡಿ ಆಳದ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ನಾಗೇಶ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಮದ್ಯಪಾನಿ ಬಿದ್ದು ಸಾವು
ಬ್ರಹ್ಮಾವರ: ಇಲ್ಲಿನ ಹಾವಂಜೆ ಗ್ರಾಮದ ಕೊಳಲಗಿರಿ ಎಂಬಲ್ಲಿ ವ್ಯಕ್ತಿಯೊಬ್ಬ ವಿಪರೀತ ಮದ್ಯಪಾನ ಮಾಡಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತರು ರೋಬರ್ಟ್ ಡಿಸೋಜ ಭಾನುವಾರ ಸಂಜೆ 4 ಗಂಟೆಗೆ ಮದ್ಯಪಾನ ಮಾಡಿ ತಮ್ಮ ಮನೆಯಲ್ಲಿ ಬಿದ್ದು ಪ್ರಜ್ಞೆ ತಪ್ಪಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ 5 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಸಂಬಂಧಿ ಅಗೊಸ್ಟಿನ್ ಡಿಸೋಜಾ ಎಂಬವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೆಯ್ಯೂರು: ಮಹಿಳೆ ಕೊಲೆ
ಪುತ್ತೂರು: ವೃದ್ಧೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದ ಪ್ರಕರಣ ಸೋಮವಾರ ಸಂಜೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಶಾಲೆ ಸಮೀಪ ನಡೆದಿದೆ. ಕೆಯ್ಯೂರು ಗ್ರಾಮದ ಉಣ್ಣಿಮಾರು ನಿವಾಸಿ ಕಾಂತಪ್ಪ ಪೂಜಾರಿ ಎಂಬವರ ಮನೆಯಲ್ಲಿ ವಾಸ್ತವ್ಯವಿದ್ದ ಆತನ ಸಹೋದರಿ ಗಿರಿಜಾ (65) ಕೊಲೆಯಾದ ಮಹಿಳೆ. ಗಿರಿಜಾ ಸೋಮವಾರ ಸಂಜೆ ತನ್ನ ಅತ್ತಿಗೆಯೊಂದಿಗೆ ಮಾಡಾವಿನ ಬೀಡಿ ಬ್ರ್ಯಾಂಚ್ಗೆ ತೆರಳಿದ್ದರು. ಬೀಡಿ ಬ್ರ್ಯಾಂಚ್ನಿಂದ ಹಿಂತಿರುಗಿದ್ದ ಅವರು ಉಣ್ಣಿಮಾರು ರಸ್ತೆಯ ಚರಂಡಿಯಲ್ಲಿ ಕೊಲೆಯಾಗಿ ಪತ್ತೆಯಾಗಿದ್ದಾರೆ. ಗಿರಿಜಾ ತಲೆಯ ಭಾಗದಲ್ಲಿ ಗಾಯಗಳಾಗಿದ್ದು ಅವರನ್ನು ಕಲ್ಲಿನಿಂದ ಜಜ್ಜಿ ಇಲ್ಲವೇ ದೊಣ್ಣೆಯಿಂದ ಹೊಡೆದು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಅಲ್ಪ ಪ್ರಮಾಣದ ಮಾನಸಿಕ ಅಸ್ವಸ್ಥೆಯಾಗಿದ್ದರೆನ್ನಲಾದ ಗಿರಿಜಾ ಅವರು ತನ್ನ ಗಂಡನಿಂದ ಪರಿತ್ಯಕ್ತೆಯಾಗಿದ್ದರು ಎಂದು ಹೇಳಲಾಗುತ್ತಿದೆ. ಪುತ್ತೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಗ್ನಿ ಅನಾಹುತ: ಪಾದರಕ್ಷೆಗಳ ಗೋದಾಮು ಭಸ್ಮ
ಕುಂದಾಪುರ: ನಗರದ ಶಾಸ್ತ್ರಿ ಸರ್ಕಲ್ ಬಳಿ ವೈಶಾಲಿ ಕಾಂಪ್ಲಕ್ಸ್ನ ಎರಡನೇ ಮಹಡಿಯಲ್ಲಿರುವ ಪಾದರಕ್ಷೆಗಳ ಗೋದಾಮಿಗೆ ಸೋಮವಾರ ಬೆಳ್ಳಂಬೆಳ್ಳಗೆ ಬೆಂಕಿ ಹಿಡಿದು ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.ಕೆಳ ಅಂತಸ್ತಿನಲ್ಲಿರುವ ಪಾದುಕಾಲಯ ಮಾಲೀಕ ಮಹ್ಮದ್ ಗೌಸ್ ಎಂಬವರಿಗೆ ಸೇರಿದ ಈ ಗೋದಾಮಿನಲ್ಲಿ ಪಾದರಕ್ಷೆಗಳನ್ನು ದಾಸ್ತಾನಿಡಲಾಗಿತ್ತು. ಮೊದಲು ಕಟ್ಟಡದ ಮೇಲಿನಿಂದ ಅಸ್ಪಷ್ಟವಾಗಿ ಕಂಡುಬಂದ ಹೊಗೆ ಕ್ರಮೇಣ ದಟ್ಟವಾಗಿ ಕಂಡು ಬಂದಿದ್ದನ್ನು ನೋಡಿದ ಸಾರ್ವಜನಿಕರು ಕೂಡಲೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಆದರೆ ಕಟ್ಟಡದ ಎರಡೂ ಕಡೆಗಳಿಂದ ಹೊಗೆ ಆವರಿಸಿದ್ದರಿಂದ 2-3 ಗಂಟೆಗಳ ಸತತ ಪ್ರಯತ್ನದಿಂದ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ಸಾದರೂ ಅದಾಗಲೇ ಗೋದಾಮು ಸುಟ್ಟು ಕರಕಲಾಗಿ ಹೋಗಿತ್ತು.ಇದೇ ಮಾಳಿಗೆಯಲ್ಲಿ ಮೊಬೈಲ್ ಅಂಗಡಿ, ಪ್ಲಾಸ್ಟಿಕ್ ಅಂಗಡಿ, ಹೋಲ್ಸೇಲ್ ಅಂಗಡಿಗಳ ಸಹಿತ ಇನ್ನಿತರ ವ್ಯಾಪಾರ ಮಳಿಗೆಗಳಿರುವುದರಿಂದ ಸಂಭಾವ್ಯ ದುರಂತದ ಬಗ್ಗೆ ತೀರ ಕಳವಳ ವ್ಯಕ್ತವಾಗಿತ್ತು.
ಪೊಲೀಸ್ ಸಿಬ್ಬಂದಿ ಕೊಲೆ ಯತ್ನ: ಒಬ್ಬ ಸೆರೆ
ಸುಳ್ಯ: ದೊಡ್ಡತೋಟ ಸಮೀಪದ ಮೇರ್ಕಜೆ ಎಂಬಲ್ಲಿ ಪಾನಮತ್ತ ಯುವಕರ ತಂಡ ಪೊಲೀಸ್ ಕಾನ್ಸ್ಟೇಬಲ್ಗಳ ಮೇಲೆ ಭಾನುವಾರ ರಾತ್ರಿ ಹಲ್ಲೆ ನಡೆಸಿದ್ದು, ಒಬ್ಬನನ್ನು ಬಂಧಿಸಲಾಗಿದೆ.ಪೊಲೀಸ್ ಪೇದೆಗಳು ಗಸ್ತು ತಿರುಗುತ್ತಿರುವ ವೇಳೆ ಪಾನಮತ್ತರಾದ ಹರೀಶ್, ಮೋಹನದಾಸ್ ಮತ್ತು ಸುರೇಶ್ ಮೇರ್ಕಜೆ ಎಂಬವರು ದೊಡ್ಡತೋಟ- ಕುಕ್ಕುಜಡ್ಕ ರಸ್ತೆಯಲ್ಲಿ ಪಾನಮತ್ತರಾಗಿ ಅಡ್ಡಲಾಗಿ ಮಲಗಿದ್ದರು. ಇದನ್ನು ಪೊಲೀಸ್ ಸಿಬ್ಬಂದಿ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ ತಂಡ ಪೇದೆಗಳ ಮೇಲೆ ಹಲ್ಲೆ ನಡಿಸಿದ್ದು ಕೊಲೆ ಯತ್ನ ನಡೆಸಿದ್ದರು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಪೈಕಿ ಹರೀಶನನ್ನು ಬಂಧಿಸಲಾಗಿದೆ.
ಕೊಳವೆ ಬಾವಿ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ
ಬಂಟ್ವಾಳ: ಸರ್ಕಾರಿ ಕೊಳವೆ ಬಾವಿ ಸಮೀಪವೇ ಖಾಸಗಿ ವ್ಯಕ್ತಿ ತನ್ನ ಖಾಸಗಿ ಜಾಗದಲ್ಲಿ ಕೊಳವೆ ಬಾವಿ ಕೊರೆಯಿಸುತ್ತಿದ್ದುದನ್ನು ಗ್ರಾಮಸ್ಥರು ವಿರೋಧಿಸಿ ಪ್ರತಿಭಟನೆ ನಡೆಸಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕಡಂಬು ಸಮೀಪ ಸೋಮವಾರ ರಾತ್ರಿ ನಡೆದಿದೆ. ಈ ವಿವಾದಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ ಕೊಳವೆ ಬಾವಿಗೆ ತಡೆಯೊಡ್ಡಿದ್ದಾರೆ.ಘಟನೆ ವಿವರ: ವಿಟ್ಲ ಪಡ್ನೂರು ಗ್ರಾಮದ ಕಡಂಬು ದೇವಸ್ಥಾನ ಬಳಿ ತಿಂಗಳ ಹಿಂದೆ ಪಂಚಾಯಿತಿ ವತಿಯಿಂದ ಕೊಳವೆ ಬಾವಿ ಕೊರೆಯಲಾಗಿತ್ತು. ಈ ಕೊಳವೆ ಬಾವಿ ನೀರು ಕಡಂಬು ಪರಿಸರದ 150ಕ್ಕಿಂತಲೂ ಅಧಿಕ ಮನೆಗಳಿಗೆ ನೀರು ಸರಬರಾಜುವಾಗುತ್ತಿತ್ತು ಎನ್ನಲಾಗಿದೆ. ಈ ನಡುವೆ ಕಡಂಬು ದೇವಸ್ಥಾನ ಬಳಿಯ ಖಾಸಗಿ ವ್ಯಕ್ತಿಯೊಬ್ಬರು ವಿಟ್ಲ-ಸಾಲೆತ್ತೂರು ರಸ್ತೆ ಬದಿಯ ತನ್ನ ತೋಟದಲ್ಲಿ ಸೋಮವಾರ ಮಧ್ಯಾಹ್ನದಿಂದ ಕೊಳವೆ ಕೊರೆಯಲು ಬಾರೀ ಸಿದ್ಧತೆ ನಡೆಸುತ್ತಿದ್ದರು. ಇದನ್ನು ಗಮನಿಸಿದ ಸುಮಾರು 150ಕ್ಕಿಂತಲೂ ಅಧಿಕ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಅದರ ವಿರುದ್ಧ ಪ್ರತಿಭಟನೆ ನಡೆಸಿದರು. ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಸ್ಥಳಕ್ಕೆ ಧಾವಿಸಿ ಕೊಳವೆ ಬಾವಿ ಕೊರೆಯುವುದನ್ನು ಸ್ಥಗಿತಗೊಳಿಸಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಗಿತ್ತು. ಕೆಲ ಸಮಯಗಳ ಬಳಿಕ ಮತ್ತೆ ಕೊಳವೆ ಬಾವಿ ಕೊರೆಯಲು ಪ್ರಾರಂಭಿಸಲಾಗಿತ್ತು. ಮತ್ತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಕೊಳವೆ ಬಾವಿ ಕೊರೆಯುವುದನ್ನು ನಿಲ್ಲಿಸಿದ್ದು, ಮಂಗಳವಾರ ಇತ್ತಂಡದವರು ಠಾಣೆಗೆ ಹಾಜರಾಗಲು ಸೂಚಿಸಿದ್ದಾರೆ.