ತುಂಬೆಯಲ್ಲಿ ನೀರು ಸಂಗ್ರಹ ಇಳಿಕೆ
-ವಜ್ರಾಕ್ಷಿ ಬಂಟ್ವಾಳ
ಮಂಗಳೂರು: ದಕ್ಷಿಣ ಕನ್ನಡದಲ್ಲಿ ಬೇಸಿಗೆ ಬಿಸಿ ಪರಾಕಾಷ್ಠೆ ತಲುಪಿದ್ದು, ರಾಜ್ಯದ ಇತರೆಡೆಗಳಲ್ಲಿ ಸಾಕಷ್ಟು ಮಳೆಯಾದರೂ ಇನ್ನೂ ಮಂಗಳೂರು ಭಾಗದಲ್ಲಿ ಧಾರಾಕಾರ ಮಳೆಯಾಗಿಲ್ಲ. ಸುಡುಬಿಸಿಲಿಗೆ ಜನತೆ ಕಂಗೆಟ್ಟಿದೆ.
ಈ ನಡುವೆ, ಮಂಗಳೂರಿಗೆ ನೀರುಣಿಸುವ ಜೀವನದಿ ನೇತ್ರಾವತಿಯ ತುಂಬೆ ವೆಂಟೆಡ್ ಡ್ಯಾಂನ ನೀರಿನ ಸಂಗ್ರಹ ಮಟ್ಟ ಕೂಡ ಕಡಿಮೆಯಾಗುತ್ತಿದೆ. ಸೋಮವಾರ ತುಂಬೆ ನೀರಿನಮಟ್ಟ 9.6 ಅಡಿ ತಲುಪಿದೆ. ಕಳೆದ ವರ್ಷ ಇದೇ ದಿನ 12.10 ಅಡಿ ನೀರಿನ ಸಂಗ್ರಹವಿತ್ತು. ಮಳೆ ಬಾರದಿದ್ದರೂ ಮುಂದಿನ 20 ದಿನಕ್ಕೆ ಮಂಗಳೂರಿಗೆ ಪೂರೈಸುವಷ್ಟು ನೀರು ಡ್ಯಾಂನಲ್ಲಿದೆ ಎನ್ನುತ್ತಾರೆ ಅಧಿಕಾರಿಗಳು.
ಮಳೆ ಬಾರದಿದ್ದರೆ ತೊಂದರೆ: ಬಂಟ್ವಾಳ ವ್ಯಾಪ್ತಿಯ ಶಂಭೂರಿನಲ್ಲಿರುವ ವಿದ್ಯುತ್ ಉತ್ಪಾದನಾ ಘಟಕ ಎಎಂಆರ್ ಸಂಸ್ಥೆಯವರು ಡ್ಯಾಂನಿಂದ ಹೆಚ್ಚುವರಿ ನೀರು ಪಡೆಯುತ್ತಿರುವುದರಿಂದ ದೊಡ್ಡ ಸಮಸ್ಯೆ ಆಗದು. ಆದರೆ, ಮಳೆ ಬಾರದಿದ್ದರೆ ತೊಂದರೆಯಾದೀತು. ಅಲ್ಲದೆ ನೀರಿನ ಮಟ್ಟ 8 ರಿಂದ 6 ಅಡಿವರೆಗೆ ಇಳಿದರೆ ಮಾತ್ರ ತೊಂದರೆ ಎಂಬುವುದು ಅಧಿಕಾರಿಗಳ ಅಭಿಪ್ರಾಯ.
ತುಂಬೆ ವೆಂಟೆಂಡ್ ಡ್ಯಾಂನ ಮೇಲಿಂದ ಬಂಟ್ವಾಳ ವ್ಯಾಪ್ತಿಯ ಶಂಭೂರಿನಲ್ಲಿ ಎಎಂಆರ್ ಮತ್ತು ಸರಪಾಡಿಯಲ್ಲಿ ಎಂಆರ್ಪಿಎಲ್ ಡ್ಯಾಂಗಳಿದೆ. ಎಎಂಆರ್ ವೆಂಟೆಂಡ್ ಡ್ಯಾಂನ ಸಂಗ್ರಹ ಮಟ್ಟ 19 ಅಡಿ ಇದ್ದು, ಇಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅಲ್ಲಿಂದ ಹೆಚ್ಚುವರಿ ನೀರನ್ನು ತುಂಬೆಗೆ ಬಿಡಲಾಗುತ್ತದೆ. ಇಲ್ಲಿಯ ನೀರನ್ನು ಎಂಆರ್ಪಿಎಲ್ ಕೂಡ ಬಳಸುತ್ತಿದೆ.
ನೀರು ಬಿಡುವ ಶರತ್ತು: ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾದರೆ ಎಎಂಆರ್ನವರು ನೀರನ್ನು ಬಿಡಲೇಬೇಕು ಎಂಬ ಶರತ್ತು ಹಾಕಲಾಗಿದೆ. ಆದ್ದರಿಂದ ಮಳೆ ಬರುವವರೆಗೆ ಸಮಸ್ಯೆಯಿಲ್ಲ. ಪಶ್ಚಿಮ ಘಟ್ಟದಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ನದಿ ತುಂಬಿಕೊಳ್ಳತ್ತದೆ. ಇಲ್ಲವಾದರೆ ಕಷ್ಟವಾಗಲಿದೆ.
ತುಂಬೆ ಡ್ಯಾಂನಲ್ಲಿ ಮೇ 6 ರಂದು ನೀರಿನ ಮಟ್ಟ 8.8 ಅಡಿ ಇದ್ದು, 7 ರಂದು 8.5 ಅಡಿಗೆ ಇಳಇಕೆಯಾಗಿತ್ತು.
ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕಳೆದ ವರ್ಷ ಮಂಗಳೂರು ಗ್ರಾಮಾಂತರ ವ್ಯಾಪ್ತಿಯ 12 ಗ್ರಾಮಗಳಾದ ಬೆಳ್ಮ, ಹರೇಕಳ, ಮಂಜನಾಡಿ, ಅಂಬ್ಲಮೊಗರು, ಕಿನ್ಯಾ, ಕೊಣಾಜೆ, ಕೋಟೆಕಾರು, ಮುನ್ನೂರು, ಪಾವೂರು, ಸೋಮೇಶ್ವರ, ತಲಪಾಡಿ ನೀರಿನ ಸಮಸ್ಯೆ ಎದುರಿಸಿದ್ದವು.
2012-2013ರ ನೀರಿನ ಮಟ್ಟಗಳ ವಿವರ:
2013ರ ಮೇ11- 9.11 ಅಡಿ, ಮೇ 12- 9.11 ಅಡಿ, ಮೇ. 13- 9.6 ಅಡಿ
2012ರ ಮೇ11- 13 ಅಡಿ, ಮೇ 12- 12.10 ಅಡಿ, ಮೇ 13- 12.10 ಅಡಿ