ದೇವರು ಜನರ ಪ್ರತಿಬಿಂಬ: ರಾಘವೇಶ್ವರ ಶ್ರೀ
ಪುತ್ತೂರು ಮಹಾಲಿಂಗೇಶ್ವರ ದೇವಾಲಯ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ
ಪುತ್ತೂರು: ದೇವರ ಪ್ರತಿಷ್ಠಾಪನೆ ಮಾಡುವ ಮೂಲಕ ನಮಗೆಲ್ಲ ನೆಲೆ ಸಿಕ್ಕಿದಂತಾಗಿದ್ದು, ಪ್ರತಿಷ್ಠೆಯನ್ನು ಮಂದಿರದ ಜೊತೆಗೆ ಮನದಲ್ಲಿಯೂ ಭದ್ರ ಮಾಡಬೇಕು ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಪುತ್ತೂರಿನ ಮಹಾಲಿಂಗೇಶ್ವರ ದೇವಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ 9ನೇ ದಿನವಾದ ಸೋಮವಾರ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದೇವರೆಂಬುದು ಜನರ ಪ್ರತಿಬಿಂಬ. ದೇವರು ಪ್ರತಿಷ್ಠೆಯಾದರೆ ನಮಗೆಲ್ಲ ನೆಲೆ ಸಿಕ್ಕಿದಂತೆ ಎಂದ ಸ್ವಾಮೀಜಿ, ಅತ್ಯಂತ ಹಳೆಯದಾದ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೊಸತನ ಬಂದಿದ್ದು, ಪ್ರತಿಷ್ಠಾ ಸೇವೆಯೂ ನಡೆದಿದೆ. ಬ್ರಹ್ಮಕಲಶೋತ್ಸವ ಮುಗಿಯುವ ವೇಳೆಗೆ ಕರಸೇವಕರ ಸಂಖ್ಯೆ ಒಂದು ಲಕ್ಷ ದಾಟುತ್ತಿರುವುದು ಸಮಾಜಕ್ಕೆ ದೊಡ್ಡ ಸಂದೇಶ ಎಂದರು. ರಾತ್ರಿ ಹಗಲೆನ್ನೆದೆ ದೇವರ ಸೇವೆ ಮಾಡುವವನೇ ಶ್ರೇಷ್ಠ. ಈ ಪುಣ್ಯವನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಧಾರ್ಮಿಕ ಭಾಷಣ ಮಾಡಿದ ಪೊಲೀಸ್ ಅಧಿಕಾರಿ ಡಾ. ವೆಂಕಟೇಶ್ ಪ್ರಸನ್ನ, ಧರ್ಮಗಳಲ್ಲಿ ಶ್ರೇಷ್ಠವಾದುದು ರಾಷ್ಟ್ರಧರ್ಮ. ದೇವರಲ್ಲಿ ದೊಡ್ಡವ ಎಂಬ ಕಚ್ಚಾಟ ಬೇಡ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ ಆಳ್ವ ಮಾತನಾಡಿ, ಧರ್ಮ ಸಂಸ್ಕೃತಿಗಳ ಮೇಲೆ ಜಾಗತಿಕ ದಾಳಿಯಾಗಿ ಪರಂಪರೆ ನಶಿಸಿ ಹೋಗುತ್ತಿದ್ದರೂ, ಈ ನಾಡಿನಲ್ಲಿ ಧರ್ಮ ಜಾಗೃತಿ ಇರುವುದರಿಂದ ಧಾರ್ಮಿಕತೆ, ಸಾಂಸ್ಕೃತಿಕ ವಾತಾವರಣ ಉಳಿಸಿಕೊಂಡಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭ ಜೋತಿಷ್ಯರತ್ನ ಬೇಳ ಪದ್ಮನಾಭ ಶರ್ಮ ಮತ್ತು ದೇವಳ ಪುನರ್ ನಿರ್ಮಾಣದಲ್ಲಿ ಶ್ರಮಿಸಿದ ಎಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್ ಅವರನ್ನು ಗೌರವಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಸದಸ್ಯ ಕೇಶವ ನಾಯ್ಕ್ ದಂಪತಿ, ಭದ್ರತಾ ಸಮಿತಿ ಸದಸ್ಯ ಮೋಹನ್ ಶೆಟ್ಟಿ, ಒಳಾಂಗಣ ಶುಚಿತ್ವ ಸದಸ್ಯರಾದ ಮುರಳೀಧರ ಆಚಾರ್ಯ, ಹರೀಶ್ ಪೈ, ಗಣೇಶ್ ಆಚಾರ್ಯ ಹಾರಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವ ಡಿ.ಪುಂಡಿತ್ತೂರು ಅತಿಥಿಗಳಿಗೆ ಗೌರವ ಸಮರ್ಪಿಸಿದರು.
ಶ್ರೀಕ್ಷೇತ್ರ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ, ಜೀರ್ಣೋದ್ಧಾರ ಸಮಿತಿ ಸದಸ್ಯ ಪ್ರಧಾನ ಕಾರ್ಯದರ್ಶಿ ಚನಿಲ ತಿಮ್ಮಪ್ಪ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಸಿ.ಯು. ಪೂವಪ್ಪ ಇದ್ದರು. ಭಾಸ್ಕರ ಭಾರ್ಯ ಸ್ವಾಗತಿಸಿದರು. ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ ಮೇಲ್ವಿಚಾರಕ ಉಮೇಶ್ ಸಂಪ್ಯ ವಂದಿಸಿದರು. ಡಾ.ವರದರಾಜ ಚಂದ್ರಗಿರಿ ಮತ್ತು ರಾಜೇಶ್ ಬನ್ನೂರು ನಿರ್ವಹಿಸಿದರು.
ಪಲ್ಲಪೂಜೆ
ಪುತ್ತೂರು: ಬ್ರಹ್ಮಕಲಶ ನಡೆಯುತ್ತಿರುವ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಅನ್ನದಾನದ ತಯಾರಿಸಲಾದ ಅನ್ನದ ರಾಶಿಗೆ ಪಲ್ಲಪೂಜೆ ನಡೆಸಲಾಯಿತು. ವೇದಮೂರ್ತಿ ಕುಂಟಾರು ರವೀಶ ತಂತ್ರಿ ಪಲ್ಲಪೂಜೆ ನಡೆಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಚನಿಲ ತಿಮ್ಮಪ್ಪ ಶೆಟ್ಟಿ, ಅಡುಗೆ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಕಾರ್ಯದರ್ಶಿ ಸುನಿಲ್ ಶೆಟ್ಟಿ, ರಾಧಾಕೃಷ್ಣ ನಾಯಕ್ ಮತ್ತಿತರರು ಇದ್ದರು.