ಲೈಂಗಿಕ ಕಿರುಕುಳ ದೂರು ನಿವಾರಣೆ ಸಮಿತಿಗೆ ತನಿಖೆ ಹೊಣೆ
ಮಂಗಳೂರು: ಮಹಿಳಾ ಎಎಸ್ಐಗೆ ರಜೆ ವಿಚಾರದಲ್ಲಿ ಕಿರುಕುಳ ನೀಡಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರದಂತೆ ಮಹಿಳಾ ಅಧಿಕಾರಿ ನೇತೃತ್ವದ ಲೈಂಗಿಕ ಕಿರುಕುಳ ದೂರು ನಿವಾರಣೆ ಸಮಿತಿ ತನಿಖೆ ನಡೆಸಲಿದೆ.
ಸಮಿತಿಯ 9 ಸದಸ್ಯರಲ್ಲಿ ಏಳು ಮಹಿಳೆಯರು ಇರಲಿದ್ದಾರೆ ಎಂದು ಪೊಲೀಸ್ ಕಮಿಷನರ್ ಮನೀಶ್ ಕರ್ಬಿಕರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಿಳಾ ಎಎಸ್ಐ ಶ್ರೀಕಲಾ ನೀಡಿದ ದೂರಿನ ಸಂಪೂರ್ಣ ವಿವರಗಳನ್ನು ಅವಲೋಕಿಸುವಾಗ ಸುಪ್ರೀಂ ಕೋರ್ಟ್ ಮಾಗದರ್ಶಿ ಸೂತ್ರಗಳ ಪ್ರಕಾರ ಲೈಂಗಿಕ ಕಿರುಕುಳ ಎಂದು ಪರಿಗಣಿಸಲು ಸಾಧ್ಯವಿರಲಿಲ್ಲ. ಆದರೂ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಒಂದು ಲೈನ್ ದೂರಿನಲ್ಲಿರುವುದರಿಂದ ದೂರಿನ ತನಿಖೆಯನ್ನು ಲೈಂಗಿಕ ಕಿರುಕುಳ ದೂರು ನಿವಾರಣೆ ಸಮಿತಿಗೆ ವಹಿಸಲಾಗಿದೆ ಎಂದರು.
ಪ್ರತ್ಯೇಕ ತನಿಖೆ: ಮಹಿಳಾ ಎಎಸ್ಐ ಶ್ರೀಕಲಾ ವಿರುದ್ಧ ಈಗ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಮತ್ತು ಅವರ ಗಂಡನ ವಿರುದ್ಧ 2 ವರ್ಷದ ಹಿಂದಿನ ವಂಚನೆ ಪ್ರಕರಣವೂ ನನ್ನ ಗಮನಕ್ಕೆ ಬಂದಿದ್ದು, ಕಾನೂನು ಪ್ರಕಾರ ಪ್ರತ್ಯೇಕವಾಗಿ ತನಿಖೆ ನಡೆಯಲಿದೆ ಎಂದರು. ಸಮಿತಿಯಲ್ಲಿ ನಗರ ಎಸಿಪಿ ಕವಿತಾ, ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕೆ.ಕಲಾವತಿ, ಕಮಿಷನರ್ ಕಚೇರಿ ಆಡಳಿತಾಧಿಕಾರಿ ಹಿಲ್ಡಾ ಗೋವಿಯಸ್, ಅಪರಾಧ ಶಾಖೆ ಅಧೀಕ್ಷಕಿ ಪೌಲಿನ್ ಮರಿಯಪ್ಪ, ರೋಶನಿ ನಿಲಯ ಡೀನ್ ರಮಿಳಾ ಶೇಖರ್, ಸಿಎಸ್ಬಿ ಇನ್ಸ್ಪೆಕ್ಟರ್ ವಿನಯ್ ಗಾಂವ್ಕರ್, ಉರ್ವ ಇನ್ಸ್ಪೆಕ್ಟರ್ ರಾಮಚಂದ್ರ ಬಿ.ಮಾಳದೇವರ, ಸಿಎಸ್ಬಿ ಎಸ್ಐ ಗಿರಿಜಾ, ಉಳ್ಳಾಲ ಠಾಣೆ ಎಎಸ್ಐ ನಾಗಿಣಿ ಸಮಿತಿಯಲ್ಲಿದ್ದಾರೆ.
ಎಸಿಪಿಗೆ 10 ದಿನ ರಜೆ: ಮಹಿಳಾ ಎಎಸ್ಐಗೆ ಕಿರುಕುಳ ನೀಡಿದ ಆರೋಪ ಹೊತ್ತಿರುವ ಎಸಿಪಿ ಜಗನ್ನಾಥ್ 10 ದಿನಗಳ ಕಾಲ ರಜೆ ನೀಡಲಾಗಿದೆ. ತನಿಖೆ ಮುಗಿಯುವವರೆಗೆ ರಜೆ ಮೇಲೆ ತೆರಳಲಿದ್ದಾರೆ ಎಂದು ಕರ್ಬೀಕರ್ ತಿಳಿಸಿದ್ದಾರೆ.