ಗುಂಡ್ಯ ಜಲವಿದ್ಯುತ್ಗೆ ಗ್ರೀನ್ ಸಿಗ್ನಲ್ ಕಷ್ಟ
-ಆತ್ಮಭೂಷಣ್
ಮಂಗಳೂರು: ಜೀವವೈವಿಧ್ಯತೆ ತಾಣ ಪಶ್ಚಿಮ ಘಟ್ಟದಲ್ಲಿ ಕೇಂದ್ರ ಪರಿಸರ ಇಲಾಖೆ ಪಟ್ಟಿ ಮಾಡಿದ 154 ವಿವಿಧ ಕೈಗಾರಿಕೆ ಅಥವಾ ಯೋಜನೆ ಸ್ಥಾಪನೆಗೆ ನಿರ್ಬಂಧ ವಿಧಿಸಲಾಗಿದೆ. 2013 ಏ.17ರಿಂದ ಅನ್ವಯವಾಗುವಂತೆ ಯಾವುದೇ ಯೋಜನೆಗೆ ನಿರಾಕ್ಷೇಪಣಾ ಪತ್ರ ಅಥವಾ ಅನುಮತಿ ನೀಡಬೇಕಾದರೆ ಈ ಪಟ್ಟಿಯಲ್ಲಿರುವ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಇದರಲ್ಲಿ ದೊಡ್ಡ ಪ್ರಮಾಣದ ಜಲವಿದ್ಯುತ್ ಉತ್ಪಾದನೆಯೂ ಸೇರಿದೆ. ಈ ಹಿನ್ನೆಲೆಯಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ ಪ್ರಸ್ತಾವಿತ ಗುಂಡ್ಯ ಜಲವಿದ್ಯುತ್ ಯೋಜನೆ ಕಾರ್ಯಗತಗೊಳ್ಳುವುದು ಅನುಮಾನ.
ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ನೀಡಿದ ಡಾ.ಕಸ್ತೂರಿ ರಂಗನ್ ವರದಿಯ ಮಾರ್ಗದರ್ಶಿ ಸೂತ್ರಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಕಳುಹಿಸಿದೆ. ಈ ಆದೇಶದಲ್ಲಿ 25 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆಗೆ ಮಾತ್ರ ಅವಕಾಶ ನೀಡುವಂತೆ ಸ್ಪಷ್ಟಪಡಿಸಲಾಗಿದೆ. ಇದೇ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ 200ರಿಂದ 400 ಮೆಗಾವ್ಯಾಟ್ ಸಾಮರ್ಥ್ಯದ ಗುಂಡ್ಯ ಜಲವಿದ್ಯುತ್ ಯೋಜನೆಗೆ ತೊಡಕಾಗಲಿದೆ.
ಪರಿಸರ ಸಂರಕ್ಷಣಾ ಕಾಯ್ದೆ 1986 ಸೆಕ್ಷನ್ 5ರ ಪ್ರಕಾರ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ. ದೇಶದಲ್ಲಿ 1500 ಕಿ.ಮೀ.ವರೆಗೆ ಪಶ್ಚಿಮಘಟ್ಟ ವ್ಯಾಪಿಸಿದ್ದು, ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಹಾಗೂ ತಮಿಳ್ನಾಡು ರಾಜ್ಯಗಳಿಗೆ ಅನ್ವಯವಾಗಲಿದೆ.
ಗುಂಡ್ಯಕ್ಕೆ ಹೇಗೆ ತೊಡಕು?: ಗುಂಡ್ಯ ಜಲವಿದ್ಯುತ್ ಯೋಜನೆಗೆ 2009ರಲ್ಲಿ ಸಕಲೇಶಪುರ ಬಳಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಿದ್ದರು. ಪ್ರಥಮ ಹಂತದಲ್ಲಿ 200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಇದರ ಗುರಿಯಾಗಿತ್ತು. ಇದಕ್ಕೆ 120 ಕೋಟಿ ಯೋಜನೆ ರೂಪಿಸಲಾಗಿದ್ದು, 613 ಯೂನಿಟ್ ವಿದ್ಯುತ್ ಉತ್ಪಾದಿಸುವ ಉದ್ದೇಶ ಹೊಂದಲಾಗಿತ್ತು. ಪ್ರತಿ ಯೂನಿಟ್ಗೆ 1.90 ನಿಗದಿಪಡಿಸಲಾಗಿತ್ತು. ಯೋಜನೆಗೆ 700 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿ 168 ಕುಟುಂಬಗಳಿಗೆ ಪುನರ್ವಸತಿಗೆ ನಿರ್ಧರಿಸಲಾಗಿತ್ತು.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಲುಪಿದ ಕೇಂದ್ರ ಪರಿಸರ ಇಲಾಖೆಯ ಆದೇಶದಲ್ಲಿ 25 ಮೆಗಾವ್ಯಾಟ್ಗಿಂತ ದೊಡ್ಡ ಜಲವಿದ್ಯುತ್ ಯೋಜನೆಗಳಿಗೆ ನಿರಾಕ್ಷೇಪಣಾ ಪತ್ರ ಕೊಡುವಂತಿಲ್ಲ. ಗುಂಡ್ಯ ಜಲವಿದ್ಯುತ್ ಯೋಜನೆ ವಿವಾದಕ್ಕೆ ಒಳಗಾಗಿದ್ದು, ಮತ್ತೆ ಹೊಸದಾಗಿ ನಿರಾಕ್ಷೇಪಣಾ ಪತ್ರಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ. ಮರು ಅರ್ಜಿ ಸಲ್ಲಿಸಿದರೂ ಈ ಯೋಜನೆಗೆ ಅನುಮತಿ ಸಿಗುವುದು ಕಷ್ಟ.
46 ಜೀವವೈವಿಧ್ಯತೆ ತಾಣ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟದಲ್ಲಿ ಪರಿಸರ ಇಲಾಖೆ 46 ಜೀವವೈವಿಧ್ಯತೆ ತಾಣಗಳನ್ನು ಗುರುತಿಸಿದೆ. ಬೆಳ್ತಂಗಡಿ ತಾಲೂಕಿನಲ್ಲಿ 17, ಪುತ್ತೂರಿನಲ್ಲಿ 11, ಸುಳ್ಯದಲ್ಲಿ 18 ತಾಣಗಳಿವೆ. ಈ ತಾಣಗಳಲ್ಲಿ ಪ್ರಸ್ತುತ 8 ಮಿನಿ ಜಲವಿದ್ಯುತ್ ಯೋಜನೆಗಳಿವೆ.
'ಪರಿಸರ ಇಲಾಖೆ ಆದೇಶದನ್ವಯ ಪಶ್ಚಿಮ ಘಟ್ಟದಲ್ಲಿ ಇನ್ನು ಯಾವುದೇ ಕೈಗಾರಿಕೆಗೆ ಅನುಮತಿ ಇಲ್ಲ. ಪ್ರಸಕ್ತ ಪಶ್ಚಿಮ ಘಟ್ಟದಲ್ಲಿ ಯಾವುದೇ ಕೈಗಾರಿಕೆಗಳಿಲ್ಲ. ನೆಲ್ಯಾಡಿಯಲ್ಲಿದ್ದ ರಬ್ಬರ್ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಗೋಳಿತೊಟ್ಟಿಗೆ ಸ್ಥಳಾಂತರಿಸಲು ಕೋರಿದ್ದಾರೆ. ಅನುಮತಿಗಾಗಿ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ' ಎನ್ನುತ್ತಾರೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿ ಲಕ್ಷ್ಮಣ.
ಎತ್ತಿನಹೊಳೆ ಜಾರಿ ಸುಲಭ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿವ ನೀರು ಒದಗಿಸುವ ಉದ್ದೇಶಿತ ಎತ್ತಿನಹೊಳೆ ಯೋಜನೆಗೆ ಡಾ.ಕಸ್ತೂರಿ ರಂಗನ್ ವರದಿಯಿಂದ ತೊಡಕಾಗದು. ಯಾಕೆಂದರೆ ನದಿ ತಿರುವು ಯೋಜನೆ ಕುಡಿವ ನೀರಿನ ಉದ್ದೇಶಕ್ಕೆ ಎಂದು ಸರ್ಕಾರ ಹೇಳಿರುವುದರಿಂದ ಇಲ್ಲಿ ನಿರಾಕ್ಷೇಪಣಾ ಪತ್ರ, ಪರವಾನಗಿ ನೀಡಿಕೆಯಲ್ಲಿ ನಿಯಮದ ತೊಡಕು ಉಂಟಾಗದು ಎನ್ನುವುದು ಅಧಿಕಾರಿಗಳ ಅಭಿಮತ.