ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನ ಡಿ.1ರಂದು
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ನಡೆಯುವ ಸರ್ವಧರ್ಮ ಸಮ್ಮೇಳನದ 81ನೇ ಅಧಿವೇಶನವು ಡಿ.1ರಂದು ನಡೆಯಲಿದ್ದು, ಕಾನೂನು ಸಚಿವ ಟಿ.ಬಿ. ಜಯಚಂದ್ರ ಉದ್ಘಾಟಿಸಲಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಳೆಹೊಸೂರು ಶ್ರೀ ದಿಂಗಾಲೇಶ್ವರ ಮಠದ ಶ್ರೀ ಮ.ನಿ.ಪ್ರ. ಶ್ರೀ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಧರ್ಮಗಳ ಬಗ್ಗೆ ಮೈಸೂರಿನ ನಿವೃತ್ತ ಪ್ರಾಧ್ಯಾಪಕಿ ಡಾ. ಸರಸ್ವತಿ ವಿಜಯಕುಮಾರ್, ಬೆಂಗಳೂರಿನ ಖ್ಯಾತ ಸಮಾಜ ಸೇವಕ ಎಂ. ಯಾಸಿನ್ ಮಲ್ಪೆ ಮತ್ತು ಗುಲ್ಬರ್ಗದ ಶಿಕ್ಷಣ ತಜ್ಞ ಫಾ. ಅನಿಲ್ ಪ್ರಸಾದ್ ಮಾತನಾಡಲಿದ್ದಾರೆ.
ಡಿ.2ಕ್ಕೆ ಧರ್ಮಸ್ಥಳ ಸಾಹಿತ್ಯ ಸಮ್ಮೇಳನ: ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಡಿ.2ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ 81ನೇ ಅಧಿವೇಶನದಲ್ಲಿ ಕನ್ನಡದ ಖ್ಯಾತ ಸಾಹಿತಿಗಳಾದ ಡಾ. ವೀಣಾ ಶಾಂತೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಣ ತಜ್ಞರೂ ಆಗಿರುವ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದ ಗೌಡ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಖ್ಯಾತ ಟಿ.ವಿ. ಕಲಾವಿದೆ ಹಾಗೂ ನ್ಯಾಯವಾದಿ ಮಾಳವಿಕ ಅವಿನಾಶ್, ಪತ್ರಕರ್ತ ಪ್ರೊ. ರವೀಂದ್ರ ರೇಷ್ಮೆ ಮತ್ತು ಚಿತ್ರದುರ್ಗದ ಪ್ರಾಧ್ಯಾಪಕಿ ತಾರಿಣಿ ಶುಭದಾಯಿನಿ ಅವರು ಸಾಹಿತ್ಯ ಉಪನ್ಯಾಸ ಮಾಡಲಿದ್ದಾರೆ.