ಟಾಗೋರ್ ಪಾತ್ರದಲ್ಲಿ ಸಚಿವ ಅಭಯಚಂದ್ರ ಜೈನ್!
ಮೂಲ್ಕಿ: ರಾಜ್ಯ ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಬೆಳ್ಳಿತೆರೆಗಾಗಿ ಬಣ್ಣ ಹಚ್ಚಲಿದ್ದಾರೆ, ಅವರು ನಟಿಸಲಿರುವುದು ರವೀಂದ್ರನಾಥ ಟಾಗೋರ್ ಪಾತ್ರದಲ್ಲಿ.
ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಆಧರಿಸಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ತುಳು ಚಲನಚಿತ್ರದ ಚಿತ್ರೀಕರಣ ಡಿ.15ರಂದು ಆರಂಭಗೊಳ್ಳಲಿದ್ದು ಇದರಲ್ಲಿ ಸಚಿವ ಜೈನ್ ನಟಿಸಲಿದ್ದಾರೆ.
ಮೂಲ್ಕಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ, ನಿರ್ದೇಶಕ, ಸ್ಟಂಟ್‌ಮಾಸ್ಟರ್, ನಾಯಕ ನಟ ರಾಜೇಶ್ ಕೋಟ್ಯಾನ್, ಚಿತ್ರ ಏಪ್ರಿಲ್‌ನಲ್ಲಿ ತೆರೆ ಕಾಣಲಿದೆ. ಕಿರುತೆರೆ ನಟ ವೆಂಕಟಾದ್ರಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪಾತ್ರ ನಿರ್ವಹಿಸಲಿದ್ದು, ಚಿನ್ನಾರಿಮುತ್ತ ಖ್ಯಾತಿಯ ವಿಜಯ ರಾಘವೇಂದ್ರ, ಸೂರ್ಯೋದಯ, ಭೂಮಿಕಾ, ಸಂಗೀತಾ ಶೆಟ್ಟಿ, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್ ಮುಂತಾದ ಖ್ಯಾತ ನಟರು ಹಾಗೂ ಜಯ ಸಿ. ಸುವರ್ಣ ಸೇರಿದಂತೆ ಸ್ಥಳೀಯ ಗಣ್ಯರು ಪಾತ್ರ ನಿರ್ವಹಿಸಲಿದ್ದಾರೆ ಎಂದರು.