ಬೆಳ್ಳಾರೆ: ಸಿಡಿಲು ಬಡಿದು ಮನೆಗೆ ಹಾನಿ
ಸುಳ್ಯ: ಬೆಳ್ಳಾರೆ ಸಮೀಪದ ಕೊಳಂಬಳ ಬೊಳಿಯಮೂಲೆ ಎಂಬಲ್ಲಿ ಮನೆಯೊಂದಕ್ಕೆ ಸಡಿಲು ಬಡಿದು ಮನೆ ಭಾಗಶಃ ಹಾನಿಗೊಂಡ ಘಟನೆ ವರದಿಯಾಗಿದೆ.
ಸೋಮವಾರ ಸಂಜೆ ಬೊಳಿಯಮೂಲೆಯ ಲಿಂಗಪ್ಪ ಶೆಟ್ಟಿ ಎಂಬವರ ಮನೆಗೆ ಸಿಡಿಲು ಬಡಿಯಿತು. ಲಿಂಗಪ್ಪರ ಪತ್ನಿ ಪುಷ್ಪಾವತಿ ಮತ್ತು ಅವರ ಮಗು ಬೀಡಿ ಕೊಡಲೆಂದು ಹೊರಗೆ ಹೋಗಿದ್ದರು. ಅವರು ಮನೆಗೆ ವಾಪಾಸಾಗುತ್ತಿದ್ದಂತೆ ಮನೆಗೆ ಸಿಡಿಲು ಬಡಿದು ವಯರಿಂಗ್ ಪೂರ್ತಿ ಸುಟ್ಟು ಹೋಗಿದ್ದು ವಿದ್ಯುತ್ ಮೀಟರ್ ಬೋರ್ಡ್ ಪುಡಿ ಪುಡಿಯಾಗಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳೂ ಸುಟ್ಟು ಹೋಗಿವೆ.
ಸಿಡಿಲು ಬಡಿದು ಕೃಷಿ ದಾಸ್ತಾನು ಕೊಠಡಿ ಭಸ್ಮ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಗೋಳಿತೊಟ್ಟು ಗ್ರಾಮದ ಕೊಂಕೋಡಿ ಎಂಬಲ್ಲಿ ಸಿಡಿಲು ಬಡಿದು ಕೃಷಿ ದಾಸ್ತಾನು ಕೊಠಡಿ ಅಗ್ನಿಗಾಹುತಿಯಾದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಎಚ್. ಅಹಮ್ಮದ್ಗೆ ಸೇರಿದ ಈ ದಾಸ್ತಾನು ಕೊಠಡಿಯಲ್ಲಿ ರಬ್ಬರ್, ಅಡಕೆ, ತೆಂಗು ಮೊದಲಾದ ಕೃಷಿ ಉತ್ಪನ್ನಗಳನ್ನು ದಾಸ್ತಾನು ಇರಿಸಲಾಗಿದ್ದು, ಸಿಡಿಲಾಘಾತದಿಂದ ಇಡೀ ದಾಸ್ತಾನು ಕೊಠಡಿಯೇ ಸುಟ್ಟು ಹೋಗಿದೆ. ಇದರಿಂದಾಗಿ ಲಕ್ಷಾಂತರ ರು. ನಷ್ಟ ಅಂದಾಜಿಸಲಾಗಿದೆ. ಅಗ್ನಿಶಾಮಕ ದಳ ರಾತ್ರಿಯೇ ಬೆಂಕಿ ನಂದಿಸಿತು.
ಹೃದಯಾಘಾತ: ಮಹಿಳೆ ಸಾವು
ಬಂಟ್ವಾಳ: ಸಿಡಿಲಿನ ತೀವ್ರತೆಗೆ ವೃದ್ಧ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ಸಂಜೆ ತಾಲೂಕಿನ ಮುಲಾರಪಟ್ನದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಹಲೀಮಮ್ಮ (55) ಮೃತರು. ಇವರು ಮಂಗಳವಾರ ಸಂಜೆ ತನ್ನ ಮನೆಯ ಕಿಟಕಿಯ ಬದಿಯಲ್ಲಿ ನಮಾಜ್ ಸಲ್ಲಿಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಸಿಡಿಲು ಬಡಿದ ಸಂದರ್ಭ ಇವರು ನಮಾಜ್ ಮಾಡುತ್ತಿದ್ದ ಚಾಪೆಗೆ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬಂಟ್ವಾಳ ತಹಸೀಲ್ದಾರ್ ಮಲ್ಲೇಸ್ವಾಮಿ ಸ್ಥಳೀಯ ಗ್ರಾಮಕರಣಿಕರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ. ಸಿಡಿಲಿನ ತೀವ್ರತೆಗೆ ಈ ಹೃದಯಾಘಾತ ಸಂಭವಿಸಿದೆ ಎಂದು ತಹಸೀಲ್ದಾರ್ ಪತ್ರಿಕೆಗೆ ತಿಳಿಸಿದ್ದಾರೆ.