ಶ್ರೀ ಕ್ಷೇತ್ರ ಧರ್ಮಸ್ಥಳ ಸಿಬ್ಬಂದಿ, ಅಭಿಮಾನಿಗಳಿಂದ ಪ್ರತಿಭಟನೆ
ಬೆಳ್ತಂಗಡಿ: ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅವರ ನೌಕರ ವೃಂದದ ವಿರುದ್ಧ ಆಗುತ್ತಿರುವ ದೌರ್ಜನ್ಯಗಳ ತನಿಖೆಯಲ್ಲಿ ಸಮಾಜಘಾತುಕ ಶಕ್ತಿಗಳ ಪ್ರಭಾವಕ್ಕೆ ಒಳಪಟ್ಟು ಪೊಲೀಸ್ ಇಲಾಖೆ ತೀರಾ ಉದಾಸೀನತೆಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿಯ ತಾಲೂಕು ಕಚೇರಿ ಮೈದಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಇದರ ಪರಿವಾರ ಸಂಸ್ಥೆಗಳ ಸಿಬ್ಬಂದಿ ಹಾಗೂ ಅಭಿಮಾನಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕ್ಷೇತ್ರದ ಸಿಬ್ಬಂದಿ ಬಾಲಕೃಷ್ಣ ಪೂಜಾರಿ ಅವರ ವಾಹನ ಅಪಘಾತವಾದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಯಾರದೋ ಒತ್ತಡಕ್ಕೆ ಮಣಿದು ಅವರ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಬಾಲಕೃಷ್ಣ ಹಾಗೂ ಇತರರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನ್ಯಾಯವಾದಿ ಸುಬ್ರಹ್ಮಣ್ಯ ಅಗರ್ತ, ಜನ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಪೊಲೀಸ್ ಸೇರಿದಂತೆ ಎಲ್ಲಾ ಇಲಾಖೆಯುವ ನಿಷ್ಕ್ರೀಯವಾಗಿದ್ದು, ಯಾರದೋ ಭಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆಯನ್ನು ಹೊಂದಿರುವ ಕೆಲ ಶಕ್ತಿಗಳು ಎಲ್ಲವನ್ನೂ ತಮ್ಮ ನಿಯಂತ್ರಣಕ್ಕೆ ತಂದುಕೊಳ್ಳುವ ಪ್ರಯತ್ನ ನಡೆಸುತ್ತಿವೆ. ಇನ್ನೂ ಇದೇ ರೀತಿ ಮುಂದುವರಿದರೆ ಅಂತಹ ಶಕ್ತಿಗಳಿಗೆ ನಾವೇ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಉಜಿರೆ ಎಸ್ಡಿಎಂ ಕಾಲೇಜಿನ ಪ್ರಾಧ್ಯಾಪಕ ಕುಮಾರ ಹೆಗ್ಡೆ, ತಾ.ಪಂ.ಅಧ್ಯಕ್ಷ ಕೇಶವ ಎಂ. ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ಧರ್ಮಸ್ಥಳ ಗ್ರಾ.ಪಂ. ಸದಸ್ಯ ಚಂದನ್ ಕಾಮತ್ ವಹಿಸಿದ್ದರು. ಜಿ.ಪಂ. ಮಾಜಿ ಉಪಾಧ್ಯಕ್ಷೆ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶ್ರೀನಿವಾಸ್ ಮನವಿ ಸ್ವೀಕರಿಸಿದರು. ಡಿವೈಎಸ್ಪಿ ಎಚ್ಟಿ ಮಂಡೋನ್ಸಾ ನೇತೃತ್ವದಲ್ಲಿ ಬೆಳ್ತಂಗಡಿ ಹಾಗೂ ಬಂಟ್ವಾಳ ವೃತ್ತ ನಿರೀಕ್ಷಕರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
ಪೊಲೀಸರೇ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ನಿಮ್ಮ ಖಾಕಿ ತೆಗೆದು ಮನೆಗೆ ಹೋಗಿ. ಯಾರದೋ ಭಯಕ್ಕೆ ತುತ್ತಾಗಿ ಮನಬಂದಂತೆ ಕೇಸುಗಳನ್ನು ಹಾಕಬೇಡಿ. ಸಾತ್ವಿಕ ಜನ ಇದನ್ನು ಒಪ್ಪಲು ಸಾಧ್ಯವಿಲ್ಲ.