ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ
ಮಂಗಳೂರು: ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ ಕಾರ್ಯಕ್ಕೆ ಸರ್ವ ಶಿಕ್ಷಣ ಅಭಿಯಾನ ಇಲಾಖೆ ಮುಂದಾಗಿದ್ದು, ಶಾಲೆಗೆ ಮಾತ್ರವಲ್ಲ ಮಕ್ಕಳಿರುವ ಪ್ರತಿ ಮನೆಗೂ ಭೇಟಿ ನೀಡಲಿದೆ. ಈ ಕಾರ್ಯಕ್ರಮ ನವೆಂಬರ್ 6 ರಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯಲಿದೆ.
ರಾಜ್ಯದಲ್ಲಿ 6ರಿಂದ 14 ವರ್ಷವರೆಗಿನ ಶಾಲೆಯಿಂದ ಹೊರಗುಳಿದ ಮಕ್ಕಳು 2.50 ಲಕ್ಷಕ್ಕೂ ಅಧಿಕ ಎಂದು ಹೈಕೋರ್ಟ್ ಹೇಳಿದ್ದರೆ, ಶಿಕ್ಷಣ ಇಲಾಖೆ ಅಂಥ ಮಕ್ಕಳ ಸಂಖ್ಯೆ ಕೇವಲ 50 ಸಾವಿರ ಎಂದಿತ್ತು. ಈ ಮಕ್ಕಳನ್ನು ಪತ್ತೆ ಮಾಡಿ ನಿಖರ ಅಂಕಿ-ಅಂಶ ಒದಗಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ ಕಾರ್ಯಕ್ಕೆ ಕೈಹಾಕಿದೆ.
1ರಿಂದ 9ನೇ ತರಗತಿವರೆಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ ಎರಡು ವಿಧದಲ್ಲಿ ನಡೆಯಲಿದೆ. ಕ್ಲಸ್ಟರ್ ಮಟ್ಟದಲ್ಲಿ ಈ ಗಣತಿ ನಡೆಯುತ್ತದೆ. ನ.6 ಮತ್ತು 7ರಂದು ಶಿಕ್ಷಣ ಇಲಾಖೆ ಗಣತಿ ತಂಡ ಅನುದಾನಿತ, ಅನುದಾನ ರಹಿತ ಹೀಗೆ ಎಲ್ಲ ಶಾಲೆಗೆ ಭೇಟಿ ನೀಡಲಿದೆ. ಶಿಕ್ಷಕರಲ್ಲದೆ ಎನ್‌ಜಿಒಗಳು ಕೂಡ ಇವರಿಗೆ ಸಾಥ್ ನೀಡಲಿದ್ದಾರೆ. ಯಾವ ವಿದ್ಯಾರ್ಥಿ ಎಷ್ಟು ಸಮಯದಿಂದ ತರಗತಿಗೆ ಗೈರಾದ ಬಗ್ಗೆ ಹಾಜರಿ ಪುಸ್ತಕ ತೆರೆದು ನೋಡಲಿದೆ. ಆ ವಿದ್ಯಾರ್ಥಿ ಶಾಲೆಯಿಂದ ಹೊರಗುಳಿಯಲು ಕಾರಣವಾದ ಅಂಶದ ಬಗ್ಗೆ ಶಿಕ್ಷಕರರು, ಮುಖ್ಯಗುರುಗಳಲ್ಲಿ ಚರ್ಚೆ ನಡೆಸಲಿದೆ. ಒಟ್ಟಾರೆ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ಅಂಕಿ-ಅಂಶ ಪಟ್ಟಿ ಮಾಡಲಿದೆ.
ನ.13ರಿಂದ 17ರವರೆಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗೆ ಈ ತಂಡ ತೆರಳಲಿದೆ. ವಿದ್ಯಾರ್ಥಿ ಶಾಲೆಗೆ ಹೋಗದಿರಲು ಇರುವ ಕಾರಣ, ವಿದ್ಯಾರ್ಥಿಯನ್ನು ಹತ್ತಿರದ ಶಾಲೆಗೆ ಸೇರಿಸುವುದು ಮೊದಲಾದ ಪೂರಕ ಕ್ರಮಗಳನ್ನು ತಂಡ ಕೈಗೊಳ್ಳಲಿದೆ. ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಚಿಣ್ಣರ ಅಂಗಳ, ಟೆಂಟ್ ಶಾಲೆ ಕಾರ್ಯಕ್ರಮ ಹಮ್ಮಿಕೊಂಡರೂ ಶಾಲೆಗೆ ಸೇರಿಸಿ ಹಾಜರಾಗದಿರುವ ಹಾಗೂ ಶಾಲೆಗೆ ಸೇರಿಸದೇ ಇರುವ ಮಕ್ಕಳನ್ನು ಪತ್ತೆ ಮಾಡುವುದು ಈ ತಂಡದ ಕಾರ್ಯ.
7 ದಿನ ಹಾಜರಾಗದಿದ್ದರೆ ಪರಿಗಣನೆ: ಶಾಲೆಯಿಂದ ಹೊರಗುಳಿಯುವುದೆಂದರೆ ಈ ಮೊದಲು ಆರು ತಿಂಗಳು ಎಂದು ಪರಿಗಣಿಸಲಾಗಿತ್ತು. ನಂತರ ಅದನ್ನು ಎರಡು ತಿಂಗಳಿಗೆ ಇಳಿಸಲಾಯಿತು. ಈಗ ಹೊಸ ಆದೇಶ ಪ್ರಕಾರ ಏಳು ದಿನಕ್ಕೆ ಇಳಿಕೆ ಮಾಡಲಾಗಿದೆ. ವಿದ್ಯಾರ್ಥಿಯೊಬ್ಬ ಅನಧಿಕೃತವಾಗಿ ನಿರಂತರ 7 ದಿನ ತರಗತಿಗೆ ಹಾಜರಾಗದಿದ್ದರೆ ಅದನ್ನು ಶಾಲೆಯಿಂದ ಹೊರಗುಳಿದದ್ದು ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ಅಂಥ ವಿದ್ಯಾರ್ಥಿಗಳ ಪಟ್ಟಿಯನ್ನು ಮಾಡಿ ಮರಳಿ ಶಾಲೆಗೆ ಕರೆತರುವ ಪ್ರಯತ್ನ ಮಾಡಲಿದೆ.
ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸುವುದು ಶಿಕ್ಷಣ ಇಲಾಖೆಯ ಗುರಿ. ಅದಕ್ಕಾಗಿ ಈಗಾಗಲೇ ನಾಲ್ಕು ವಿಭಾಗಗಳಲ್ಲಿ ಕ್ಷೇತ್ರ ಸಂಪನ್ಮೂಲ ಇಲಾಖೆ ಸಿಬ್ಬಂದಿಗೆ ಗಣತಿ ಕಾರ್ಯ ತರಬೇತಿ ನೀಡಲಾಗಿದೆ. ಗಣತಿ ವೇಳೆ ಕಡ್ಡಾಯ ಶಿಕ್ಷಣ ಕಾಯ್ದೆಯನ್ವಯ ಮಕ್ಕಳ ದಾಖಲಾತಿ ಪರಿಶೀಲನೆ ನಡೆಯಲಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿಗೆ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ 1ರಿಂದ 8ನೇ ತರಗತಿವರೆಗೆ 81 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. 9ರಿಂದ 14 ವರ್ಷದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 4,498. ಇದನ್ನು ಶೂನ್ಯಕ್ಕೆ ಇಳಿಸಲು ಎಲ್ಲ ಪ್ರಯತ್ನ ನಡೆಸಲಾಗುವುದು.
-ಶಿವಪ್ರಕಾಶ್, ಸಹಸಂಯೋಜಕ, ಸರ್ವಶಿಕ್ಷಣ ಅಭಿಯಾನ, ದ.ಕ.ಜಿಲ್ಲೆ
- ಆತ್ಮಭೂಷಣ್