ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಟಿಮಿ ಕೂರ್ಮ ಫೆಸ್ಟಿವಲ್‌ಗೆ ಚಾಲನೆ

Srinivasa Murthy VN
Updated On : 19 Oct 2013, 12:42 pm

ಕ.ಪ್ರ. ವಾರ್ತೆ ಕಾರವಾರ ಅ.18
ರಾಜ್ಯದಲ್ಲೇ ಮೊದಲ ಬಾರಿಗೆ ಕಾರವಾರದಲ್ಲಿ ಏರ್ಪಡಿಸಿರುವ ಮೂರು ದಿನಗಳ ಕಾಲದ ಟಿಮಿ ಕೂರ್ಮ ಫೆಸ್ಟಿವಲ್ (ತಿಮಿಂಗಿಲ-ಕಡಲಾಮೆ ಹಬ್ಬ) ನಗರದ ವಿಜ್ಞಾನ ಕೇಂದ್ರದಲ್ಲಿ ವಿಧ್ಯುಕ್ತವಾಗಿ ಆರಂಭಗೊಂಡಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಸಸಿಗೆ ನೀರುಣಿಸುವ ಮೂಲಕ ಹಬ್ಬವನ್ನು ಉದ್ಘಾಟಿಸಿದರು.
ದಿಕ್ಸೂಚಿ ಭಾಷಣ ಮಾಡಿದ ಜಿಲ್ಲಾ ವಿಜ್ಞಾನ ಕೇಂದ್ರದ ಡಾ. ವಿ.ಎನ್. ನಾಯಕ, ಕರಾವಳಿ ಪ್ರದೇಶಗಳ ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆ ಇಲ್ಲಿನ ಮೀನುಗಾರಿಕೆಯಂಥ ಸಾಂಪ್ರದಾಯಿಕ ಜೀವನೋಪಾಯಗಳ ಸುಸ್ಥಿರತೆಗೆ ಅತ್ಯಂತ ಅಗತ್ಯ. ಇದರಲ್ಲಿ ಎಲ್ಲ ಸಮುದಾಯಗಳು ಮತ್ತು ಸಂಘ ಸಂಸ್ಥೆಗಳು ಹೊಣೆಗಾರಿಕೆಯಿಂದ ಪಾಲ್ಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಮುಖ್ಯ ಅತಿಥಿಗಳಾಗಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಎಸ್. ರಮೇಶ, ಹೊನ್ನಾವರ ಅರಣ್ಯ ವಿಭಾಗದಲ್ಲಿ ಇಲಾಖೆಯ ಮೂಲಕ ಗ್ರಾಮ ಅರಣ್ಯ ಸಮಿತಿಗಳ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತಿರುವ ಪರಿಸರ ಪ್ರವಾಸೋದ್ಯಮ, ಕಾಂಡ್ಲಾ ಸಂರಕ್ಷಣೆ, ಔಷಧಿಯ ಸಸ್ಯಗಳ ಸಂರಕ್ಷಣೆ ಇತ್ಯಾದಿ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಮೀನುಗಾರಿಕಾ ಇಲಾಖೆಯ ವೆಂಕಟರಾಮ ಹೆಗಡೆ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಖ್ಯ ಸಂಘಟಕರಾದ ಟೆರಾ ಮರೀನ್ ಸಂಶೋಧನಾ ಸಂಸ್ಥೆಯ ಡಾ. ಆನಿ ಕುರಿಯನ್ ಸ್ವಾಗತಿಸಿದರು. ಡಾ. ಮೃದುಲಾ ಶ್ರೀನಿವಾಸನ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಕಾಲೇಜು ಪ್ರಾಧ್ಯಾಪಕ ಡಾ. ಜಯಕರ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ರಿದಂ ಹಾರ್ಟ್‌ಬೀಟ್ಸ್ ನೃತ್ಯ ತಂಡದ ಸದಸ್ಯರು ಪರಿಸರದ ವಿಷಯಗಳಿಗೆ ಸಂಬಂಧಿಸಿದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಅ.18ರಿಂದ 20ರ ತನಕ ನಡೆಯುವ ಈ ಕಾರ್ಯಕ್ರಮದಲ್ಲಿ ಭಾರತೀಯ ನೌಕಾ ದಳ, ವನ್ಯ ಜೀವಿ ಮತ್ತು ಪರಿಸರ ಆಸಕ್ತರು, ಶಿಕ್ಷಕರು, ಸ್ಥಳೀಯ ಜನರು ಭಾಗವಹಿಸಿದ್ದಾರೆ.  ಈ ಕಾರ್ಯಕ್ರಮವು ತಜ್ಞರ ಉಪನ್ಯಾಸ, ಕಾಂಡ್ಲಾ ಮತ್ತು ಡಾಲ್ಫಿನ್‌ಗಳ ವೀಕ್ಷಣೆ, ಪಶ್ಚಿಮಘಟ್ಟದ ಅಧ್ಯಯನಗಳಂಥ ಚಟುವಟಿಕೆ ಒಳಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement