ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹೊನ್ನಾವರ ಮೀನುಗಾರರ ಮೇಲೆ ದ.ಕ. ಮೀನುಗಾರರಿಂದ ಹಲ್ಲೆ

Srinivasa Murthy VN
Updated On : 22 Oct 2013, 1:21 am

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೆಲವು ಮೀನುಗಾರರ ಮೇಲೆ ಹೊನ್ನಾವರದಲ್ಲಿ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಬುಲ್ ಟ್ರಾಲ್ ನಡೆಸುವ ಮೀನುಗಾರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದ ಜಿಲ್ಲೆಯ ಮೀನುಗಾರರು ಕಂಗಾಲಾಗಿದ್ದಾರೆ. ಇದರಿಂದ ಈಗಾಗಲೇ ಜಿಲ್ಲೆಯ ಭಟ್ಕಳ ಹೊನ್ನಾವರಗಳಲ್ಲಿ ಮೀನುಗಾರಿಕೆ ನಿಂತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಸಂಪೂರ್ಣವಾಗಿ ಮೀನುಗಾರಿಕೆ ನಿಲ್ಲುವ ಸಾಧ್ಯತೆ ಇದೆ.
ಉಡುಪಿ, ಮಂಗಳೂರು ಜಿಲ್ಲೆಯ ಮೀನುಗಾರರರು ಜಿಲ್ಲೆಯ ಕಡಲ ತೀರಕ್ಕೆ ಬಂದು ಬುಲ್ ಟ್ರಾಲ್ ಹಾಗೂ ರಾತ್ರಿ ಮೀನುಗಾರಿಕೆ ನಡೆಸುತ್ತಿದ್ದರು. ಇದರಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದ ಜಿಲ್ಲೆಯ ಮೀನುಗಾರರು ಸತತವಾಗಿ ಬುಲ್ ಟ್ರಾಲ್ ಮೀನುಗಾರರನ್ನು ವಿರೋಧಿಸುತ್ತ ಬಂದಿದ್ದರು. ಆದರೆ ಭಾನುವಾರ ಹೊನ್ನಾವರದ ಕಾಸರಕೋಡ ಟೊಂಕಾ ಕಡಲತೀರದಲ್ಲಿ ಉಡುಪಿ ಹಾಗೂ ಮಂಗಳೂರು ಮೂಲದ ಮೀನುಗಾರರು ಬುಲ್ ಟ್ರಾಲರ್ ಮೂಲಕ ಡಿಪ್ ಸೀ ಮೀನುಗಾರಿಕೆ ನಡೆಸುತ್ತಿದ್ದರು. ಇದನ್ನು ಜಿಲ್ಲೆಯ ಪರ್ಶಿಯನ್ ಹಾಗೂ ಟ್ರಾಲರ್ ಮೀನುಗಾರರು ಪ್ರಶ್ನಿಸಿದ್ದಾರೆ. ನಂತರ ಮಲ್ಪೆಯ ಮೀನುಗಾರರು ತಮ್ಮ ಬಳಿಯಿದ್ದ ವೈರ್‌ಲೆಸ್ ಮುಖಾಂತರ ಕರೆ ಮಾಡಿ ಹತ್ತಾರು ಡಿಪ್ ಸೀ ಮೀನುಗಾರರನ್ನು ಕರೆಸಿಕೊಂಡಿದ್ದಾರೆ. ಸ್ಥಳೀಯ ಬೋಟ್‌ಗಳನ್ನು ಸುತ್ತುವರಿದ ಡಿಪ್ ಸೀ ಮೀನುಗಾರರರು ಕತ್ತಿ, ಮಚ್ಚುಗಳಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ ತಮ್ಮ ಬಳಿಯಿದ್ದ ಸ್ಟೀಲ್ ಬಾಡಿಯ ಶಿವಧಾಮಿನಿ ಹಾಗೂ ಶಿವಧಾಮ ಬೋಟ್‌ಗಳಿಂದ ಸ್ಥಳೀಯ ಮೀನುಗಾರರ ಕಟ್ಟಿಗೆ ಬೋಟ್‌ಗಳಿಗೆ ಡಿಕ್ಕಿ ಹೊಡೆಸಿ ಹಾನಿ ಉಂಟು ಮಾಡಿದ್ದಾರೆ. ಇದರಿಂದ ಹೊನ್ನಾವರದ 7 ಮೀನುಗಾರರು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಾತಿ-2, ಶ್ರೀಶಾಂತಿ, ಕನ್ಯಾಕುಮಾರಿ ಪರ್ಶಿಯನ್ ಬೋಟ್‌ಗಳಿಗೆ ಹಾನಿಯಾಗಿದ್ದು, ಅಪಾರ ಹಾನಿಯಾಗಿದೆ. ಹೊನ್ನಾವರ ಪರ್ಶಿಯನ್ ಮೀನುಗಾರರ ಸಂಘದ ವತಿಯಿಂದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement