'ಇಎಸ್‌ಐ ಡಿಸ್ಪೆನ್ಸರಿ ಅಭಿವೃದ್ಧಿಗೆ ರಾಜ್ಯ ಪ್ರಸ್ತಾವನೆ ನೀಡಲಿ'
ಮಂಗಳೂರು: ರಾಜ್ಯದ ಎಲ್ಲ ಇಎಸ್‌ಐ ಡಿಸ್ಪೆನ್ಸರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ವ್ಯವಸ್ಥೆ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಿದರೆ ತಕ್ಷಣ ಹಣ ಬಿಡುಗಡೆ ಮಾಡುವುದಾಗಿ ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ ಕೋಡಿಕುನ್ನಿಲ್ ಸುರೇಶ್ ಹೇಳಿದರು.
ಕಾರ್ಮಿಕರ ವಿಮಾ ನಿಗಮ ಉಪಪ್ರಾದೇಶಿಕ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ಇಎಸ್‌ಐ ಪ್ರಾಥಮಿಕ ಆಸ್ಪತ್ರೆ (ಡಿಸ್ಪೆನ್ಸರಿ) ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ರಾಜ್ಯಗಳು ಆಸ್ಪತ್ರೆಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಿದರೆ, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ ಎಂದರು. 2025ರಲ್ಲಿ ದೇಶದ ಎಲ್ಲ ಕಾರ್ಮಿಕರಿಗೂ ವಿಮಾ ಸೌಲಭ್ಯ ತಲುಪಿಸುವ ಗುರಿ ಹೊಂದಲಾಗಿದೆ. ಕೇರಳದಲ್ಲಿ ಆರ್‌ಎಸ್‌ಬಿವೈ ಯೋಜನೆ ಉತ್ತಮವಾಗಿದೆ. ಕರ್ನಾಟಕದಲ್ಲಿಯೂ ಆರ್‌ಎಸ್‌ಬಿವೈ ಯೋಜನೆಯನ್ನು ಅಸಂಘಟಿತ ಕಾರ್ಮಿಕರಿಗೆ ಕಲ್ಪಿಸಲಾಗುವುದು ಎಂದರು.
ರಾಜ್ಯಕ್ಕೆ 2 ಸಾವಿರ ಕೋಟಿ: ಕರ್ನಾಟಕದಲ್ಲಿ ಇಎಸ್‌ಐ ಆಸ್ಪತ್ರೆಗಳಿಗಾಗಿ 2 ಸಾವಿರ ಕೋಟಿ ವಿನಿಯೋಗಿಸಲಾಗಿದೆ. ದೇಶದಲ್ಲಿ ಅತಿ ಹೆಚ್ಚಿನ ಹಣವನ್ನು ರಾಜ್ಯಕ್ಕೇ ನೀಡಲಾಗಿದೆ. ಅತಿ ಹೆಚ್ಚಿನ ಇಎಸ್‌ಐ ಕಚೇರಿಗಳು ಕಾರ್ಯಚರಿಸುತ್ತಿವೆ. ಕೇಂದ್ರದಲ್ಲಿ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕ ಸಚಿವರಾಗಿ ಕೆಲಸ ಮಾಡಿರುವುದು ಇದಕ್ಕೆ ಕಾರಣ ಎಂದರು.
ದೇಶದಲ್ಲಿ 1.89 ಕೋಟಿ ಕಾರ್ಮಿಕ ಕುಟುಂಬಗಳು ನಿಗಮದ ಉಪಯೋಗ ಪಡೆಯುತ್ತಿದೆ. ರಾಜ್ಯದಲ್ಲಿ 17.70 ಲಕ್ಷ ಕಾರ್ಮಿಕರು 50 ಸಾವಿರ ಫ್ಯಾಕ್ಟರಿಗಳು ಇಎಸ್‌ಐ ಸ್ಕೀಮ್‌ಗೆ ಸೇರುತ್ತವೆ. ಕಟ್ಟಡ ಕಾರ್ಮಿಕರನ್ನು ಇಎಸ್‌ಐ ವ್ಯಾಪ್ತಿಗೆ ಶೀಘ್ರವೇ ಸೇರಿಸಲಾಗುವುದು. ರಾಜ್ಯದಲ್ಲಿ ವಿಮೆದಾರರು 40 ಶಾಖೆ ಕಚೇರಿಗಳ ಮೂಲಕ ಹಣಕಾಸು ವ್ಯವಹಾರ ನಡೆಸುತ್ತಾರೆ. ಏಪ್ರಿಲ್ ಮತ್ತು ಮೇನಲ್ಲಿ 50 ಸಾವಿರ ಮಂದಿ 10 ಕೋಟಿ ಹಣ ಪಡೆದುಕೊಂಡಿದ್ದಾರೆ. 101 ಇಎಸ್‌ಐ ಚಿಕಿತ್ಸಾಲಯಗಳು ಮತ್ತು 9 ಇಎಸಐ ಆಸ್ಪತ್ರೆಗಳ ಮೂಲಕ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ಪೀಣ್ಯದಲ್ಲಿರುವ ಇಎಸ್‌ಐ ಆಸ್ಪತ್ರೆಯನ್ನು ಸ್ವತಃ ಇಎಸ್‌ಐ ನಿಗಮವೇ ನಡೆಸುತ್ತಿದೆ. ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರು ಅಧ್ಯಯನ ಮತ್ತು ಸಂಶೋಧನೆ ಕೇಂದ್ರಗಳು ರಾಜಾಜಿನಗರ ಇಎಸ್‌ಐ ಜತೆಗೆ ಕಾರ್ಯ ನಿರ್ವಹಿಸುತ್ತಿವೆ. 85 ಜನಪ್ರಿಯ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಹಣ ರಹಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಇಎಸ್‌ಐ ಜತೆ ಕೈ ಜೋಡಿಸಿವೆ ಎಂದರು.