ಪಿಂಚಣಿ ಕನಿಷ್ಠ ಮಿತಿ 1 ಸಾವಿರ: ಸಚಿವ ಸುರೇಶ್
ಮಂಗಳೂರು: ಕಾರ್ಮಿಕರಿಗೆ ತಿಂಗಳ ಪಿಂಚಣಿಯನ್ನು ಕನಿಷ್ಠ 1 ಸಾವಿರಕ್ಕೇರಿಸಲು ನಿರ್ಧರಿಸಲಾಗಿದೆ. ದೇಶಾದ್ಯಂತ ಸಮಾನ ಕನಿಷ್ಠ ಕೂಲಿ ವಿಧಿಸಲು ಕಾಯ್ದೆ ರೂಪಿಸಲಾಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ ಕೋಡಿಕುನಿಲ್ ಸುರೇಶ್ ಹೇಳಿದರು. ಪಿಂಚಣಿ ಮಿತಿ ಏರಿಕೆಗೆ ಹಣಕಾಸು ಸಚಿವಾಲಯ ತಕರಾರು ಎತ್ತಿದೆ. ಅದನ್ನು ಪರಿಹರಿಸಲು ಕ್ಯಾಬಿನೆಟ್‌ನಲ್ಲಿ ಚರ್ಚಿಸಲಿದ್ದೇವೆ. ನಂತರ ಅದನ್ನು ಜಾರಿಗೊಳಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈಗಿರುವ ಕನಿಷ್ಠ ದಿನಗೂಲಿ 115. ಹೊಸ ಕಾಯ್ದೆ ಜಾರಿಯಾದರೆ ಕೂಲಿ ಜತೆ ಡಿಎ ನೀಡುವುದು ಕಡ್ಡಾಯವಾಗಲಿದೆ. ಡಿಎಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರಿಷ್ಕರಿಸಬೇಕಾಗುತ್ತದೆ. ಸಮಾನ ಕನಿಷ್ಠ ಕೂಲಿ ಕಾಯ್ದೆ ಕಾನೂನು ಸಚಿವಾಲಯದ ಮುಂದಿದ್ದು, ಅಲ್ಲಿ ಅನುಮೋದನೆ ಸಿಕ್ಕಿದ ಬಳಿಕ ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದರು. ಇಎಸ್‌ಐ ಒಳಪಡುವ ಮಿತಿಯನ್ನು ಮಾಸಿಕ ವೇತನ 15 ಸಾವಿರದಿಂದ 25 ಸಾವಿರಕ್ಕೆ ಏರಿಸಲಾಗಿದೆ. ಇದರಿಂದ 22 ಲಕ್ಷ ಕಾರ್ಮಿಕರು ಹೆಚ್ಚುವರಿ ಸೇರ್ಪಡೆಯಾಗಿದ್ದಾರೆ. ಭವಿಷ್ಯ ನಿಧಿ (ಪಿಎಫ್) ಮಿತಿಯನ್ನು ಮಾಸಿಕ ವೇತನ 6,500ರಿಂದ 15 ಸಾವಿರಕ್ಕೆ ಏರಿಸಲಾಗಿದೆ ಎಂದರು.
ರಾಜ್ಯದಲ್ಲಿ ಕೊಡಗು, ಬೀದರ್ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಎಸ್‌ಐ ಆಸ್ಪತ್ರೆಗಳಿಲ್ಲ. ಉಳಿದ 27 ಜಿಲ್ಲೆಗಳಲ್ಲಿ ಇಎಸ್‌ಐ ಸೌಲಭ್ಯ ಕಲ್ಪಿಸಲಾಗಿದೆ. ಈ ಸೌಲಭ್ಯದಡಿ ಮಹಿಳೆಯರಿಗೆ 5 ಸಾವಿರ ಹೆರಿಗೆ ವೆಚ್ಚ, 82 ದಿನಗಳ ವೇತನ ಸಹಿತ ರಜೆ ನೀಡಲಾಗುವುದು ಎಂದರು.
ಕ್ರಿಕೆಟ್ ಬೆಟ್ಟಿಂಗ್: ಒಬ್ಬನ ಬಂಧನ, 53,000 ನಗದು ವಶ
ಬಿಜಾಪುರ: ಆಸ್ಟ್ರೇಲಿಯ- ಭಾರತ ನಡುವಿನ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಾವಳಿಯ ಸಂಬಂಧದಲ್ಲಿ ಬೆಟ್ಟಿಂಗ್ ನಡೆಸಿದ ಆರೋಪದ ಮೇರೆಗೆ ಪೊಲೀಸರು ಒಬ್ಬನನ್ನು ಬುಧವಾರ ರಾತ್ರಿ ಬಂಧಿಸಿದ್ದಾರೆ. ಮಠಪತಿ ಗಲ್ಲಿಯ ಅಮಿತಸಿಂಗ್ ಪಾಂಡುಸಿಂಗ್ ಹಲವಾಯಿ ಬಂಧಿತ ಆರೋಪಿ. ನಗರದ ಲಿಂಗದ ಗುಡಿ ರಸ್ತೆ ಬದಿ ಇರುವ ಅಣೆಪ್ಪನವರ ಶಶಿನಾಗ ಕಾಂಪ್ಲೆಕ್ಸ್‌ನ ಕೋಣೆಯೊಂದರಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದಾಗ ಈತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಬಂಧಿತ ಆರೋಪಿಯಿಂದ 1 ಟಿವಿ, 53,000 ನಗದು, ಎರಡು ಮೊಬೈಲ್ ವಶಪಡಿಕೊಳ್ಳಲಾಗಿದೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.