ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪೊಲೀಸರು ಜಾಸ್ತಿ ಮಾತನಾಡಬೇಡಿ, ಕೆಲ್ಸ ಮಾಡಿ

Srinivasa Murthy VN
Updated On : 28 Oct 2013, 11:51 am

ಪರಿಶಿಷ್ಟಜಾತಿ, ಪಂಗಡ ಕುಂದುಕೊರತೆ ನಿವಾರಣೆ ಸಭೆಯಲ್ಲಿ ಮಂಗಳೂರು ಕಮಿಷನರ್ ಮನೀಶ್ ಕರ್ಬಿಕರ್
ಮಂಗಳೂರು: ದೂರು ನೀಡಲು ಬಂದವರ ಬಳಿ ಪೊಲೀಸರು ಜಾಸ್ತಿ ಮಾತನಾಡಬೇಡಿ, ಸಲಹೆ ಸೂಚನೆ ನೀಡಬೇಡಿ. ನಿಮ್ಮ ಕೆಲಸ ಏನಿದ್ದರೂ ಕಡತಗಳಲ್ಲಿ ತೋರಿಸಿ ಎಂದು ಪೊಲೀಸ್ ಕಮಿಷನರ್ ಮನೀಶ್ ಕರ್ಬೀಕರ್ ಹೇಳಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕುರಿತು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಸಮಾಜದಲ್ಲಿ ಎಲ್ಲರೂ ಬುದ್ಧಿವಂತರಿದ್ದಾರೆ, ಅವರಿಗೆ ಹೇಗೆ ಬದುಕಬೇಕು ಎಂಬುದು ಗೊತ್ತಿದೆ, ಪೊಲೀಸರು ಹೇಳುವ ಅಗತ್ಯ ಇಲ್ಲ ಎಂದರು.
ಪೊಲೀಸ್ ಅಧಿಕಾರಿಗಳು ಠಾಣೆಗಳಲ್ಲಿ ದೂರು ನೀಡಲು ಬಂದ ದಲಿತ ಮುಖಂಡರ ಬಳಿ ಕೇವಲವಾಗಿ ಮಾತನಾಡುತ್ತಾರೆ, ಗದರುತ್ತಾರೆ, ಉಳಿದ ಜಾತಿಯವರ ಜತೆ ಹೊಂದಿಕೊಂಡು ಹೋಗಿ ಎಂದು ಹೇಳುತ್ತಾರೆ ಎಂಬಿತ್ಯಾದಿ ಸರಣಿ ಆರೋಪಗಳು ಕೇಳಿ ಬಂದಾಗ ಪೊಲೀಸ್ ಕಮಿಷನರ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೂರು ನೀಡಲು ಬಂದ ದಲಿತ ಮುಖಂಡರು ಪೊಲೀಸ್ ಠಾಣೆ ಒಳಗೆ ಅಧಿಕಾರಿಗಳ ಮುಂದೆಯೇ ಹೊಡೆದಾಡಿಕೊಂಡರು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಸುಧಾಕರ್ ವಿವರ ನೀಡಿದರು.
ಸದಾಶಿವ ಮತ್ತು ಲಿಂಗಪ್ಪ ನಂತೂರ್ ಠಾಣೆ ಒಳಗೆ ಗಲಾಟೆ ಮಾಡಿಕೊಂಡಿದ್ದಾರೆ ಎಂದು ಕಮಿಷನರ್ ಬಳಿ ತಿಳಿಸಿದರು. 'ಇಬ್ಬರ ಮೇಲೆ ತಕ್ಷಣ ಪ್ರಕರಣ ದಾಖಲಿಸಬೇಕಿತ್ತು' ಎಂದು ಕಮಿಷನರ್ ಸಲಹೆ ಮಾಡಿದರು. ಪಕ್ಕದ ಮನೆಯ ತೆಂಗಿನ ಕಾಯಿ ನಮ್ಮ ಕಂಪೌಂಡ್‌ಗೆ ಬೀಳುತ್ತದೆ, ಮರ ಕಡಿಯಬೇಕು ಎಂದು ಒಬ್ಬರು ದೂರಿದರು. ಪೊಲೀಸರು ತೆಂಗಿ ಮರ ಹೆಕ್ಕಲು, ಕಡಿಯಲು ಕಾನೂನಲ್ಲಿ ಅವಕಾಶ ಇಲ್ಲ ಎಂದು ಕಮಿಷನರ್ ಹೇಳಿದರು.
ಮಹಾನಗರ ಪಾಲಿಕೆಗೆ ದೂರು ನೀಡುವಂತೆ ಹಿಂಬರಹ ನೀಡಿರುವುದಾಗಿ ಪೊಲೀಸ್ ಇನ್‌ಸ್ಪೆಕ್ಟರ್ ಕಮಿಷನರ್‌ಗೆ ಮಾಹಿತಿ ನೀಡಿದರು.
ಸಹೋದರರ ಸವಾಲ್:  ಕೃಷ್ಣಪ್ಪ ಕೊಂಚಾಡಿ ಮತ್ತು ಅಶೋಕ್ ಕೊಂಚಾಡಿ ಸಹೋದರ ಸಂಬಂಧಿಗಳ ಬಣದ ನಡುವೆ ಸದಾ ಗಲಾಟೆ ನಡೆಯುತ್ತಿದೆ ಎಂದು ಪರಸ್ಪರ ದೂರುಗಳು ಕೇಳಿ ಬಂತು. ಪೊಲೀಸ್ ಕಮಿಷನರ್ ಸಮ್ಮುಖದಲ್ಲಿಯೇ ಎರಡು ಬಣಗಳು ಪರಸ್ಪರ ಏರು ದನಿಯಲ್ಲಿ ಆರೋಪ, ಪ್ರತ್ಯಾರೋಪ ನಡೆಸಿದರು.
'ಪೊಲೀಸ್ ಕಮಿಷನರ್ ಕಚೇರಿಯಲ್ಲಿ ವರ್ಷವಿಡೀ ಎರಡು ಬಣಗಳ ನಡುವಿನ ವೈಯಕ್ತಿಕ ವಿಚಾರಗಳ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಇದರಿಂದ ದಲಿತರ ನಿಜವಾದ ಸಮಸ್ಯೆಗಳು ಬೆಳಕಿಗೆ ಬರುವುದೇ ಇಲ್ಲ. ಪೊಲೀಸ್ ಠಾಣೆಗಳಲ್ಲಿ ಇಂಥ ವಿಚಾರಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕು, ಅದನ್ನು ವಿಜೃಂಬಿಸುವುದು, ವೃಥಾ ಮುಂದುವರಿಸುವುದು ಸರಿ ಅಲ್ಲ. ಅಧಿಕಾರಿಗಳಿಗೆ  ಪೊಲೀಸ್ ಕಮಿಷನರ್ ಸ್ಪಷ್ಟ ಸೂಚನೆ ನೀಡಬೇಕು' ಎಂದು ಜಿನ್ನಪ್ಪ ಬಂಗೇರ ವಿನಂತಿಸಿದರು.
ಯಾವ ಬಾರ್‌ಗೆ?: ಪೊಲೀಸರ ಬಳಿ ಹೋಗಿ ದೂರು ನೀಡಿದರೆ, ನೀವು ಬಾರ್‌ಗೆ ಹೋಗಿ ಎಂದು ದೂಷಿಸುತ್ತಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದರು. ಆಗ ತಕ್ಷಣ ಪೊಲೀಸ್ ಅಧಿಕಾರಿಯತ್ತ ನೋಡಿದ ಕಮಿಷನರ್, ಯಾವ್ ಬಾರ್‌ಗೆ ಎಂದು ಕೇಳಿದರು!
ಡೆತ್‌ನೋಟ್: ಪಕ್ಕದ ಮನೆಯವರು ಸದಾ ಕಾಲ ಕಿರುಕುಳ ನೀಡುತ್ತಾರೆ, ಬಾವಿಗೆ ವಿಷ ಹಾಕುತ್ತಾರೆ, ಬದುಕುವುದೇ ಅಸಹನೀಯವಾಗಿದೆ. ಪೊಲೀಸರು ಸಹಕರಿಸುತ್ತಿಲ್ಲ ಎಂದು ಡಾ.ಉಮೇಶ್ ನಾಯ್ಕ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, 20ಕ್ಕೂ ಹೆಚ್ಚು ಬಾರಿ ದೂರು ನೀಡಿದ್ದಾರೆ. ಪ್ರತಿ ಬಾರಿ ಹೋಗಿ ವಿಚಾರಣೆ ನಡೆಸಿ ಬಂದಿದ್ದೇನೆ. ದೂರುಗಳಿಗೆ ಹಿಂಬರಹ ನೀಡಿದ್ದೇನೆ. ವಿಷ ಹಾಕಲಾಗಿದೆ ಎನ್ನಲಾದ ಬಾವಿ ನೀರನ್ನು ಪರಿಶೀಲಿಸಿದ್ದು, ಅದರಲ್ಲಿ ವಿಷದ ಅಂಶ ಇರಲಿಲ್ಲ. ಪಕ್ಕದ ಮನೆಯವರ ಗೋಡೆ ಮೇಲೆ ಕಲ್ಲು ಕಟ್ಟಿದ್ದಕ್ಕೆ ಅವರೇ ಕಲ್ಲು ತೆಗೆದುಹಾಕಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಅಲ್ಲದೆ ಕಚೇರಿಯಲ್ಲಿ ಕುಳಿತು ದೂರು ನೀಡುತ್ತಾರೆ. ಮನೆಗೆ ಪೊಲೀಸರು ಹೋದರೆ ಅಲ್ಲಿ ಇರುವುದೇ ಇಲ್ಲ. ನಮ್ಮನ್ನು ವಿಚಾರಣೆಗೆ ಕರೆಸಬೇಡಿ ಎನ್ನುತ್ತಾರೆ. ವಿಚಾರಣೆ ಮಾಡದಿದ್ದರೆ ಡೆತ್‌ನೋಟ್ ಬರೆದು ಸಾಯುತ್ತೇನೆ ಎಂದು ಬೆದರಿಸುತ್ತಾರೆ ಎಂದು ಪೊಲೀಸ್ ಅಧಿಕಾರಿ ತಮ್ಮ ಅಳಲು ತೋಡಿಕೊಂಡರು.
ದಲಿತ ವಿದ್ಯಾರ್ಥಿಗಳು ಕೈ ಎತ್ತಿ!: 'ಸ್ಕಾಲರ್ ಶಿಪ್ ನೀಡುವ ಸಂದರ್ಭ ಯಾರೆಲ್ಲ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿದ್ದೀರಿ ಕೈ ಎತ್ತಿ ಎಂದು ಶಾಲೆ, ಕಾಲೇಜ್‌ಗಳಲ್ಲಿ ಶಿಕ್ಷಕರು ತರಗತಿಗಳಲ್ಲಿ ಕೇಳುತ್ತಾರೆ. ನನ್ನ ಮಗ ಕೈ ಎತ್ತಿದ್ದ. ಬಳಿಕ ಗೆಳೆಯರೇ ಆಗಿದ್ದ ಸಹಪಾಠಿಗಳು ಕೆಟ್ಟದಾಗಿ ನಿಂದಿಸಿದ್ದಾರೆ. ಮಗ ಮನೆಗೆ ಬಂದು ಅತ್ತಿದ್ದಾನೆ. ದಯವಿಟ್ಟು ಶಿಕ್ಷಕರು ಇನ್ನು ಮುಂದೆ ತರತಿಗಳಲ್ಲಿ ಬಹಿರಂಗವಾಗಿ ಆ ರೀತಿ ಕೇಳಬಾರದು. ಸ್ಕಾಲರ್‌ಶಿಪ್ ಇತ್ಯಾದಿ ಸೂಚನೆಗಳನ್ನು ನೋಟಿಸ್ ಬೋರ್ಡ್‌ಗಳಲ್ಲಿ ಹಾಕಿ. ಶಾಲೆಗೆ ಹೋಗಿ ನಾವು ಮಕ್ಕಳ ವಿರುದ್ಧ ಜಾತಿ ನಿಂದನೆ ಗಲಾಟೆ ಮಾಡಲು ಸಾಧ್ಯವಿಲ್ಲ. ಮಕ್ಕಳು ಸ್ವಲ್ಪ ಸಮಯದ ಬಳಿಕ ಮತ್ತೆ ಗೆಳೆಯರಾಗುತ್ತಾರೆ. ಆದ್ದರಿಂದ ಪೊಲೀಸ್ ಕಮಿಷನರ್ ಇದನ್ನು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಮುಟ್ಟಿಸಬೇಕು' ಎಂದು ಸಂತ್ರಸ್ತರೊಬ್ಬರು ಸಲಹೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement